ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುವಾಗ ಟ್ರಾನ್ಸ್ ಫಾರ್ಮರ್(ಟೀಸಿ) ಸ್ಫೋಟಗೊಂಡು ಬೆಂಕಿ ತಗುಲಿದ ಪರಿಣಾಮ ತಂದೆ ಮಗಳು ಮೃತಪಟ್ಟಿರುವ ದುರ್ಘಟನೆ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಮಂಗನಹಳ್ಳಿ ನಿವಾಸಿ ಶಿವರಾಜ್(55) ಪುತ್ರಿ ಚೈತನ್ಯ(19) ಮೃತ ದುರ್ದೈವಿಗಳು, ವಿಕ್ಟೋರಿಯಾ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮಂಗನಹಳ್ಳಿಯಲ್ಲಿ ವಾಸವಾಗಿದ್ದ ಶಿವರಾಜ್, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿ ದ್ದರು. ಶಿವರಾಜ್ ದಂಪತಿಗೆ 15 ವರ್ಷಗಳ ಬಳಿಕ ಚೈತನ್ಯ ಜನಿಸಿ ದ್ದಾರೆ. ಈಕೆ ಪಿಯುಸಿ ವ್ಯಾಸಂಗ ಮಾಡಿದ್ದು, ಚೈತನ್ಯಗೆ ಮದುವೆ ಸಿದ್ಧತೆ ಮಾಡಿಕೊಂಡಿದ್ದರು. ಇತ್ತೀಚೆಗೆ ಎಂಗೆಜ್‌ಮೆಂಟ್ ಕೂಡ ಮುಗಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ತಂದೆ ಮತ್ತು ಮಗಳು ದ್ವಿಚಕ್ರ ವಾಹನದಲ್ಲಿ ಕಲ್ಯಾಣ ಮಂಟಪ ಬುಕ್ ಮಾಡಲು ಹೋಗಿದ್ದರು.
ಬಳಿಕ ವಾಪಸ್ ಬರುವಾಗ ಮಂಗನಹಳ್ಳಿ ಸೇತುವೆ ಬಳಿಯ ಟ್ರಾನ್ಸ್‌ಫಾರ್ಮರ್ ಸ್ಫೋಟಗೊಂಡಿದೆ. ಪರಿಣಾಮ ತಂದೆ ಮತ್ತು ಮಗಳಿಗೆ ಟ್ರಾನ್ಸ್‌ಫಾರ್ಮರ್‌ನ ಕೆಲ ತುಂಡುಗಳು ಇಬ್ಬರ ಮುಖ, ಎದೆ ಹಾಗೂ ದೇಹದ ಇತರೆ ಭಾಗಗಳಿಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು, ಅಲ್ಲದೆ, ಇಬ್ಬರಿಗೂ ಬೆಂಕಿ ಕೂಡ ಹೊತ್ತಿಕೊಂಡಿದೆ. ಕೂಡಲೇ ಸ್ಥಳೀಯರು ಶೇ.90ರಷ್ಟು ಸುಟ್ಟ ಗಾಯಗಳಿಂದ ನಡು ರಸ್ತೆಯಲ್ಲಿ ನರಳುತ್ತಿದ್ದ ತಂದೆ, ಮಗಳನ್ನು ಆ್ಯಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ದ್ವಿಚಕ್ರವಾಹನದ ಚಕ್ರಗಳು ಸ್ಫೋಟಗೊಂಡಿವೆ. ವಾಹನ ಸಂಪೂರ್ಣ ಸುಟ್ಟು ಹೋಗಿದೆ. ಬುಧವಾರ ರಾತ್ರಿ ಹೊತ್ತಿಗೆ ಶಿವರಾಜ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಗುರುವಾರ ನಸುಕಿನ ವೇಳೆ ಪುತ್ರಿ ಚೈತನ್ಯ ತುರ್ತುನಿಗಾ ಘಟಕದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಸಂಬಂಧ ಬೆಸ್ಕಾಂ ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.