ಬಂಗಾರಪೇಟೆ: ತಾಲೂಕಿನಲ್ಲಿ ರೈತರ ಕೃಷಿ ಕಾರ್ಯಕ್ಕೆ ನಕಲಿ ಕೃಷಿ ಸಾಮಗ್ರಿಗಳನ್ನು ಸಾಗಣೆ ಮಾಡುತ್ತಿದ್ದ 13 ಲಕ್ಷ ಬೆಲೆ ಬಾಳುವ ಲಾರಿ ಸಮೇತ ಸರಕುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಮಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡುವ ಸಮಯದಲ್ಲಿ ನಕಲಿ ಕೃಷಿ ಸಾಮಗ್ರಿಗಳ ಮಾರಾಟದ ಜಾಲ ನಾಯಿಕೊಡೆಗಳಂತೆ ಎದ್ದೇ ಳುತ್ತಿರುವುದು ಆತಂಕವನ್ನುಂಟು ಮಾಡಿದೆ. ರೈತರಿಗೆ ಗುಣಮಟ್ಟದ ಸಾಮಗ್ರಿ ನೀಡುವ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿಸಿದ ಉದ್ಯಮಿದಾರರಾದ ಎಸ್.ವಿ.ಕಿಶೋರ್ ಎಂಬುವರು ಎಸ್.ವಿ.ಎಂಟರ್ ಪ್ರೈಸಸ್ ಹೆಸರಿನಲ್ಲಿ ಕ್ಯಾಮೆಲ್ ಬ್ರಾಂಡನ್ನು ರಿಜಿಸ್ಟರ್ ಮಾಡಿಸಿದ್ದು, ಗುಣ ಮಟ್ಟದ ಸಾಮಗ್ರಿ ಮಾರಾಟ ಮಾಡುತ್ತಿದ್ದರು. ಆದರೆ, ಬಂಗಾರಪೇಟೆ ಎಪಿಎಂಸಿ ಯಾರ್ಡ್, ಮಸೀದಿ ರಸ್ತೆಯಲ್ಲಿರುವ ಮಧು ಟ್ರೇಡರ್ ಅವರು ಬ್ರ್ಯಾಂಡನ್ನು ನಕಲು ಮಾಡಿ, ಕಳಪೆ ಸಾಮಗ್ರಿಗಳನ್ನು ನಿಗದಿತ ಬೆಲೆಗಿಂತ ಕಡಿಮೆ ಬೆಲೆಗೆ ಹಲವು ತಿಂಗಳಿಂದ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಇದರಿಂದ ಎಸ್.ವಿ. ಕಿಶೋರ್ ಉದ್ಯಮಕ್ಕೆ ನಷ್ಟ ಉಂಟಾಗಿರುವುದರ ಜೊತೆಗೆ ರೈತರ ಜೀವನದ ಜೊತೆ ಮಧು ಟ್ರೇಡರ್ ಚೆಲ್ಲಾಟವಾಡುತ್ತಿದೆ. ಇದನ್ನು ಗಮನಿಸಿದ ಮಾಲೀಕ ಕಿಶೋರ್, ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸ್ ಇಲಾಖೆಯು ಅಕ್ರಮವಾಗಿ ಕಳಪೆ ಕೃಷಿ ಸಾಮಗ್ರಿ ಸಾಗಿಸುತ್ತಿದ್ದ ಮಧು ಟ್ರೇಡರ್ನ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಯನ್ನು ಬಂಧಿಸಿ ಸೂಕ್ತ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳುವಂತೆ ಎಂಟರ್‌ಪ್ರೈಸಸ್ ಮಾಲೀಕ ಕಿಶೋರ್ ಆಗ್ರಹಿಸಿದರು.
ಮಧು ಟ್ರೇಡರ್ ಹಾಗೂ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಲಾರಿ ಮಾಲೀಕರ ವಿರುದ್ಧ ದೂರು ದಾಖಲಿಸಿರುವ ಪೊಲೀಸರು, ಕ್ರಮ ಕೈಗೊಂಡಿದ್ದಾರೆ.