Advertisement

ನಗರದ ಶಿಕ್ಷಕರ ವರ್ಗಾವಣೆ ಸನ್ನಿಹಿತ

06:00 AM Jun 29, 2018 | |

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ತಡೆಯಾಜ್ಞೆ ತೆರವುಗೊಳಿಸಿರುವ ಹೈಕೋರ್ಟ್‌, ನಗರ ಪ್ರದೇಶದಲ್ಲಿ ಹತ್ತು ವರ್ಷ ಸೇವೆ ಪೂರೈಸಿರುವ ಶಿಕ್ಷಕರ ಕಡ್ಡಾಯ ವರ್ಗಾವಣೆ ನಿಯಮ ಎತ್ತಿಹಿಡಿದಿದೆ.

Advertisement

ಶಿಕ್ಷಕರ ವರ್ಗಾವಣೆ ಸಂಬಂಧ ಕೆಎಟಿ ನೀಡಿರುವ ತೀರ್ಪು ಪ್ರಶ್ನಿಸಿ ಬೆಂಗಳೂರಿನ ರಾಜಾಜಿನಗರದ ಶಿಕ್ಷಕಿ ಪ್ರಭಾ ಅಡಿಗಲ್‌ ಸಲ್ಲಿಸಿದ್ದ ರಿಟ್‌ ಅರ್ಜಿ ಅನ್ವಯ ಈ ಹಿಂದೆ ನೀಡಿದ್ದ ತಡೆಯಾಜ್ಞೆ ತೆರವು ಕೋರಿ ರಾಜ್ಯಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ಗುರುವಾರ ನಡೆಸಿದ ನ್ಯಾ. ಎಚ್‌.ಜಿ ರಮೇಶ್‌ ಹಾಗೂ ನ್ಯಾ. ಪಿ.ಎಂ ನವಾಜ್‌ ಅವರಿದ್ದ ವಿಭಾಗೀಯ ಪೀಠ, ವಾದ -ಪ್ರತಿವಾದ ಆಲಿಸಿ  ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ನಗರ ಪ್ರದೇಶಗಳಲ್ಲಿ 10 ವರ್ಷ ಸೇವೆ  ಪೂರೈಸಿದ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ಮೂಲಕ  ಗ್ರಾಮೀಣ (ಸಿ) ವಲಯ ಹಾಗೂ ಪಟ್ಟಣ   (ಬಿ)  ವಲಯದಲ್ಲಿ  ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವುದು. ಜತೆಗೆ ಎರಡೂ ವಲಯಗಳ  ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಕರ ವರ್ಗಾವಣೆ ಅಧಿನಿಯಮಕ್ಕೆ 2017ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಅದರಂತೆ  “ಎ’ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು “ಬಿ’ ಮತ್ತು “ಸಿ’ ವಲಯಗಳಿಗೆ ಕಡ್ಡಾಯವಾಗಿ ವರ್ಗಾವಣೆ ಮಾಡಲು ಸುತ್ತೋಲೆ ಹೊರಡಿಸಲಾಗಿತ್ತು. ಈ ಸುತ್ತೋಲೆ ಆದರೆ, ಇದೀಗ ತಡೆಯಾಜ್ಞೆ ನೀಡಿರುವುದರಿಂದ  ವರ್ಗಾವಣೆ ಪ್ರಕ್ರಿಯೆ ಸ್ಥಗಿತಗೊಂಡಿದ್ದು. ತೊಂದರೆ ಉಂಟಾಗುತ್ತಿದ್ದು ತಡೆಯಾಜ್ಞೆ ತೆರವುಗೊಳಿಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.

ಈ ವಾದ ಪುರಸ್ಕರಿಸಿದ ನ್ಯಾಯಪೀಠ, ತಡೆಯಾಜ್ಞೆ ತೆರವುಗೊಳಿಸಿ ಆದೇಶಿಸಿತು.ಅಲ್ಲದೆ ಶಿಕ್ಷಕರ ವರ್ಗಾವಣೆ ಅಧಿನಿಯಮಕ್ಕೆ ಮಾಡಲಾದ ತಿದ್ದುಪಡಿ ಪ್ರಶ್ನಿಸಲು ಅವಕಾಶ ನೀಡಿ ಅರ್ಜಿ ಇತ್ಯರ್ಥಪಡಿಸಿತು.
ಅರ್ಜಿದಾರರ ವಾದ ಏನಾಗಿತ್ತು?

ನಗರ ಭಾಗದ ವಲಯ (ಎ)ರಲ್ಲಿ ಕಾರ್ಯನಿರ್ವಹಿಸುವರ ಕಡ್ಡಾಯ ವರ್ಗಾವಣೆಯಿಂದ ಮಹಾನಗರ ಪಾಲಿಕೆಗಳು, ನಗರ ಪಾಲಿಕೆಗಳು, ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ್‌, ಅಧಿಸೂಚಿತ ಪ್ರದೇಶ, ಪಟ್ಟಣ ಪ್ರದೇಶ ಹಾಗೂ ತಾಲೂಕು ಕೇಂದ್ರ ವ್ಯಾಪ್ತಿಯ ಸರಹದ್ದಿನ ವ್ಯಾಪ್ತಿ ಪ್ರದೇಶಗಳು ಗ್ರಾಮೀಣ ಭಾಗಕ್ಕೆ ವರ್ಗಾವಣೆ ಮಾಡಲು ಅವಕಾಶವಿದೆ. ಆದರೆ, ಕರ್ನಾಟಕ ಶಿಕ್ಷಕರ ವರ್ಗಾವಣೆ ನಿಯಮದ ಪ್ರಕಾರ ಒಂದು ವಲಯದಿಂದ ಇನ್ನೊಂದು ವಲಯಕ್ಕೆ ವರ್ಗಾವಣೆ ಮಾಡುವಂತಿಲ್ಲ. ಹೀಗಾಗಿ ಸರ್ಕಾರದ ವರ್ಗಾವಣೆ  ಸುತ್ತೋಲೆ ಕಾನೂನುಬಾಹಿರವಾಗಿದ್ದು ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದರು.

Advertisement

ಪರಿಷ್ಕೃತ ವೇಳಾಪಟ್ಟಿಗೆ ಸಿದ್ಧತೆ
ಶಿಕ್ಷಕರ ವರ್ಗಾವಣೆ ಸಂಬಂಧ ಅನೇಕ ಶಿಕ್ಷಕರು ಹೈಕೋರ್ಟ್‌ ಮೆಟ್ಟಿಲೇರಿದ್ದು ಈ ಪೈಕಿ ಒಂದು ಅರ್ಜಿ ಮಾತ್ರ ಇತ್ಯರ್ಥಗೊಂಡಿದ್ದು ತಡೆಯಾಜ್ಞೆ ತೆರವುಗೊಂಡಿದೆ. ಉಳಿದ ತಕರಾರು ಅರ್ಜಿಗಳು ಶುಕ್ರವಾರ ಒಟ್ಟಿಗೆ ವಿಚಾರಣೆ ನಡೆಯಲಿದ್ದು. ಆ ಸಂಬಂಧ ಹೈಕೋರ್ಟ್‌ ನೀಡುವ ಆದೇಶದ ಮೇರೆಗೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಪರಿಷ್ಕೃತ ವೇಳಾಪಟ್ಟಿ ಇನ್ನಷ್ಟೇ ಸಿದ್ಧಪಡಿಸಲಿದ್ದೇವೆ ಎಂದು ಶಿಕ್ಷಣ ಇಲಾಖೆ ಪ್ರೌಢಶಿಕ್ಷಣ ನಿರ್ದೇಶಕಿ ಫಿಲೋಮಿನಾ ಲೋಬೋ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next