Advertisement

ವೇತನಕ್ಕಾಗಿ ಸರಕಾರದತ್ತ ಸಾರಿಗೆ ಸಂಸ್ಥೆಗಳ ಚಿತ್ತ

12:21 PM Oct 31, 2020 | Suhan S |

ಹುಬ್ಬಳ್ಳಿ: ರಾಜ್ಯದ ಸಾರಿಗೆ ಸಂಸ್ಥೆಗಳು ನಿರೀಕ್ಷಿತ ಸಾರಿಗೆ ಆದಾಯ ಕಾಣದ ಹಿನ್ನೆಲೆಯಲ್ಲಿ ಅಕ್ಟೋಬರ್‌ ಹಾಗೂ ನಂತರದ ವೇತನಕ್ಕೂ ಸರಕಾರದತ್ತ ಮುಖ ಮಾಡಿದ್ದು, ತಿಂಗಳು ಮುಗಿಯುತ್ತಿದ್ದರೂ ಅನುದಾನ ನೀಡುವ ಕುರಿತು ಸರಕಾರದಿಂದ ಯಾವುದೇ ಸಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗಿಲ್ಲ. ಹೀಗಾಗಿ ವೇತನ ಆಗುತ್ತಾ ಹೇಗೆ ಎನ್ನುವ ಆತಂಕ ಸಾರಿಗೆ ನೌಕರರಲ್ಲಿ ಮನೆ ಮಾಡಿದೆ.

Advertisement

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಿಂದ ನಿತ್ಯಶೇ.75-80 ಅನುಸೂಚಿಗಳು ಕಾರ್ಯಾಚರಣೆ ಮಾಡುತ್ತಿವೆ. ಆದರೆ ಸಾರಿಗೆ ಆದಾಯ ಶೇ.50 ಮೀರುತ್ತಿಲ್ಲ. ಬರುತ್ತಿರುವ ಸಾರಿಗೆ ಆದಾಯ ಡಿಸೇಲ್‌, ಬಸ್‌ಗಳ ನಿರ್ವಹಣೆ, ಒಂದಿಷ್ಟು ಬಿಡಿಭಾಗ ಹಾಗೂ ಸಾಲ ಮರುಪಾವತಿಗೆ ಸಾಲುತ್ತಿಲ್ಲ. ಹೀಗಾಗಿ ಸಂಸ್ಥೆಗಳ ಪ್ರಮುಖ ವೆಚ್ಚಗಳಲ್ಲಿಬಹು ದೊಡ್ಡದಾದ ಮಾಸಿಕ ವೇತನಕ್ಕೆ ಕಷ್ಟವಾಗಿದ್ದು, ಹಿಂದಿನಂತೆ ಅಕ್ಟೋಬರ್‌ ತಿಂಗಳಿಂದ ಹಿಡಿದು ಮುಂದಿನ ಮೂರು ತಿಂಗಳ ವೇತನ ಪಾವತಿಸಲು ನಾಲ್ಕು ನಿಗಮಗಳಲ್ಲಿ ಹಣವಿಲ್ಲದಂತಾಗಿದೆ.

ಸರಕಾರದ ನೆರವು: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೀಡಾದ ಪರಿಣಾಮ ಮುಂದೆ ವಿತರಿಸುವ ವಿದ್ಯಾರ್ಥಿ ರಿಯಾಯಿತಿ ಪಾಸ್‌ ಹಣವನ್ನು ಮುಂಗಡ ರೂಪದಲ್ಲಿ ಸರಕಾರ ಏಪ್ರಿಲ್‌ ತಿಂಗಳಿಂದ ಸೆಪ್ಟಂಬರ್‌ವರೆಗೆ 1275 ಕೋಟಿ ರೂ. ಭರಿಸಿದೆ. ಏಪ್ರಿಲ್‌, ಮೇ, ಜೂನ್‌ ತಿಂಗಳಲ್ಲಿ ಶೇ.100 ಅನುದಾನ ನೀಡಿದ್ದು, ನಂತರ ಜುಲೈ, ಆಗಸ್ಟ್‌ , ಸೆಪ್ಟಂಬರ್‌ ತಿಂಗಳಲ್ಲಿ ಒಂದಿಷ್ಟು ಬಸ್‌ಗಳು ಕಾರ್ಯಾಚರಣೆಗೊಳ್ಳುತ್ತಿವೆ ಎನ್ನುವ ಕಾರಣಕ್ಕೆ ಶೇ.75 ಅನುದಾನ ನೀಡುವ ಮೂಲಕ ಸಾರಿಗೆ ಸಂಸ್ಥೆಗಳು ಉಸಿರಾಡುವಂತೆ ಮಾಡಿತ್ತು. ನೌಕರರಲ್ಲಿ ಆತಂಕ: ಅಕ್ಟೋಬರ್‌ ತಿಂಗಳು ಮುಗಿಯುತ್ತಿದ್ದರೂ ನಾಲ್ಕು ಸಂಸ್ಥೆಗಳು ತಮ್ಮ ನೌಕರರಿಗೆ ವೇತನ ನೀಡುವಷ್ಟು ಆರ್ಥಿಕವಾಗಿ ಗಟ್ಟಿಯಾಗಿಲ್ಲ. ಈ ಹಿಂದೆ ಎರಡು ಬಾರಿ ಅನುದಾನ ನೀಡಿದ್ದ ಸರಕಾರ ಈ ಬಾರಿ ಸಾರಿಗೆ ನೌಕರರ ವೇತನ ಕುರಿತು ಚಕಾರ ಎತ್ತದಿರುವುದು ನೌಕರರಲ್ಲಿ ಆತಂಕ ಮೂಡಿಸಿದೆ.

ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರ ಕಾಳಜಿಯಿಂದ ಆರು ತಿಂಗಳ ವೇತನ ದೊರೆತಿದ್ದು, ಸಾರಿಗೆ ಆದಾಯ ಚೇತರಿಸಿಕೊಳ್ಳದ ಕಾರಣ ಸರಕಾರವೇ ಮುಂದಿನ ಮೂರು ತಿಂಗಳ ಕಾಲ ವೇತನಕ್ಕೆ ನೆರವು ನೀಡಬೇಕೆಂದು ನಾಲ್ಕೂ ನಿಗಮಗಳು ಸರಕಾರಕ್ಕೆ ಮನವಿ ಮಾಡಿವೆ. ಸದ್ಯದ ಪರಿಸ್ಥಿತಿಯಲ್ಲಿ ಶೇ.75 ವೇತನಕ್ಕೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದ್ದು, ಮೂರು ತಿಂಗಳಿಗೆ ನಾಲ್ಕು ಸಾರಿಗೆ ಬೇಕಾಗುವ ಸುಮಾರು 850 ಕೋಟಿ ರೂ. ನೆರವು ಕೊಡಬೇಕಿದೆ. ಹಣಕಾಸು ಇಲಾಖೆಯಲ್ಲಿ ಕಡತವಿದ್ದು, ಮುಖ್ಯಮಂತ್ರಿಗಳು ಮನಸ್ಸು  ಮಾಡಿದರೆ ಮಾತ್ರ ಸಾರಿಗೆ ನೌಕರರಿಗೆ ವೇತನ ಎನ್ನುವಂತಾಗಿದೆ.

ಸರಕಾರದ ಸುತ್ತೋಲೆ ಪ್ರಕಾರ ಕಾರ್ಮಿಕ ಓಟಿ, ಅಧಿಕಾರಿಗಳ ವಿಶೇಷ ಭತ್ಯೆಗಳನ್ನು ಕಡಿತ ಮಾಡುತ್ತಿದ್ದು, ನಾಲ್ಕು ನಿಗಮಗಳಿಗೆ ಸುಮಾರು 24-26 ಕೋಟಿ ರೂ. ಪ್ರತಿ ತಿಂಗಳ ಹೊರೆ ಕಡಿಮೆಯಾಗಿದೆ. ಎಲ್ಲಾ ಅನುಸೂಚಿಗಳು ಕಾರ್ಯಚರಣೆಗೊಳ್ಳದ ಹಿನ್ನೆಲೆಯಲ್ಲಿ ನಾಲ್ಕು ಸಾರಿಗೆ ನಿಗಮಗಳ ನಿತ್ಯದ ಖರ್ಚು ಸುಮಾರು ಕೊಂಚ ತಗ್ಗಿದೆಯಾದರೂ ಖರ್ಚಿನಷ್ಟು ಸಾರಿಗೆ ಅದಾಯ ಬಾರದಿರುವುದರಿಂದ ನಷ್ಟಕ್ಕೆ ಕಾರಣವಾಗುತ್ತಿದೆ. ಪ್ರಮುಖವಾಗಿ ನಾಲ್ಕು ನಿಗಮಗಳಿಗೆ ಅಂತಾರಾಜ್ಯ ಸಾರಿಗೆ ಸೇವೆ ನಿರೀಕ್ಷಿತ ಮಟ್ಟಿಗೆ ಯಶಸ್ವಿಗೊಳ್ಳದಿರುವುದು ಸಾರಿಗೆ ಆದಾಯದಲ್ಲಿ ಹೆಚ್ಚಿನ ಪ್ರಮಾಣ ಖೋತಾ ಆಗಲು ಕಾರಣವಾಗಿದೆ.

Advertisement

ಸದ್ಯದ ಪರಿಸ್ಥಿತಿಯಲ್ಲಿ ಸಾರಿಗೆ ಆದಾಯ ಶೇ.50 ಬರುತ್ತಿಲ್ಲ. ಬರುವ ಆದಾಯದಲ್ಲಿಡಿಸೇಲ್‌, ಇನ್ನಿತರೆ ಖರ್ಚಿಗೆ ಸಾಲುತ್ತಿಲ್ಲ. ಹೀಗಾಗಿ ವೇತನಕ್ಕಾಗಿ ಸಾರಿಗೆ ಸಚಿವರ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರ ವೇತನಕ್ಕಾಗಿ ಅನುದಾನ ನೀಡುವ ಭರವಸೆಯಿದೆ. – ವಿ.ಎಸ್‌.ಪಾಟೀಲ, ಅಧ್ಯಕ್ಷರು, ವಾಕರಸಾಸಂ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next