Advertisement
ವರ್ಗಾವಣೆಯಾಗಿರುವ ಶಿಕ್ಷಕ ರನ್ನು ಕೊಂಬೆಟ್ಟು ಶಾಲೆಯಿಂದ ರಿಲೀವ್ ಮಾಡದಂತೆ ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಿಗೆ ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಚನೆ ನೀಡಿದ್ದಾರೆ. ಕೊಂಬೆಟ್ಟು ಶಾಲೆಯಲ್ಲಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಗಳ ಕುರಿತು ದಾಖಲೆಗಳನ್ನು ಪರಿಶೀಲಿಸಿದ ಅವರು, ಶಾಲಾ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ 6 ಮಂದಿ ಶಿಕ್ಷಕರ ವರ್ಗಾವಣೆಯ ಆದೇಶದಲ್ಲಿ ತಪ್ಪುಗಳಿರುವುದನ್ನು ಗಮನಿಸಿದ್ದಾರೆ ಎಂದು ನಿಯೋಗದಲ್ಲಿ ತೆರಳಿದವರು ತಿಳಿಸಿದ್ದಾರೆ.
ಗುರುವಾರ ಶಾಸಕರ ನೇತೃತ್ವದಲ್ಲಿ ಭೇಟಿಯಾದ ನಿಯೋಗವು ಎಲ್ಲ 6 ಮಂದಿ ಶಿಕ್ಷಕರ ವರ್ಗಾವಣೆಯನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದು, ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯು ಶತಮಾನದ ಇತಿಹಾಸವಿರುವ, ಅತ್ಯಂತ ಹೆಚ್ಚು ಮಕ್ಕಳಿರುವ ಶಾಲೆ ಎಂದು ವಿವರಿಸಲಾಯಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಲಭ್ಯವಾಗದ ಕಾರಣ ನಿರ್ದೇಶಕರನ್ನು ನಿಯೋಗ ಭೇಟಿ ಮಾಡಿತ್ತು. ನಿಯೋಗದಲ್ಲಿ ಉಪಪ್ರಾಂಶುಪಾಲೆ ಮರ್ಸಿ ಮಮತಾ ಮೋನಿಸ್, ದೈ.ಶಿ. ಶಿಕ್ಷಕಿ ಗೀತಾ ಮಣಿ, ಶಿಕ್ಷಕರಾದ ಜಗನ್ನಾಥ ಪಿ., ಸಿಂಧೂ ವಿ.ಕೆ., ಮಾಲಿನಿ ಕೆ.ಎನ್., ಮಕ್ಕಳ ಪೋಷಕ ಸುರೇಶ ರೈ ತೆರಳಿದ್ದರು ಎಂದು ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್ ತಿಳಿಸಿದ್ದಾರೆ.