Advertisement

ಪಿಯು ಉಪನ್ಯಾಸಕರ ವರ್ಗಾವಣೆಗೆ ಅಧ್ಯಾದೇಶಕ್ಕೆ ಸಿದ್ಧತೆ

10:47 PM Jul 28, 2021 | Team Udayavani |

ಬೆಂಗಳೂರು: ಸರಕಾರಿ ಶಾಲಾ ಶಿಕ್ಷಕರ ವರ್ಗಾವಣೆ, ಸರಕಾರಿ ಪದವಿ, ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ನಡೆಯುತ್ತಿದೆಯಾದರೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಆಗುತ್ತಿಲ್ಲ! ಈ ಹಿನ್ನೆಲೆಯಲ್ಲಿ ಅಧ್ಯಾದೇಶ ಮೂಲಕ ಕಾಯ್ದೆಗೆ ತಿದ್ದುಪಡಿ ತಂದು, ಸಮಸ್ಯೆಯನ್ನು ಬಗೆಹರಿಸಲು ಸರಕಾರ ಯೋಚಿಸಿದೆ.

Advertisement

ಶಾಲಾ ಶಿಕ್ಷಕರ ವರ್ಗಾವಣೆ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ವರ್ಗಾವಣೆ ಈ ಹಿಂದೆ ಒಂದೇ ಕಾಯ್ದೆಯಡಿಯಲ್ಲಿ ನಡೆಯುತ್ತಿತ್ತು. ಈಗ ಶಾಲಾ ಶಿಕ್ಷಕರ ವರ್ಗಾವಣೆಗಾಗಿಯೇ ಪ್ರತ್ಯೇಕ ಕಾಯ್ದೆ ರೂಪಿಸಿ, ಅದರಲ್ಲಿನ ಕಾನೂನಿನ ತೊಡಕನ್ನು ನಿವಾರಿಸಲು ಅಧ್ಯಾದೇಶ ಮೂಲಕ ತಿದ್ದುಪಡಿ ತಂದು ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗಿದೆ. ಆದರೆ, ಪಿಯು ಉಪನ್ಯಾಸಕರ ವರ್ಗಾವಣೆಗೆ ಹಿಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ಹೀಗಾಗಿಯೇ ಅಧ್ಯಾದೇಶ ಮೂಲಕ ಪಿಯು ಉಪನ್ಯಾಸಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತಂದು, ಮುಂದಿನ ಶೈಕ್ಷಣಿಕ ವರ್ಷದೊಳಗಾದರೂ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಚಿಂತನೆ ನಡೆಯುತ್ತಿದೆ.

ರಾಜ್ಯದಲ್ಲಿ 1,253 ಪದವಿ ಪೂರ್ವ ಕಾಲೇಜು ಗಳಲ್ಲಿರುವ 12,853 ಉಪನ್ಯಾಸಕರ ಹುದ್ದೆಗಳಿದ್ದು, ಈ ಪೈಕಿ ಸುಮಾರು 11,500ಕ್ಕೂ ಅಧಿಕ  ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಕಾರಣದಿಂದ ಕೆಲವು ಹುದ್ದೆಗಳು ಖಾಲಿಯಿವೆ. ಆದರೆ, ಸೇವೆಯಲ್ಲಿರುವ  ಉಪನ್ಯಾಸಕರಿಗೆ ವರ್ಗಾವಣೆ ಪಡೆಯಲು ಸಾಧ್ಯ ವಾಗುತ್ತಿಲ್ಲ. 2019ರಲ್ಲಿ  ಕೇವಲ ಶೇ.5ರಷ್ಟು ಮಾತ್ರ ವರ್ಗಾವಣೆ ನಡೆದಿದ್ದು, ಇದರಲ್ಲಿ ದಂಪತಿ ಉಪನ್ಯಾಸಕರು, ಗಂಭೀರ ಆರೋಗ್ಯ ಸಮಸ್ಯೆ ಹಾಗೂ ಇತರ ಗಂಭೀರ ಕಾರಣಗಳಿಂದ ಆದ್ಯತೆ ಮೇಲಿನ ವರ್ಗಾವಣೆ ಮಾತ್ರ ನಡೆದಿದೆ ಎಂದು ಹಲವರು ನೋವು ತೋಡಿಕೊಂಡಿದ್ದಾರೆ.

ಅಧ್ಯಾದೇಶಕ್ಕೆ ಪ್ರಸ್ತಾವನೆ:

ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆಯನ್ನು ಸರಾಗವಾಗಿ ನಡೆಸುವ ಸದುದ್ದೇಶದಿಂದ ವರ್ಗಾವಣೆ ಕಾಯ್ದೆಗೆ ಅಧ್ಯಾದೇಶ ಮೂಲಕ ತಿದ್ದುಪಡಿ ತರಲು ಬೇಕಾದ ಪ್ರಸ್ತಾವನೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸಿದ್ಧಪಡಿಸಲಾಗುತ್ತಿದೆ. ಆಗಸ್ಟ್‌ ಮೊದಲು ಅಥವಾ ಎರಡನೇ ವಾರದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗುವ ಸಾಧ್ಯತೆಯಿದೆ. ಸದ್ಯ ಇರುವ ವರ್ಗಾವಣೆ ಪ್ರಮಾಣವನ್ನು ಶೇ. 5ರಿಂದ  8 ಅಥವಾ  10ಕ್ಕೆ ಏರಿಸುವ ಸಾಧ್ಯತೆಯಿದೆ. ಆದ್ಯತಾ ವಲಯದ ವರ್ಗಾವಣೆಯನ್ನು ಹೊರತು ಪಡಿಸಿ ಸಾಮಾನ್ಯ ವರ್ಗಾವಣೆಯ ಪ್ರಮಾಣ ಏರಿಸ ಲಾಗುತ್ತದೆ. ಅಲ್ಲದೆ, ಸೇವಾ ಜೇಷ್ಠತೆಯ ಆಧಾರದಲ್ಲಿ ಅರ್ಹ ಉಪನ್ಯಾಸಕರು ವರ್ಗಾವಣೆ ಪಡೆಯಲು ಅನುಕೂಲ ಆಗುವ ರೀತಿಯಲ್ಲಿ ತಿದ್ದುಪಡಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದು ಇಲಾಖೆಯ  ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

Advertisement

ಶೇ. 15ರಷ್ಟಾಗಬೇಕು :

ಪದವಿ, ಡಿಪ್ಲೊಮಾ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳ ಉಪನ್ಯಾಸಕ ವರ್ಗಾವಣೆ ಪ್ರಮಾಣ ಶೇ.15ರಷ್ಟಿದ್ದು, ಶಾಲಾ ಶಿಕ್ಷಕರ ವರ್ಗಾ ವಣೆ ಪ್ರಮಾಣವೂ  ಇಷ್ಟೇ ಇದೆ. ಹೀಗಾಗಿ ಪ. ಪೂ.ಉಪನ್ಯಾಸಕರ ವರ್ಗಾವಣೆ ಪ್ರಮಾಣವನ್ನು ಶೇ.15ಕ್ಕೇರಿಸಬೇಕು. ಆದ್ಯತಾ ವಲಯ ಹೊರತು ಪಡಿಸಿ ಸಾಮಾನ್ಯ ವರ್ಗಾವಣೆಗೆ ಶೇ.15ರಷ್ಟು ಮೀಸಲಿಡಬೇಕು ಎಂದು ಸರಕಾರಿ ಪಿಯು ಕಾಲೇಜಿನ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್‌. ನಿಂಗೇಗೌಡ ಆಗ್ರಹಿಸಿದ್ದಾರೆ.

ಪದವಿ ಪೂರ್ವ ಉಪನ್ಯಾಸಕರ ವರ್ಗಾವಣೆ ಸಂಬಂಧ ಅಧ್ಯಾದೇಶ ಮೂಲಕ ಕಾಯ್ದೆಗೆ ತಿದ್ದುಪಡಿ ತರಲು ಅಗತ್ಯವಿರುವ ಪ್ರಸ್ತಾವನೆ ಸಲ್ಲಿಸಲು ಸೂಚನೆ ಬಂದಿದೆ. ಹೀಗಾಗಿ ಆದಷ್ಟು ಬೇಗ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಲಾಗುವುದು.-ಸ್ನೇಹಲ್‌, ನಿರ್ದೇಶಕಿ,  ಪ. ಪೂ. ಶಿಕ್ಷಣ ಇಲಾಖೆ

 

-ರಾಜು ಖಾರ್ವಿ ಕೊಡೇರಿ

 

Advertisement

Udayavani is now on Telegram. Click here to join our channel and stay updated with the latest news.

Next