ಕಲಘಟಗಿ: ತಾಲೂಕಿನ ಮಸಳಿಕಟ್ಟಿ, ಸಚ್ಚಿದಾನಂದನಗರ ಹಾಗೂ ಸೂಳಿಕಟ್ಟಿ ಗ್ರಾಮಗಳಿಂದ ಬೆಳಗಿನ ಸಮಯದಲ್ಲಿ
ವಿದ್ಯಾರ್ಥಿಗಳಿಗೆ ತೆರಳಲು ರಾಜ್ಯ ರಸ್ತೆಸಾರಿಗೆ ಸಂಸ್ಥೆ ಬಸ್ ಸೌಕರ್ಯವನ್ನು ಜು. 16ರಿಂದ ಕಲ್ಪಿಸಲಾಗುವುದು
ಎಂದು ಘಟಕ ವ್ಯವಸ್ಥಾಪಕ ಜೆ.ಎಸ್. ದಿವಾಕರ ಅವರು ಸಿಪಿಐ ವಿಜಯ ಬಿರಾದಾರ ಸಮ್ಮುಖದಲ್ಲಿ ಸಾರ್ವಜನಿಕರಿಗೆ ಭರವಸೆ ನೀಡಿದರು.
ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಬಸ್ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಈ ಮೊದಲೇ ಮನವಿ ಸಲ್ಲಿಸಿ, ಸೋಮವಾರದಂದು ಬಸ್ ನಿಲ್ದಾಣದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದರು. ಪ್ರತಿಭಟನೆಗೆ ಮುಂದಾಗದಂತೆ ಮಧ್ಯಸ್ಥಿಕೆ ವಹಿಸಿದ ಸಿಪಿಐ ವಿಜಯ ಬಿರಾದಾರ, ಇಲ್ಲಿನ ಪೊಲೀಸ್ ಠಾಣೆಯಲ್ಲಿಯೇ ಗ್ರಾಮಸ್ಥರ ಮತ್ತು ಸಾರಿಗೆ ಸಂಸ್ಥೆ ಅಧಿಕಾರಿಗಳ ಸಂಧಾನ ಸಭೆ ನಡೆಸಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾದರು.
ಮೂರೂ ಗ್ರಾಮಗಳಿಂದ ಪ್ರತಿನಿತ್ಯ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬೆಳಗಿನ ಸಮಯದಲ್ಲಿ ಬೇರೆಡೆಗೆ ಹೋಗಲು ಸುಮಾರು ಐದು ಕಿಮೀ ನಡೆದುಕೊಂಡು ಹೋಗಬೇಕಾಗಿದೆ. 150ಕ್ಕೂ ಮಿಕ್ಕಿದ ವಿದ್ಯಾರ್ಥಿಗಳು ಸಂಗಮೇಶ್ವರ, ಕಲಘಟಗಿ ಪಟ್ಟಣ, ಹಳಿಯಾಳ, ಮುರ್ಕವಾಡ, ಹುಬ್ಬಳ್ಳಿ ಮತ್ತು ಧಾರವಾಡದ ಶಾಲಾ – ಕಾಲೇಜುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಬೆಳಗಿನ 8 ಗಂಟೆ ಸಮಯಕ್ಕೆ ಬಸ್ ಸೌಲಭ್ಯ ಒದಗಿಸುವುದರಿಂದ ಗ್ರಾಮಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಬೆಳಗಿನ ಸಮಯದಲ್ಲಿ ಬಸ್ ವ್ಯವಸ್ಥೆ ಕಲ್ಪಿಸಲೇಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ರಸ್ತೆ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕ ಜೆ.ಎಸ್. ದಿವಾಕರ ಹಾಗೂ ಸಹಾಯಕ ಸಂಚಾರ ಅ ಧೀಕ್ಷಕ ಎಸ್.ಎಲ್. ನಾಗಾವಿ ಮಾತನಾಡಿ, 10 ಗಂಟೆಯ ಬಸ್‌ನ್ನು ರದ್ದುಗೊಳಿಸಿ ಬೆಳಗ್ಗೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದಾಗ ಅದಕ್ಕೆ ಗ್ರಾಮಸ್ಥರು ಒಪ್ಪಲಿಲ್ಲ. ನಂತರ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಬೆಳಗಿನ ಸಮಯದಲ್ಲಿ ಬಸ್ ಸೌಕರ್ಯ ಒದಗಿಸುವ ಭರವಸೆ ನೀಡಿದರು.
ಪಿಎಸ್‌ಐ ಆನಂದ ದೊಣಿ, ಬಿಜೆಪಿ ಮುಖಂಡ ಸದಾನಂದ ಚಿಂತಾಮಣಿ, ಫಕ್ಕಿರೇಶ ನೆಸ್ರೇಕರ, ರೈತ ಮುಖಂಡ ಉಳವಪ್ಪ ಬಳಿಗೇರ, ಇಮಾಮ್ ಸಾಬ್ ನಾಯ್ಕರ, ಬಲವಂತ ಗೆವಡೆ, ಮಹಾಂತೇಶ ಮಿರಾಶಿ, ಗ್ರಾಪಂ ಸದಸ್ಯ ಸಂಜು ಪಾಟೀಲ, ನಾಗೇಂದ್ರ ಹೊನ್ನಾಳಕರ, ಸುರೇಶ ಪೀಳೂಕರ, ಮಂಜುನಾಥ ಪಾಟೀಲ, ಅರ್ಜುನ ಪಾಟೀಲ, ಮಲ್ಲಯ್ಯ ಕರಡಿಮಠ, ಸಿದ್ದಪ್ಪ ತಿರ್ಲಾಪುರ, ಯಲ್ಲಪ್ಪ ದುಶ್ಕೇಕರ, ಗುರುಸಿದ್ಧಗೌಡ ಭರಮಗೌಡ್ರ ಉಪಸ್ಥಿತರಿದ್ದರು.