Advertisement

ತೃತೀಯ ಲಿಂಗಿಗೆ ಸ್ತನ್ಯಪಾನ ಭಾಗ್ಯ

07:30 AM Feb 16, 2018 | Harsha Rao |

ನ್ಯೂಯಾರ್ಕ್‌: ಇದು ವೈದ್ಯಕೀಯ ಲೋಕದ ಪವಾಡವೆಂದರೂ ಸರಿ. ನ್ಯೂಯಾರ್ಕ್‌ನ ಮೌಂಟ್‌ ಸಿನಾಯ್‌ ಆಸ್ಪತ್ರೆಯ ವೈದ್ಯರು, ವಿಶ್ವದಲ್ಲೇ ಇದೇ ಮೊದಲ ಬಾರಿಗೆ, ತೃತೀಯ ಲಿಂಗಿಯೊಬ್ಬರಿಗೆ ನವಜಾತ ಶಿಶುವಿಗೆ ಸ್ತನ್ಯಪಾನ ನೀಡುವ ಅರ್ಹತೆಯನ್ನು ತಂದುಕೊಟ್ಟಿದ್ದಾರೆ. 

Advertisement

ಇತ್ತೀಚೆಗೆ, ಆಸ್ಪತ್ರೆಗೆ ಭೇಟಿ ನೀಡಿದ್ದ ತೃತೀಯ ಲಿಂಗಿಯೊಬ್ಬರು ತನ್ನ ಗರ್ಭಿಣಿ ಮಹಿಳಾ ಸಂಗಾತಿಯು ಮಗುವಿನ ಜನನ ನೀಡಿದ ನಂತರ, ಹಾಲುಣಿಸಲು ಇಷ್ಟಪಡುತ್ತಿಲ್ಲ ಎಂದು ತಿಳಿಸಿದ್ದರಲ್ಲದೆ, ತನಗೆ ಹಾಲುಣಿಸುವ ಅನುಕೂಲ ಕಲ್ಪಿಸಬೇಕೆಂದು ಕೋರಿದ್ದರು. ತಮ್ಮ ಉದ್ದೇಶ ಸಾಧನೆಗಾಗಿ ಸುಮಾರು 6 ವರ್ಷಗಳ ಕಾಲ ತೃತೀಯ ಲಿಂಗಿಯು ಹಾರ್ಮೋನ್‌ ಚಿಕಿತ್ಸೆ ಪಡೆದಿದ್ದರೂ, ಆ ಚಿಕಿತ್ಸೆ ಆಕೆಯನ್ನು ಪರಿಪೂರ್ಣ ಮಹಿಳೆಯಂತೆ ತಯಾರು ಮಾಡಿತ್ತೇ ಹೊರತು, ಹಾಲುಣಿಸುವ ಸಾಮರ್ಥ್ಯ ತಂದುಕೊಟ್ಟಿರಲಿಲ್ಲ ಎಂಬುದನ್ನೂ ವೈದ್ಯರಿಗೆ ಆ ದಂಪತಿ ತಿಳಿಸಿದರು. 

ಈ ಸವಾಲನ್ನು ಸ್ವೀಕರಿಸಿದ ಆಸ್ಪತ್ರೆಯ ಎಂಡೋಕ್ರೈನ್‌ ವೈದ್ಯರಾದ ರೈಸ್‌ಮನ್‌ ಮತ್ತು ಝಿಲ್‌ ಗೋಲ್ಡ್‌ಸ್ಟೇನ್‌, ನಿಗದಿತ ಕಾಲಘಟ್ಟದಲ್ಲಿ ಈ ಸಮಸ್ಯೆ ಬಗೆಹರಿಸಲು ಪಣ ತೊಟ್ಟರು. ಅವರು ನೀಡಿದ ವಿಶೇಷ ಚಿಕಿತ್ಸೆಯಿಂದಾಗಿ, ಪ್ರೊಗೆಸ್ಟರಾನ್‌ ಹಾಗೂ ಎಸ್ಟ್ರಾಡಿಯೋಲ್‌ ಎಂಬ ಎರಡು ಹಾರ್ಮೋನ್‌ಗಳನ್ನು ತೃತೀಯ ಲಿಂಗಿಯ ದೇಹದಲ್ಲಿ ನಿಗದಿತ ಪ್ರಮಾಣದಲ್ಲಿ ಸೇರಿಸುತ್ತಾ ಬರಲಾಯಿತು. ಇದರಿಂದ, ಆಕೆಯ ಎದೆಯಲ್ಲಿನ ಹಾಲುಣಿಸುವ ಗ್ರಂಥಿಗಳು ಉದ್ದೀಪನಗೊಂಡು, ಹಾಲು ಸ್ರವಿಸುವ ಶಕ್ತಿ ಪಡೆದುಕೊಂಡವು.  

ಆನಂತರ, ಡೊಮ್‌ಪೆರಿಡೊನ್‌ ಎಂಬ ಔಷಧದ ಪ್ರಯೋಗದಿಂದ, ಆಕೆಯ ಸ್ತನಗಳಲ್ಲಿ ಹಾಲಿನ ಉತ್ಪತ್ತಿಯಾಗುವ ಸಾಮರ್ಥ್ಯವನ್ನು ತಂದುಕೊಡಲಾಯಿತು. ಇದೆಲ್ಲದರ ಪರಿಣಾಮವಾಗಿ, ಆ ತೃತೀಯ ಲಿಂಗಿಯೀಗ ತನ್ನ ಸಂಗಾತಿಯ ಮಗುವಿಗೆ ಹಾಲುಣಿಸುತ್ತಿದ್ದು, ಬಾಣಂತಿ, ತೃತೀಯ ಲಿಂಗಿ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next