ತ್ರಾಸಿ: ತ್ರಾಸಿ – ಗಂಗೊಳ್ಳಿ ಮುಖ್ಯ ರಸ್ತೆಯ ಹೊಂಡ ಮುಚ್ಚುವ ಸಲುವಾಗಿ ಹಾಕಲಾದ ತೇಪೆಯು ಕಳಪೆಯೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಈಗ ಮತ್ತೆ ಹೊಸದಾಗಿ ತೇಪೆ ಕಾಮಗಾರಿ ಕೈಗೊಳ್ಳಲಾಗಿದೆ.
ಲೋಕೋಪಯೋಗಿ ಇಲಾಖೆ ಅಧೀನದ ತ್ರಾಸಿಯಿಂದ ಗಂಗೊಳ್ಳಿ, ಗುಜ್ಜಾಡಿಯಿಂದ ಹಕ್ಲಾಡಿಯ ಭಜನಾ ಮಂದಿರದವರೆಗಿನ ಮುಖ್ಯ ರಸ್ತೆಯ ಅಲ್ಲಲ್ಲಿ ಹೊಂಡ – ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ಸಾರ್ವಜನಿಕರ ಒತ್ತಾಯದಿಂದ ರಸ್ತೆಗಳ ಗುಂಡಿ ಮುಚ್ಚಲು ಲೋಕೋಪಯೋಗಿ ಇಲಾಖೆಯು ಗುತ್ತಿಗೆದಾರರಿಗೆ ಸೂಚಿಸಿತ್ತು. ಆದರೆ ಮೊದಲಿಗೆ ನಡೆದ ತೇಪೆ ಕಾಮಗಾರಿಯು ಕಳಪೆಯಾಗಿದ್ದು, ಈ ಬಗ್ಗೆ ಸಾರ್ವಜನಿಕರು ಆಕ್ಷೇಪವೆತ್ತಿದ್ದರು.
ಗುಜ್ಜಾಡಿ ಪೇಟೆಯಲ್ಲಿನ ರಸ್ತೆಗೆ ತೇಪೆ ಹಾಕಿದ ಒಂದೇ ದಿನದಲ್ಲಿ ಎದ್ದು ಹೋಗಿತ್ತು. ಈ ರೀತಿಯಾಗಿ ಕಳಪೆಯಾಗಿ ಕಾಮಗಾರಿ ಮಾಡುವುದು ಬೇಡ, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಪಂಚಾಯತ್ ನವರು ಗಮನಹರಿಸಬೇಕು ಎಂದು ಗುಜ್ಜಾಡಿ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರಿಗೆ ನಾಗರಿಕರು ಒತ್ತಾಯಿಸಿದ್ದರು. ಈಗ ಮತ್ತೆ ಮರು ತೇಪೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
ಇನ್ನು ಈ ರೀತಿ ಅಲ್ಲಲ್ಲಿ ಅರೆಬರೆ ತೇಪೆ ಹಾಕಿ ದರೆ ಕೆಲವು ದಿನಗಳಲ್ಲಿ ಮತ್ತೆ ಎದ್ದು ಹೋಗಬಹುದು. ಅದರ ಬದಲು ಸಂಪೂರ್ಣ ರಸ್ತೆಗೆ ಮರು ಡಾಮರು ನಡೆದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎನ್ನುವುದು ಜನರ ಅಭಿಪ್ರಾಯ.
ಸುದಿನ ವರದಿ ತ್ರಾಸಿ – ಗಂಗೊಳ್ಳಿ ಮುಖ್ಯ ರಸ್ತೆಯ ಹೊಂಡ- ಗುಂಡಿ ಬಗ್ಗೆ ನ.8 ರಂದು, ಹೊಂಡ ಮುಚ್ಚುವ ತೇಪೆ ಕಾಮಗಾರಿಯು ಕಳಪೆ ಎನ್ನುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರ ಕುರಿತು ನ.12 ರಂದು “ಉದಯವಾಣಿ ಸುದಿನ’ವು ವರದಿ ಪ್ರಕಟಿಸಿತ್ತು.