ಲಾತೂರ್: ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬದ ಯುವತಿಯ ಮದುವೆಯನ್ನು ಲಾತೂರ್ ಜಿಲ್ಲೆಯ ಮಂಗಳಮುಖಿಯರು ತಮ್ಮ ಮುಂದಾಳತ್ವದಲ್ಲಿ ನಡೆಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಕೆಲವು ಮಂಗಳಮುಖಿಯರು ಸೇರಿ ಮದುವೆ ಮತ್ತು ಕನ್ಯಾದಾನ ಮಾಡಿದ್ದಾರೆ. ಮದುವೆಯ ಎಲ್ಲ ಖರ್ಚು-ವೆಚ್ಚಗಳನ್ನು ಭರಿಸಿಕೊಂಡು ಅತ್ಯಂತ ಅದ್ದೂರಿಯಾಗಿ ಮದುವೆ ಸಮಾರಂಭ ಮಾಡಿದ್ದಾರೆ.
ಕವಾಲೆ ಕುಟುಂಬವು ಲಾತೂರ್ ಮಾತಾಜಿ ನಗರ ಪ್ರದೇಶದಲ್ಲಿ ವಾಸಿಸುತ್ತಿದೆ. ಅವರ ಪುತ್ರಿ ಪೂಜಾಗೆ ವಿವಾಹ ನಿರ್ಧರಿಸಲಾಯಿತು. ತಾಯಿ ಅಡುಗೆ ಕೆಲಸಕ್ಕೆ ಹೋಗುತ್ತಾರೆ ಮತ್ತು ತಂದೆ ದಿನಕೂಲಿ ಕೆಲಸಗಳನ್ನು ಮಾಡುವುದರಿಂದ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಈ ವಿಷಯ ಇದೇ ಪರಿಸರದ ಮಂಗಳಮುಖಿ ಪ್ರಿಯಾ ಲಾತೂರ್ಕರ್ ಅವರಿಗೆ ತಿಳಿದು ತಮ್ಮ ಸಹವರ್ತಿಗಳಿಗೆ ಈ ವಿಷಯವನ್ನು ಹೇಳಿದರು.
ಅದರಂತೆ ಎಲ್ಲ ಮಂಗಳಮುಖಿಯರು ಒಟ್ಟಾಗಿ ಸೇರಿ ಮದುವೆಯನ್ನು ಅದ್ದೂರಿಯಾಗಿ ಮಾಡಲು ನಿರ್ಧರಿಸಲಾಯಿತು. ಮದುವೆಗೆ ಬೇಕಾದ ವಿವಿಧ ಸಾಮಗ್ರಿಗಳ ಸಹಿತ ಸೀರೆ, ಚಿನ್ನವನ್ನು ಖರೀದಿಸಿದ ಮಂಗಳಮುಖೀಯರು ಯುವತಿಯ ಮದುವೆಯನ್ನು ಅದ್ದೂರಿಯಾಗಿ ನೇರವೇರಿಸಿದರು.