Advertisement

ರೂಪಾಂತರಿ ಆತಂಕ; ಮೈಮರೆತ ಜನತೆ

06:10 PM Nov 30, 2021 | Team Udayavani |

ಹಾವೇರಿ: ಇನ್ನೇನು ಕೊರೊನಾ ಸೋಂಕು ತೊಲಗಿತು ಎಂದು ನಿಟ್ಟುಸಿರು ಬಿಟ್ಟಿದ್ದ ಜನತೆಗೆ ಮತ್ತೆ ಕೋವಿಡ್‌ ರೂಪಾಂತರ ತಳಿ ಒಮಿಕ್ರಾನ್‌ ಆತಂಕ ಸೃಷ್ಟಿಸಿದೆ. ಜಿಲ್ಲೆಗೆ ಹೊಂದಿಕೊಂಡಿರುವ ಪಕ್ಕದ ಧಾರವಾಡ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ನ್ಪೋಟಗೊಂಡಿದ್ದರೂ, ಜಿಲ್ಲೆಯ ಜನತೆ ಮಾತ್ರ ಕೋವಿಡ್‌ ನಿಯಮಗಳನ್ನು ಪಾಲಿಸದೇ ಅಪಾಯವನ್ನು ಆಹ್ವಾನಿಸುವಂತಿದೆ.

Advertisement

ಕಳೆದ ಎರಡ್ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದ್ದರಿಂದ ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಪಾಲಿಸುವುದನ್ನು ಮರೆತಿದ್ದಾರೆ. ಅಲ್ಲದೇ ನವೆಂಬರ್ ತಿಂಗಳ ಆರಂಭದಿಂದಲೇ ಒಂದೇ ಒಂದು ಪ್ರಕರಣವಿಲ್ಲದೇ ಜಿಲ್ಲೆಯಲ್ಲಿ ಕೋವಿಡ್‌ ಶೂನ್ಯಕ್ಕಿಳಿದು ಜಿಲ್ಲೆಯ ಸಾರ್ವಜನಿಕರು ಹಾಗೂ ಜಿಲ್ಲಾಡಳಿತ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ನೆರೆಯ ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಕೋವಿಡ್‌ ಸೋಂಕು ಸ್ಫೋಟಗೊಂಡಿರುವುದು ಜಿಲ್ಲೆಯ ಜನರಲ್ಲಿ ಮತ್ತೆ ಕೊರೊನಾ ಭೀತಿ ಹೆಚ್ಚುವಂತೆ ಮಾಡಿದೆ.

ಕೋವಿಡ್‌ ನಿಯಮ ನಿರ್ಲಕ್ಷ್ಯ: ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಇಳಕೆಯಾಗಿದ್ದರಿಂದ ಜನರು ಮೈಮರೆತು ವರ್ತಿಸುತ್ತಿರುವುದು ಕಂಡುಬರುತ್ತಿದೆ. ನಗರದ ಎಂ.ಜಿ.ರೋಡ್‌, ತರಕಾರಿ ಮಾರುಕಟ್ಟೆ, ಬಸ್‌ ನಿಲ್ದಾಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ನಿತ್ಯ ಜನಸಂದಣಿಯಿಂದ ಕೂಡಿರುತ್ತದೆ. ಅಲ್ಲದೇ ನಗರದ ಮಾರುಕಟ್ಟೆಯ ವಿವಿಧ ಅಂಗಡಿಗಳಿಗೆ ವಸ್ತುಗಳನ್ನು ಖರೀದಿಸಲು ಆಗಮಿಸುವ ಬಹುತೇಕ ಜನರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನಿರ್ಲಕ್ಷ್ಯ ತೋರುತ್ತಿದ್ದು, ಆತಂಕ ಮೂಡಿಸುತ್ತಿದೆ.

ಜಾಗೃತಿ ಕಾರ್ಯವಾಗಲಿ: ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್‌ ನಿಯಂತ್ರಣಕ್ಕಾಗಿ ಅನುಸರಿಸಬೇಕಾದ ಕ್ರಮಗಳನ್ನು ಪಾಲಿಸುವಂತೆ ಸಾಕಷ್ಟು ಜಾಗೃತಿ ಮೂಡಿಸಿದರೂ ಜನರು ಮಾತ್ರ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೋವಿಡ್‌ ಒಂದು ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಸಾಕಷ್ಟು ಮುಂಜಾಗೃತೆ ವಹಿಸಿದ್ದರೂ ಜಿಲ್ಲೆಯಲ್ಲಿ ಸಾವು, ನೋವುಗಳು ಹೆಚ್ಚಾಗಿ ಕಂಡುಬಂದವು. ಇನ್ನಿತರ ಜಿಲ್ಲೆಗಳಿಗೆ ಹೋಲಿಸಿದರೆ ಸಾವಿನ ಪ್ರಮಾಣ ಜಿಲ್ಲೆಯಲ್ಲಿ ಹೆಚ್ಚಿತ್ತು.

ಜಿಲ್ಲೆಯಲ್ಲಿಯೇ ಕೊರೊನಾದಿಂದ 650 ಜನರು ಪ್ರಾಣ ಕಳೆದುಕೊಂಡಿದ್ದನ್ನು ಮರೆಯುವಂತಿಲ್ಲ. ಈ ಹಿನ್ನೆಲೆ ಜಿಲ್ಲಾಡಳಿತ ಎತ್ತೆಚ್ಚುಕೊಂಡು ಕೋವಿಡ್‌ ರೂಪಾಂತರ ತಳಿ ಒಮಿಕ್ರಾನ್‌ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರು ಮೈಮರೆಯಂತೆ ಕ್ರಮ ನೋಡಿಕೊಳ್ಳುವುದು ಅಗತ್ಯವಿದೆ.

Advertisement

35.84 ಲಕ್ಷ ದಂಡ ವಸೂಲಿ
ಜಿಲ್ಲೆಯಲ್ಲಿ ಕೋವಿಡ್‌ ನಿಮಯ ಪಾಲಿಸುವಂತೆ ಸಾಕಷ್ಟು ಬಾರಿ ಜಾಗೃತಿ ಮೂಡಿದರೂ ಅದನ್ನು ಪಾಲಿಸದೇ ನಿರ್ಲಕ್ಷ್ಯ ತೋರಿದ ಜನರಿಂದ ಪೊಲೀಸ್‌ ಇಲಾಖೆ ದಂಡವನ್ನು ವಸೂಲಿ ಮಾಡಿ ಮಾಸ್ಕ್ ಹಾಕಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ ಮಾಸ್ಕ್ ಹಾಕದೇ ನಿರ್ಲಕ್ಷ್ಯ ತೋರಿದ ಕುರಿತು 35,849 ಕೇಸ್‌ಗಳು ದಾಖಲಾಗಿವೆ. ಸುಮಾರು 35,84,900 ರೂ., ದಂಡ ವಸೂಲಿ ಮಾಡಲಾಗಿದೆ.

ಕೊರೊನಾ ಲೆಕ್ಕಾಚಾರ
ಜಿಲ್ಲೆಯಲ್ಲಿ ಸದ್ಯ ಕೇವಲ ಒಂದು ಕೋವಿಡ್‌ ಸಕ್ರಿಯ ಪ್ರಕರಣವಿದೆ. ಜಿಲ್ಲೆಯಲ್ಲಿ ಇದುವರೆಗೆ 22,203 ಜನರಿಗೆ ಸೋಂಕು ತಗುಲಿದ್ದು, 21,552 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಚಿಕಿತ್ಸೆ ಫಲಿಸದೇ 650 ಜನರು ಮೃತಪಟ್ಟಿದ್ದಾರೆ. ಪಕ್ಕದ ಧಾರವಾಡ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕು ಹರಡುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಜಿಲ್ಲೆಯಲ್ಲಿ ಶೇ.86.11 ಜನರಿಗೆ ಮೊದಲ ಡೋಸ್‌ ಹಾಗೂ ಶೇ.46.73 ಜನರಿಗೆ ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. ವಾರಕ್ಕೆ ಮೂರು ಬಾರಿ ಕೋವಿಡ್‌ ಲಸಿಕಾ ಮೆಗಾ ಮೇಳ ಹಮ್ಮಿಕೊಂಡು ನಿಗದಿತ ಗುರಿ ಸಾಧಿಸಲಾತ್ತಿದೆ. ಕೋವಿಡ್‌ ರೂಪಾಂತರ ತಳಿ ಒಮಿಕ್ರಾನ್‌ ಕುರಿತು ಜಿಲ್ಲೆಯಾದ್ಯಂತ ಕಟ್ಟೆಚ್ಚರ ವಹಿಸಲಾಗುತ್ತಿದೆ. ಸಾರ್ವಜನಿಕರು ಮೈಮರೆಯದೇ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

ಜಿಲ್ಲೆಯ ಜನರು ಕೋವಿಡ್‌ ತಡೆಗಟ್ಟಲು ಸರ್ಕಾರ ಸೂಚಿಸಿರುವ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ಕೋವಿಡ್‌ ಲಸಿಕೆ ಪಡೆದುಕೊಳ್ಳಬೇಕು. ಅಲ್ಲದೇ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಮುಂಜಾಗ್ರತೆ ವಹಿಸಬೇಕು.
ಡಾ| ಎಚ್‌.ಎಸ್‌. ರಾಘವೇಂದ್ರಸ್ವಾಮಿ,
ಡಿಎಚ್‌ಒ

ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next