Advertisement

ವರ್ಷಗಳಿಂದ ನಡೆಯುತ್ತಿಲ್ಲ ಸಾರಿಗೆ ಅದಾಲತ್‌!

11:19 PM Jan 22, 2021 | Team Udayavani |

ಮಹಾನಗರ: ಸರಕಾರಿ ಬಸ್‌ ಕಾರ್ಯಾಚರಣೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪ್ರಯಾಣಿಕರಿಗೆ ಎದುರಾಗುವ ಸಮಸ್ಯೆ, ಬೇಡಿಕೆಗಳ ಈಡೇರಿಕೆಗಾಗಿ ಕಡ್ಡಾಯವಾಗಿ ಪ್ರತಿ ತಿಂಗಳು ಜನ ಸಂಪರ್ಕ ಸಭೆ (ಸಾರಿಗೆ ಅದಾಲತ್‌) ಮಾಡಬೇಕೆಂಬ ರಾಜ್ಯ ರಸ್ತೆ ಸಾರಿಗೆ ನಿಗಮದ ಸೂಚನೆಯಿದೆ. ಆದರೆ ಮಂಗಳೂರಿನ ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಯಾಣಿಕರ ಹಿತದೃಷ್ಟಿಯಿಂದ ಯಾವುದೇ ಸಾರಿಗೆ ಅದಾಲತ್‌ ನಡೆಯುತ್ತಿಲ್ಲ ಎನ್ನುವುದು ವಾಸ್ತವ.

Advertisement

ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿ ಕೆಲವು ವರ್ಷಗಳ ಹಿಂದೆ 2016-17ರಲ್ಲಿ ಅಕ್ಟೋಬರ್‌ ತಿಂಗಳಿನಲ್ಲಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ವಿವೇಕಾನಂದ ಹೆಗ್ಡೆ ಅವರ ನೇತೃತ್ವದಲ್ಲಿ ಸಭೆ ನಡೆದಿತ್ತು. ತಿಂಗಳಿಗೊಮ್ಮೆ ನಿಗಮದಲ್ಲಿ ನಡೆಯುತ್ತಿದ್ದ ಈ ಸಭೆಯಲ್ಲಿ ಪ್ರಯಾಣಿಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು. ಆದರೆ ತಿಂಗಳುಗಳು ಕಳೆದಂತೆ ಸಭೆ ನಡೆಸಲು ಕೆಎಸ್ಸಾರ್ಟಿಸಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮವಾಗಿ ಮಂಗಳೂರು ವಿಭಾಗದಲ್ಲಿ ಸಭೆ ನಡೆಯದೆ ಕೆಲವು ತಿಂಗಳುಗಳೇ ಕಳೆದಿದೆ.

ಅದೇ ರೀತಿ ಸಾರಿಗೆ ಪ್ರಾಧಿಕಾರದ ಸಭೆಯನ್ನು ಕೂಡ ಪ್ರತೀ ತಿಂಗಳ ನಡೆಯಬೇಕು ಎಂಬ ಸೂಚನೆ ಇದೆ. ಆದರೆ ಅನೇಕ ತಿಂಗಳುಗಳಿಂದ ಈ ಸಭೆ ನಡೆದಿರಲಿಲ್ಲ. ಸಾರ್ವಜನಿಕ ಬೇಡಿಕೆಗೆ ಅನುಗುಣವಾಗಿ ಕಳೆದ ತಿಂಗಳು ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು. ಇಲ್ಲಿ ಸಿಟಿ ಬಸ್‌, ಆಟೋ ರಿಕ್ಷಾದವರೆ ಸಮಸ್ಯೆ ಹೇಳಲು ವೇದಿಕೆಯಾಗಿತ್ತು.

ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಅರುಣ್‌ ಕುಮಾರ್‌ ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಕೊರೊನಾ ಕಾರಣದಿಂದಾಗಿ ಕೆಲವು ತಿಂಗಳುಗಳಿಂದ ಕೆಎಸ್ಸಾರ್ಟಿಸಿ ಅದಾಲತ್‌ ನಡೆಯುತ್ತಿಲ್ಲ. ಆದರೆ ಪ್ರಯಾಣಿಕರು ಕಚೇರಿಗೆ ಬಂದು ಅಹವಾಲು ನೀಡುತ್ತಿದ್ದಾರೆ.

ನಿಗಮದ ವತಿಯಿಂದ ಅವರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ವಿಭಾಗದಲ್ಲಿಯೂ ಅದಾಲತ್‌ ನಡೆಸುತ್ತೇವೆ’ ಎಂದು ತಿಳಿಸಿದ್ದಾರೆ.

Advertisement

ಸಮಸ್ಯೆ ಇರ್ತ್ಯಕ್ಕೆ ಅದಾಲತ್‌ ಸಹಕಾರಿ :

ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗ 1982ರ ಅ. 2ರಿಂದ ಪ್ರಾರಂಭವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಭಾಗಶಃ ಮತ್ತು ಉಡುಪಿ ಜಿಲ್ಲೆಯ ಪ್ರದೇಶವು ಆಡಳಿತಕ್ಕೆ ಒಳಪಟ್ಟಿರುತ್ತದೆ. ಒಟ್ಟು 603 ವಾಹನಗಳನ್ನು ಹೊಂದಿದ್ದು, 425 ಅನುಸೂಚಿಗಳಲ್ಲಿ ಪ್ರತೀ ದಿನ 1.57 ಲಕ್ಷ ಕಿ.ಮೀ. ಕಾರ್ಯಾಚರಣೆಗೊಳಿಸುತ್ತದೆ. ಇದೇ ಕಾರಣಕ್ಕೆ ಪ್ರಯಾಣಿಕರಿಗೆ ವಿಭಾಗದ ಮಟ್ಟದಲ್ಲಿ ಬಸ್‌ಗಳಲ್ಲಿನ ನಿರ್ವಹಣೆ, ಬಸ್‌ ಕಾರ್ಯಾಚರಣೆ ಕುರಿತಂತೆ ಸಮಸ್ಯೆಗಳಿರುತ್ತದೆ. ಸ್ಥಳದಲ್ಲೇ ಇದರ ಇತ್ಯರ್ಥಕ್ಕೆ ಅದಾಲತ್‌ ನಡೆಸುವುದರಿಂದ ಸಹಕಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದಲ್ಲಿಯೂ ಪ್ರತೀ ತಿಂಗಳು ಅದಾಲತ್‌ ನಡೆಸಬೇಕು ಎನ್ನುವುದು ಜನಾಭಿಪ್ರಾಯ.

ಕೆಎಸ್ಸಾರ್ಟಿಸಿ ಬಸ್‌ ಸಂಚಾರದ ಬಗ್ಗೆ ಜನರಿರುವ ಸಮಸ್ಯೆ, ಅವರ ಬೇಡಿಕೆಗೆ ವೇದಿಕೆ ರೂಪದಲ್ಲಿ ಕೆಎಸ್ಸಾರ್ಟಿಸಿ ಜನಸಂಪರ್ಕ ಸಭೆ (ಸಾರಿಗೆ ಅದಾಲತ್‌) ನಡೆಯಬೇಕು. ಇನ್ನೇನು ಕೆಲವು ದಿನಗಳಲ್ಲಿ ಕೆಎಸ್ಸಾರ್ಟಿಸಿ ಅಧಿಕಾರಿಗಳ ಸಮಕ್ಷಮದಲ್ಲಿ ನಾನು ಖುದ್ದಾಗಿ ಸಭೆ ಕರೆದು ಪ್ರಯಾಣಿಕರ ಸಮಸ್ಯೆಗಳನ್ನು ಈಡೇರಿಸುವಲ್ಲಿ ಪ್ರಯತ್ನಿಸುತ್ತೇನೆ.ಡಿ. ವೇದವ್ಯಾಸ ಕಾಮತ್‌, ಶಾಸಕರು

 

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next