Advertisement

ಏಕಾಏಕಿ 20 ಮಂದಿ ವರ್ಗ!

10:07 AM May 13, 2022 | Team Udayavani |

ಕುಂದಾಪುರ: ಇಲ್ಲಿನ ಸರಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಏಕಾಏಕಿ 20 ಮಂದಿಯನ್ನು ವರ್ಗಾಯಿಸಲಾಗಿದೆ. ಇದರಿಂದ ಆಸ್ಪತ್ರೆ ವ್ಯವಸ್ಥೆ ಸಿಬಂದಿ ಕೊರತೆಯ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ರೋಗಿಗಳಿಗೆ ದಿಢೀರ್‌ ತೊಂದರೆಯಾಗಲಿದೆ.

Advertisement

ಕೆಲವು ವರ್ಷಗಳ ಹಿಂದೆ ಮಕ್ಕಳ ತೀವ್ರ ನಿಗಾ ಘಟಕ ಉಡುಪಿಯಲ್ಲಿ ಸರಕಾರಿ ಆಸ್ಪತ್ರೆಯಿಂದ ಬಿ.ಆರ್. ಶೆಟ್ಟಿ ಆಸ್ಪತ್ರೆಗೆ ವಹಿಸಿಕೊಡುವಾಗ ಕುಂದಾಪುರಕ್ಕೆ ವರ್ಗವಾಗಿತ್ತು. ಕುಂದಾಪುರದಲ್ಲಿ 6 ಬೆಡ್‌ಗಳು ಮೊದಲೇ ಇದ್ದು ಅನಂತರ 10 ಹಾಸಿಗೆಗಳ ವ್ಯವಸ್ಥೆ ವರ್ಗವಾಗಿತ್ತು. ಆಗಲೇ 10 ಹಾಸಿಗೆಗಳ ಸಿಬಂದಿಯನ್ನು ಕುಂದಾಪುರಕ್ಕೆ ನಿಯೋಜನೆ ಮಾಡಲಾಗಿತ್ತು.

ವರ್ಗ ಯಾರೆಲ್ಲ?

8 ಜನ ಶುಶ್ರೂಷಕಿಯರು, 2 ಗ್ರೂಪ್‌ ಡಿ, 2 ಸಮಾಲೋಚಕರು, ಎನ್‌ಆರ್‌ಸಿ (ನ್ಯೂಟ್ರಿಷಿಯನ್‌ ರಿ ಹ್ಯಾಬಿಟೇಶನ್‌ ಸೆಂಟರ್‌) ಯೋಜನೆ ಮೂಲಕ 4 ಶುಶ್ರೂಷಕಿಯರು, ಒಬ್ಬರು ಅಡುಗೆಯವರು, 1 ಡಯಟ್‌ ಕೌನ್ಸಿಲರ್‌, ಪಿಐಸಿಯು (ಪಿಡಿಯಾಟ್ರಿಕ್‌ ಇಂಟೆನ್ಸಿವ್‌ ಕೇರ್‌ ಯುನಿಟ್‌)ನಲ್ಲಿ ಒಬ್ಬರು ಮಕ್ಕಳ ವೈದ್ಯರು, 2 ಶುಶ್ರೂಷಕಿಯರು ವರ್ಗವಾಗ ಲಿದ್ದಾರೆ. ಇವರೆಲ್ಲ ಉಡುಪಿಯಿಂದ ಇಲ್ಲಿಗೆ ನಿಯೋಜನೆಯಾದವರು.

ಯಾಕಾಗಿ?

Advertisement

ಉಡುಪಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಬಿ.ಆರ್. ಶೆಟ್ಟಿ ಅವರ ಆಡಳಿತದಿಂದ ಮತ್ತೆ ಸರಕಾರದ ತೆಕ್ಕೆಗೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಮೇ 16ರಂದು ಮತ್ತೆ ಸರಕಾರದ ಸುಪರ್ದಿಯಲ್ಲಿ ಆಸ್ಪತ್ರೆ ಆರಂಭವಾಗಲಿದ್ದು ಇಲ್ಲಿಂದ ಸಿಬಂದಿಯನ್ನು ಕಳುಹಿಸಿಕೊಡಬೇಕಿದೆ. ಅದಕ್ಕಾಗಿ ಸರಕಾರದ ಹಂತ ದಲ್ಲಿ ಸೂಚನೆ ಬಂದಿದ್ದು ವರ್ಗಾವಣೆ ಆದೇಶ ಬಂದಿದೆ.

ರೋಗಿಗಳ ಸಾಲು

ದಿನದ 24 ಗಂಟೆಗಳ ಕಾಲವೂ ಚಿಕಿತ್ಸೆ ಲಭ್ಯವಿದೆ. ಇಲ್ಲಿ ಒಟ್ಟು 3 ಆ್ಯಂಬುಲೆನ್ಸ್‌ ಇವೆ. ಅದರಲ್ಲಿ 1 ನಗು-ಮಗು, 1 ತುರ್ತು ಸೇವೆಗೆ ಮತ್ತು 1 ಸಾಮಾನ್ಯ ಅಪಘಾತಗಳಿಗೆ ಮೀಸಲಿಡಲಾಗಿದೆ. ನಿತ್ಯ ಈ ಆಸ್ಪತ್ರೆಗೆ 450ಕ್ಕೂ ಹೆಚ್ಚು ಹೊರ ಮತ್ತು 110ರಷ್ಟು ಒಳ ರೋಗಿಗಳು ಬಂದು ಚಿಕಿತ್ಸೆ ಪಡೆದು, ಉಚಿತವಾಗಿ ಸರಕಾರ ನೀಡುವ ಔಷಧ ಪಡೆಯುತ್ತಾರೆ.

ಏನು ವಿಶೇಷ?

ಈ ಆಸ್ಪತ್ರೆ ಉತ್ತಮ ಸೇವೆಗಾಗಿ ಜನರಿಂದ ಗುರುತಿಸಲ್ಪಟ್ಟಿದೆ. ಕೋವಿಡ್‌ ಸಂದರ್ಭ ನೀಡಿದ ಚಿಕಿತ್ಸೆಗಾಗಿ ರಾಜ್ಯದಲ್ಲೇ ಗಮನ ಸೆಳೆದಿತ್ತು. ಹೆರಿಗೆಯಲ್ಲೂ ರಾಜ್ಯಮಟ್ಟದಲ್ಲಿ ಅತ್ಯಧಿಕ ಹೆರಿಗೆಯಾದ ಆಸ್ಪತ್ರೆ ಎಂದು ಗುರುತಿಸಲ್ಪಟ್ಟಿದೆ. ಇಲ್ಲಿ ಶಸ್ತ್ರ ಚಿಕಿತ್ಸಕರು, ಸಾಮಾನ್ಯ ಶಸ್ತ್ರಚಿಕಿತ್ಸಕ, ಔಷಧ ತಜ್ಞರು, ದಂತ, ನೇತ್ರ, ಕಿವಿಮೂಗು ಗಂಟಲು ತಜ್ಞರು, ಹೆರಿಗೆ, ಸ್ತ್ರೀರೋಗ ತಜ್ಞರು, ಮಕ್ಕಳ ರೋಗ ತಜ್ಞರು, ಅರಿವಳಿಕೆ ತಜ್ಞರು, ಎಲುಬು ಮತ್ತು ಕೀಲು ತಜ್ಞರು, ಕ್ಷಕಿರಣ ತಜ್ಞರು, ತುರ್ತು ಚಿಕಿತ್ಸಾ ವೈದ್ಯಾಧಿಕಾರಿ ಮೊದಲಾದ ವೈದ್ಯರು ಇದ್ದಾರೆ. ಉಪವಿಭಾಗ ಆಸ್ಪತ್ರೆಗೆ ಭಟ್ಕಳ, ಸಾಗರ, ಬೈಂದೂರು, ಹೊಸಂಗಡಿ ಮೊದಲಾದೆಡೆಯಿಂದ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಬಹುತೇಕ ಎಲ್ಲ ಚಿಕಿತ್ಸೆಯೂ ಇಲ್ಲಿ ದೊರೆಯುವ ಕಾರಣ ಇದರ ಹೊರತಾಗಿ ಖಾಸಗಿ ಆಸ್ಪತ್ರೆಗೆ ಹೋಗಬೇಕಾದ ಪ್ರಮೇಯ ಬರುವುದಿಲ್ಲ.

ಹೆರಿಗೆ ಆಸ್ಪತ್ರೆ

ಉಪವಿಭಾಗ ಆಸ್ಪತ್ರೆ ಪಕ್ಕದಲ್ಲಿ ಜಿ.ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ವತಿಯಿಂದ ಕಟ್ಟಿಸಿಕೊಟ್ಟ 6 ಕೋ.ರೂ.ಗೂ ಅಧಿಕ ವೆಚ್ಚದ ಹೊಸ ಕಟ್ಟಡವಿದೆ. ಇದರಲ್ಲಿ ಲಕ್ಷ್ಮೀ ಸೋಮ ಬಂಗೇರ ಹೆರಿಗೆ ವಿಭಾಗ ಕಾರ್ಯಾಚರಿಸುತ್ತಿದೆ. ಕೋವಿಡ್‌ ಸಂದರ್ಭದಲ್ಲಿಯೂ ಅತೀ ಹೆಚ್ಚು ಹೆರಿಗೆ ಮಾಡಿಸಿದ ಕೀರ್ತಿ ಇಲ್ಲಿ ಕಾರ್ಯಾಚರಿಸುತ್ತಿರುವ ವೈದ್ಯರದ್ದು. 171 ಸೋಂಕಿತ ಮಹಿಳೆಯರಿಗೆ ಯಶಸ್ವಿ ಚಿಕಿತ್ಸೆ, ಹೆರಿಗೆ ಮಾಡಿಸಲಾಗಿದೆ. ಕೋವಿಡ್‌ ಸಂದರ್ಭ ಹೆರಿಗೆ ಆಸ್ಪತ್ರೆಯನ್ನು ಕೋಟ ಸರಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ರಾಜ್ಯದಲ್ಲಿಯೇ ಮೊದಲ ಬಾರಿಗೆ ಜಿಲ್ಲಾಮಟ್ಟದಿಂದ ಹೊರತಾಗಿ ಕೋವಿಡ್‌ ಆಸ್ಪತ್ರೆ ಆರಂಭವಾದುದೂ ಕುಂದಾಪುರದಲ್ಲೇ. ಅದು ಕೂಡ ಚಿಕಿತ್ಸೆಯಲ್ಲಿ ರಾಜ್ಯದ ಗಮನ ಸೆಳೆದಿತ್ತು. ಅತೀ ಹೆಚ್ಚು ರೋಗಿಗಳು ಗುಣಮುಖರಾಗಿದ್ದರು. ದಿನಕ್ಕೆ 500ರಷ್ಟು ರೋಗಿಗಳು ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಾರೆ.

ಸಿಬಂದಿ ಕೊರತೆ

ಸರಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಮೊದಲೇ ಸಿಬಂದಿ ಕೊರತೆಯಿದೆ. ಈ ಸರಕಾರಿ ಆಸ್ಪತ್ರೆಯಲ್ಲಿ 90 ಹುದ್ದೆ ಮಂಜೂರಾಗಿ 50 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 40 ಹುದ್ದೆಗಳು ಮೊದಲೇ ಖಾಲಿಯಿದ್ದು ಇಷ್ಟೆಲ್ಲ ಕಾರಣದಿಂದ ಸಿಬಂದಿ ಏಕಾಏಕಿ ವರ್ಗವಾದರೆ ರೋಗಿಗಳಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಶಾಸಕರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಈವರೆಗೆ ಏನೂ ಬೆಳವಣಿಗೆ ನಡೆದಂತಿಲ್ಲ. ವರ್ಗಾವಣೆ ಆದೇಶ ಜಾರಿಗೊಳಿಸಲು ಅಂತಿಮ ದಿನ ಕಳೆಯುತ್ತಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ ಮೂಲಕ ನೇಮಿಸಲಾದ ಸಿಬಂದಿಯನ್ನು ಇಲ್ಲಿಂದ ವರ್ಗ ಮಾಡಿದರೆ ಅದೇ ಯೋಜನೆ ಮೂಲಕ ಇಲ್ಲಿ ನೇಮಿಸಲೂ ಆದೇಶ ಮಾಡಲಿ.

ಆದೇಶವಾಗಿದೆ

ಉಡುಪಿಯಿಂದ ಕಳುಹಿಸಿಕೊಟ್ಟ ಸಿಬಂದಿಯನ್ನು ಮರಳಿ ಕಳುಹಿಸಲು ಸೂಚನೆ ಬಂದಿದೆ. ಇಲ್ಲಿ ಸಿಬಂದಿ ಕೊರತೆಯಿದೆ. ಹಾಗಿದ್ದರೂ ಸರಕಾರದ ಆದೇಶ ಪಾಲಿಸಬೇಕಾದ್ದು ನಮ್ಮ ಕರ್ತವ್ಯ. -ಡಾ| ರಾಬರ್ಟ್‌ ರೆಬೆಲ್ಲೋ ಶಸ್ತ್ರಚಿಕಿತ್ಸಕ ಆಡಳಿತ ವೈದ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next