Advertisement

ಕೆಟ್ಟುನಿಂತ ಟ್ರಾನ್ಸ್ ಫಾರ್ಮರ್‌: ಕಗ್ಗತ್ತಲಲ್ಲಿ ಆಸ್ಪತ್ರೆ

02:16 PM Apr 06, 2022 | Team Udayavani |

ಎಚ್‌.ಡಿ.ಕೋಟೆ: ಟ್ರಾನ್ಸ್‌ಫಾರ್ಮರ್‌ ಕೆಟ್ಟುಹೋಗಿ ದುರಸ್ತಿಗೊಳಿಸದ ಕಾರಣ, ಎರಡು ದಿನಗಳಿಂದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಗ್ಗತ್ತಲು ಆವರಿಸಿದ್ದು, ರೋಗಿಗಳು ಪರದಾಡುವಂತಾಗಿದೆ. ಸೋಮವಾರ ರಾತ್ರಿ ಹೆರಿಗೆಗೆ ಆಗಮಿಸಿದ ಮೂವರು ಗರ್ಭಿಣಿರನ್ನು ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗದೇ ಖಾಸಗಿ ಆಸ್ಪತ್ರೆ ಕಳುಹಿಸಿದ ಘಟನೆ ನಡೆದಿದೆ.

Advertisement

ಈಗ ಬೇಸಿಗೆ ಬಿಸಿ ತಾಪ ಸಹಿಸಲಾಗುತ್ತಿಲ್ಲ, ಹೀಗಿರು ವಾಗ ಎರಡು ದಿನಗಳಿಂದ ಆಸ್ಪತ್ರೆಯ ಯಾವುದೇ ವಾರ್ಡ್ ಗಳಲ್ಲಿ ಲೈಟ್‌ ಇಲ್ಲ, ಫ್ಯಾನ್‌ಗಳು ತಿರುಗುತ್ತಿಲ್ಲ. ಇದರಿಂದ ಒಳರೋಗಿಗಳ ಪಾಡು ಹೇಳ ತೀರದಾಗಿದೆ. ಕನಿಷ್ಠ ಸಣ್ಣ ಲೈಟೂ ಇಲ್ಲದೆ, ಸೊಳ್ಳೆಗಳ ಕಾಟ ಸಹಿಸಿಕೊಂಡು ಇಡೀ ರಾತ್ರಿ ಕಗ್ಗತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಕರೆಂಟ್‌ ಇಲ್ಲದೆ ನೀರೂ ಇಲ್ಲ: ವಿದ್ಯುತ್‌ ಸ್ಥಗಿತಗೊಂಡಿದ್ದ ರಿಂದ ಇಡೀ ಆಸ್ಪತ್ರೆ, ವಾರ್ಡ್‌ಗಳಿಗೆ ಕುಡಿಯುವುದಕ್ಕೆ ಇರಲಿ, ಶೌಚಾಲಯ ಬಳಕೆಗೂ ನೀರಿಲ್ಲ. ಇದರಿಂದ ಶೌಚಾಲಯಗಳು ಶುಚಿತ್ವ ಕಾಣದೆ ದುರ್ನಾತ ಬೀರುತ್ತಿವೆ.

ಜನರೇಟರ್‌ ಬಳಸುತ್ತಿಲ್ಲ: ತುರ್ತು ಬಳಕೆಗಾಗಿ ಜನರೇಟರ್‌ ಇದ್ರೂ, ಡೀಸೆಲ್‌ ಇಲ್ಲದ ಕಾರಣ, ರಾತ್ರಿ 10 ಗಂಟೆಗೆ ಜನರೇಟರ್‌ ಆಫ್‌ ಮಾಡಿಸಲಾಗಿದೆ. ಇದರಿಂದ ರೋಗಿಗಳು ಕತ್ತಲಲ್ಲಿ ದಿನ ಕಳೆಯುವ ಸ್ಥಿತಿ ನಿರ್ಮಾಣ ಗೊಂಡಿದೆ. ತುರ್ತು ಚಿಕಿತ್ಸೆ ಅಗತ್ಯವಿದ್ರೆ ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

ಹೆರಿಗೆಗೆ ಬಂದ ಗರ್ಭಿಣಿಯರು ಶಿಫ್ಟ್‌: ಇನ್ನು ಹೆರಿಗೆಗೆ ಬಂದ ಗರ್ಭಿಣಿಯರಲ್ಲಿ ಮೂವರಿಗೆ ಸಿಜೇರಿಯನ್‌ ಮಾಡಬೇಕಾದ ಸ್ಥಿತಿ ಇತ್ತು. ಆದರೆ, ವಿದ್ಯುತ್‌ ಇಲ್ಲದ ಕಾರಣ, ವೈದ್ಯರು ಬೇರೆ ಆಸ್ಪತ್ರೆಗೆ ಕಳುಹಿಸಿದ್ದಾರೆ. ದುಡ್ಡು ಇರುವವರಾದ್ರೆ ಸರಿ, ಬಡವರು ಖಾಸಗಿ ಆಸ್ಪತ್ರೆಗೆ ದುಬಾರಿ ಹಣ ಕಟ್ಟಲು ಸಾಧ್ಯವೇ? ಇದಕ್ಕೆ ಹೊಣೆ ಯಾರು ಎಂದು ರೋಗಿಗಳು ಪ್ರಶ್ನಿಸುತ್ತಾರೆ.

Advertisement

ಮನೆಯಲ್ಲೇ ಸಾಯ್ತೇವೆ: ಕರೆಂಟ್‌ ಇಲ್ಲದೇ ಸಾರ್ವಜ ನಿಕರ ಆಸ್ಪತ್ರೆಯಲ್ಲಿ ಕತ್ತಲು ಆವರಿಸಿದೇ ಎಂಬ ಮಾಹಿತಿ ತಿಳಿದು ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿದ ಸುದ್ದಿಗಾರರ ಜೊತೆ ಮಾತನಾಡಿದ ಒಳರೋಗಿಗಳು, ಚಿಕಿತ್ಸೆಗಾಗಿ ಆಸ್ಪ ತ್ರೆಗೆ ಬಂದರೆ, ಇಲ್ಲಿ ಕುಡಿಯುವ ನೀರು, ಗಾಳಿ ಬೆಳಕು ಇಲ್ಲ. ವೈದ್ಯರು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ರೆ ಮನೆಗೆ ಹೋಗಿ ಅಲ್ಲೇ, ಸಾಯುತ್ತೇವೆ ಎಂದು ಹೇಳಿದರು.

ವೈದ್ಯರು ಕೇಂದ್ರ ಸ್ಥಾನದಲ್ಲಿ ಇರಲ್ಲ: ಬಡವರೇ ಹೆಚ್ಚು ಅವಲಂಬಿಸುವ ಇಲ್ಲಿನ 100 ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ. ವೈದ್ಯರು ಸಕಾಲದಲ್ಲಿ ಆಗಮಿಸುವುದಿಲ್ಲ, ಸಂಜೆ 4ಗಂಟೆ ಆಗುತ್ತಿದ್ದಂತೆಯೇ ಆಸ್ಪತ್ರೆಯಿಂದ ನಿರ್ಗಮಿಸುತ್ತಾರೆ. ಸರ್ಕಾರ ವೈದ್ಯರಿಗಾಗಿ ಆಸ್ಪತ್ರೆ ಆವರಣದಲ್ಲಿ ಕೋಟ್ಯಂತರ ರೂ. ವ್ಯಯಮಾಡಿ ಸುಸಜ್ಜಿತ ವಸತಿ ಗೃಹ ನಿರ್ಮಿಸಿಕೊಟ್ಟಿದೆ. ಕೇಂದ್ರ ಸ್ಥಾನದಲ್ಲಿಯೇ ವೈದ್ಯರು ಇರಬೇಕು ಅನ್ನುವ ಆದೇಶ ಜಾರಿಯಲ್ಲಿದ್ದರೂ ಕೋಟೆಯಲ್ಲಿ ಈ ನಿಯಮ ಪಾಲನೆ ಆಗುತ್ತಿಲ್ಲ ಅನ್ನುವುದು ಪಾಳುಬಿದ್ದಿರುವ ವಸತಿ ಗೃಹಗಳು, ಪ್ರತಿದಿನ ಜಿಲ್ಲಾ ಕೇಂದ್ರದಿಂದಲೇ ಕರ್ತವ್ಯಕ್ಕೆ ಬಂದು ಹೋಗುವ ವೈದ್ಯರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಇತ್ತ ಗಮನ ಹರಿಸಿ, ಸಾರ್ವಜನಿಕ ಆಸ್ಪತ್ರೆ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು.

ಆಸ್ಪತ್ರೆ ಅವ್ಯವಸ್ಥೆ ಕುರಿತು ಆಡಳಿತಾಧಿಕಾರಿ ಡಾ.ಸೋಮಣ್ಣ ಅವರಿಂದ ಮಾಹಿತಿ ಪಡೆದುಕೊಂಡು ಶೀಘ್ರಗತಿಯಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ. ಅನಿಲ್‌ ಚಿಕ್ಕಮಾದು, ಶಾಸಕ

ಆಸ್ಪತ್ರೆಗೆ ಸಂಪರ್ಕ ಕಲ್ಪಿಸಿರುವ ವಿದ್ಯುತ್‌ ಪರಿವರ್ತಕ ದುರಸ್ತಿಗೊಂಡ ಹಿನ್ನೆಲೆಯಲ್ಲಿ ಇಡೀ ಆಸ್ಪತ್ರೆಗೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ದುರಸ್ತಿಗೆ ಕ್ರಮ ಕೈಗೊಂಡಿಲ್ಲ. ಅಲ್ಲದೆ, ರಾತ್ರಿ ವೇಳೆ ಜನರೇಟರ್‌ ಬಳಕೆ ಮಾಡುವಂತೆ ಸೂಚನೆ ನೀಡಿದ್ದೆ. ಆಸ್ಪತ್ರೆಗೆ ಬಂದ ಬಳಿಕ ಮಾಹಿತಿ ಪಡೆದು ಸಮಸ್ಯೆ ಪರಿಹರಿಸುತ್ತೇನೆ. ಡಾ.ಸೋಮಣ್ಣ, ಆಸ್ಪತ್ರೆ ಆಡಳಿತಾಧಿಕಾರಿ

 

ಎಚ್‌.ಬಿ.ಬಸವರಾಜು.

Advertisement

Udayavani is now on Telegram. Click here to join our channel and stay updated with the latest news.

Next