ನೈನಿತಾಲ್ : ಲಿಂಗ ಪರಿವರ್ತನೆ ಮಾಡಿಸಿಕೊಂಡ ಮಹಿಳೆಯ ಪರಿವರ್ತಿತ ಲಿಂಗವನ್ನು ಒಪ್ಪಿಕೊಳ್ಳಲು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ತ್ರೀತ್ವದ ತನ್ನ ಹಕ್ಕನ್ನು ಆಗ್ರಹಿಸಿ ಆ ಮಹಿಳೆಯು ಉತ್ತರಾಖಂಡ ಹೈಕೋರ್ಟ್ ಮೆಟ್ಟಲೇಲಿರುವ ಘಟನೆ ವರದಿಯಾಗಿದೆ.
ಅಂತೆಯೇ ಕಾನೂನು ಪ್ರಕಾರ ಲಿಂಗಾಂತರಿತ ಮಹಿಳೆಯ ನೆರವಿಗೆ ಬಂದಿರುವ ಹೈಕೋರ್ಟ್, ರಾಜ್ಯ ಪೊಲೀಸರ ಈ ವರ್ತನೆಗೆ ಕಾರಣವೇನೆಂದು ತಿಳಿಸುವಂತೆ ಆದೇಶಿಸಿದೆ.
ಕೋಟದ್ವಾರದ ಪುರುಷನೊಬ್ಬನನ್ನು ತಾನು ಪ್ರೀತಿಸುತ್ತಿದ್ದು ಆತನನ್ನು ಮದುವೆಯಾಗಲು ತಾನು ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾಗಿ ಮಹಿಳೆಯು ತನ್ನ ದೂರಿನಲ್ಲಿ ಹೇಳಿದ್ದಾಳೆ.
ಆದರೆ ತಮ್ಮ ಎಂಗೇಜ್‌ಮೆಂಟ್ ನಡೆದ ಬಳಿಕ ತನ್ನನ್ನು ಕೋಟದ್ವಾರಕ್ಕೆ ಕರೆಸಿಕೊಂಡ ತನ್ನ ಭಾವೀ ಪತಿ ತನ್ನನ್ನು ಅಲ್ಲಿ ರೇಪ್ ಮಾಡಿದನೆಂದು ಮಹಿಳೆ ಆರೋಪಿಸಿದ್ದಾಳೆ.
ತನ್ನ ಮೇಲಿನ ಅತ್ಯಾಚಾರದ ಬಗ್ಗೆ ದೂರು ಕೊಡಲು ಮಹಿಳೆ ಪೊಲೀಸ್ ಠಾಣೆಗೆ ಹೋಗಿದ್ದಾಗ ಅಲ್ಲಿನ ಪೊಲೀಸರು ಐಪಿಸಿ ಸೆ.376ರಡಿ (ರೇಪ್) ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಲ್ಲದೆ ಸೆ.377ರಡಿ (ಅನೈಸರ್ಗಿಕ ಅಪರಾಧ) ಕೇಸು ದಾಖಲಿಸಿಕೊಂಡಿದ್ದರು.
ಇದನ್ನು ಪ್ರಶ್ನಿಸಿ ಮಹಿಳೆಯು ಹೈಕೋರ್ಟ್ ಮೆಟ್ಟಲೇರಿ ತನಗೆ ಸ್ತ್ರೀತ್ವದ ಸಂಪೂರ್ಣ ಹಕ್ಕು ಇರುವುದರಿಂದ ತನ್ನ ಎಫ್ಐಆರ್ ಅನ್ನು ಸೆ.377ರಿಂದ ಬದಲಾಯಿಸಿ ಸೆ.377ಕ್ಕೆ ಬದಲಾಯಿಸುವಂತೆ ಪೊಲೀಸರಿಗೆ ಸೂಕ್ತ ನಿರ್ದೇಶ ನೀಡವಂತೆ ಕೋರಿದ್ದಳು.
ಮಹಿಳೆಯ ದೂರನ್ನು ಆಲಿಸಿದ ಜಸ್ಟಿಸ್ ಲೋಕಪಾಲ್ ಸಿಂಗ್ ಅವರು ನಾಲ್ಕು ವಾರಗಳ ಒಳಗೆ ಉತ್ತರಿಸುವಂತೆ ರಾಜ್ಯ ಸರಕಾರಕ್ಕೆ ಆದೇಶ ಹೊರಡಿಸಿದರು.