ಹಾಸನ: ಲೋಕಸಭಾ ಚುನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಸೂಚನೆಯಂತೆ ಲೋಕಸಭಾ ಚುನಾವಣೆಗೆ ಬಳಕೆಯಾಗುವ ವಿದ್ಯುನ್ಮಾನ ಮತಯಂತ್ರಗಳ ಹಾಗೂ ವಿ.ವಿ. ಪ್ಯಾಟ್‌ಗಳ ಮೊದಲ ಹಂತದ ರ್‍ಯಾಂಡಮೈಜೇಷನ್ ಪ್ರಕ್ರಿಯೆ ನಡೆದಿದೆ.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂಪಾಷಾ ಅವರ ಅಧ್ಯಕ್ಷತೆಯಲ್ಲಿ ರ್‍ಯಾಂಡಮೈಜೇಷನ್ ಪ್ರಕ್ರಿಯೆ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಲಾಯಿತು. ಅವರ ಸಮ್ಮುಖದಲ್ಲಿ ಕಂಪ್ಯೂಟರ್ ಮೂಲಕ ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಹಾಗೂ ವಿ.ವಿ.ಪ್ಯಾಟ್‌ಗಳ ವಿಧಾನಸಭಾ ಕ್ಷೇತ್ರವಾರು ಹಂಚಿಕೆ ನಿಗದಿಪಡಿಸಲಾಯಿತು.
ಗಣಕೀಕೃತ ರ್‍ಯಾಂಡಮೈಜೇಷನ್ ಪ್ರಕ್ರಿಯೆ ಅನುಸಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಗಳನ್ನು ತೆಗೆದು ವಿಧಾನಸಭಾ ಕ್ಷೇತ್ರವಾರು ಮತಯಂತ್ರಗಳನ್ನು ಹಂಚಿಕೆ ಮಾಡಿ ರವಾನಿಸಲಾಯಿತು.
ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ತಹಶೀಲ್ದಾರ್ ಶ್ರೀನಿವಾಸಯ್ಯ, ನೋಡಲ್ ಅಧಿಕಾರಿ ಕೃಷ್ಣಮೂರ್ತಿ, ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಧಾನ ಸಭಾವಾರು ಹಂಚಿಕೆಯಾದ ಮತಯಂತ್ರಗಳನ್ನು ಆಯಾಯ ತಾಲೂಕುಗಳಲ್ಲಿ ಸ್ಟ್ರಾಂಗ್ ರೂಂ (ಭದ್ರತಾ ಕೊಠಡಿ) ತೆರೆದು ಜೋಪಾನವಾಗಿರಿಸಲಾಗುವುದು. ಮಾ.31ರೊಳಗೆ ಚುನಾವಣಾ ವೀಕ್ಷಕರ ಉಪಸ್ಥಿತಿಯಲ್ಲಿ 2ನೇ ಹಂತದ ರ್‍ಯಾಂಡಮೈಜೇಷನ್ ನಡೆಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಯವರು ತಿಳಿಸಿದ್ದಾರೆ.