Advertisement

PSI ಗಳಿಗೆ ಸಿಗುವುದೇ ವರ್ಗಾವಣೆ ಭಾಗ್ಯ?

10:34 PM Jun 07, 2023 | Team Udayavani |

ಹುಬ್ಬಳ್ಳಿ: ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳು (ಪಿಎಸ್‌ಐ) ಅಂತರ್‌ ವಲಯ ವರ್ಗಾವಣೆಯಿಲ್ಲದೆ ಪರಿತಪಿಸುವಂತಾಗಿದೆ. ನೇಮಕಾತಿ ಹೊಂದಿದ ವಲಯದಲ್ಲೇ 7 ವರ್ಷ ಪೂರೈಸಿದರೂ ತಾವು ಬಯಸಿದ ವಲಯ ಗಳಿಗೆ ವರ್ಗಾವಣೆಯಿಲ್ಲದೆ ನೊಂದಿದ್ದಾರೆ. ಈ ಹಿಂದೆ ತಾವೇ ರೂಪಿಸಿದ್ದ ಪಿಎಸ್‌ಐ ವರ್ಗಾವಣೆ ಸ್ನೇಹಿ ನಿಯಮವನ್ನು ಈಗಿನ ಕಾಂಗ್ರೆಸ್‌ ಸರಕಾರ ಪುನಃ ಜಾರಿಗೆ ತರಲಿದೆಯೇ ಎನ್ನುವ ನಿರೀಕ್ಷೆ ಮೂಡಿದೆ.

Advertisement

ಈ ಹಿಂದೆ ಪಿಎಸ್‌ಐ ನೇಮಕಾತಿ, ಜ್ಯೇಷ್ಠತೆ ಹಾಗೂ ವರ್ಗಾ ವಣೆ ಎಲ್ಲವೂ ರಾಜ್ಯಮಟ್ಟದಲ್ಲಿತ್ತು. ಆದರೆ 2014ರಲ್ಲಿ ವಲಯ ವಾರು ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಅಂದಿನಿಂದ ಇಲ್ಲಿಯವರೆಗೆ ಯಾವ ವಲಯದಲ್ಲಿ ನೇಮಕಾತಿ ಹೊಂದಿರು ತ್ತಾರೆಯೋ ಅಲ್ಲೇ ಪೊಲೀಸ್‌ ಇನ್‌ಸ್ಪೆಕ್ಟರ್‌ (ಪಿಐ/ಸಿಪಿಐ) ಭಡ್ತಿ ದೊರೆಯುವರೆಗೂ ಕರ್ತವ್ಯ ನಿರ್ವಹಿಸುವಂತಾಗಿದೆ.

ಭಡ್ತಿಯೊಂದಿಗೆ ವರ್ಗಾವಣೆ
2015ರಲ್ಲಿ 3 ವರ್ಷ ಸೇವೆ ಸಲ್ಲಿಸಿದ ಬಳಿಕ ತಾವು ಬಯಸಿದ ವಲಯಕ್ಕೆ ಅಲ್ಲಿನ ಖಾಲಿ ಹುದ್ದೆಗಳಿಗೆ ಪೂರಕವಾಗಿ ಸೇವಾ ಜ್ಯೇಷ್ಠತೆ ಉಳಿಸಿಕೊಂಡು ವರ್ಗಾವಣೆ ಪಡೆಯಬಹುದು ಎನ್ನುವ ನಿಯಮ ವಿತ್ತು. ಬಳಿಕ ಇದನ್ನು ಒಮ್ಮೆ ಐದು ವರ್ಷಗಳಿಗೆ, ಬಳಿಕ 7 ವರ್ಷಗಳಿಗೆ ಹೆಚ್ಚಿಸಿ ಆದೇಶಿಸಲಾಯಿತು. ಆದರೆ ಈಗ ಗೃಹ ಇಲಾಖೆಯು 7 ವರ್ಷದ ಸೇವಾವಧಿಯನ್ನೂ ರದ್ದುಗೊಳಿಸಿದೆ. ಹೀಗಾಗಿ ತಾವು ಬಯಸಿದ ವಲಯ ಅಥವಾ ರಾಜ್ಯದ ಯಾವುದೇ ಭಾಗಕ್ಕೆ ವರ್ಗಾವಣೆ ಪಡೆಯಬೇಕಾದರೆ ಭಡ್ತಿ ಪಡೆಯುವವರೆಗೂ ಕಾಯುವಂತಾಗಿದೆ.

ಅವೈಜ್ಞಾನಿಕ ನಿರ್ಧಾರ
ವಲಯವಾರು ನೇಮಕಾತಿ ನಿಯಮವಿರುವಾಗ ಆಯಾ ವಲಯವಾರು ಭಡ್ತಿ ನೀಡಿದರೆ ಅರ್ಹರಿಗೆ ಬೇಗ ಭಡ್ತಿ ದೊರೆಯುತ್ತದೆ. ಆದರೆ ನೇಮಕಾತಿ ವಲಯವಾರು, ಸೇವಾ ಜ್ಯೇಷ್ಠತೆಯನ್ನು ರಾಜ್ಯಾದ್ಯಂತ ಪರಿಗಣಿಸುವುದು ಯಾವ ನ್ಯಾಯ ಎಂಬುದು ವರ್ಗಾವಣೆಗೆ ಕಾಯುತ್ತಿರುವವರ ಪ್ರಶ್ನೆ. ವಲಯ ವ್ಯಾಪ್ತಿಯಲ್ಲಿ ಭಡ್ತಿ ಅವಕಾಶ ನೀಡಿದರೆ ಕೆಲವರಾದರೂ ತಾವು ಬಯಸಿದ ಕಡೆಗೆ ಹೋಗಲು ಅವಕಾಶ ಸಿಗುತ್ತದೆ ಎನ್ನುವ ಒತ್ತಾಯವಿದೆ. ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿ, ಸೇವಾ ಜ್ಯೇಷ್ಠತಾ, ಭಡ್ತಿ ಎಲ್ಲವೂ ಜಿಲ್ಲಾ ಮಟ್ಟದಲ್ಲಿ ನಡೆಯುತ್ತವೆ. ಹೀಗಿರುವಾಗ ನಮಗ್ಯಾಕೆ ಮತ್ತೂಂದು ನಿಯಮ. ಹಿಂದಿನ ಸರಕಾರ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಕೆಸಿಎಸ್‌ಆರ್‌ 16 ಎ ನಿಯಮವನ್ನು ರದ್ದುಗೊಳಿಸಿದ್ದರಿಂದ ಸಂಕಷ್ಟ ಅನುಭವಿಸುತ್ತಿದ್ದು, ಈ ದುರವಸ್ಥೆಗೆ ಕಾರಣರವಾದ ಸರಕಾರ ತಕ್ಕ ಪಾಠ ಕಲಿತಿದೆ ಎನ್ನುವ ಅಸಮಾಧಾನ ಇವರಲ್ಲಿದೆ.

ಪತಿ-ಪತ್ನಿ ಪ್ರಕರಣದಡಿ ವರ್ಗಾವಣೆ ಅವಕಾಶ ನೀಡಿದರಾದರೂ ಐದು ವರ್ಷ ಒಂದು ವಲಯದಲ್ಲಿ ಸೇವೆ ಸಲ್ಲಿಸಬೇಕು. ವರ್ಗಾವಣೆ ಬಯಸಿದರೆ ಐದು ವರ್ಷಗಳ ಜ್ಯೇಷ್ಠತೆಯನ್ನು ಬಿಟ್ಟುಕೊಡ ಬೇಕು ಎನ್ನುವ ನಿಯಮಕ್ಕೆ ತೀವ್ರ ವಿರೋಧವಿದೆ. ಸರಕಾರದ ಈ ಅವೈಜ್ಞಾನಿಕ ನಿರ್ಧಾರಗಳಿಂದ 2014ರಿಂದ ಇಲ್ಲಿಯವರೆಗೆ ನೇಮಕಾತಿ ಹೊಂದಿದ ಪಿಎಸ್‌ಐಗಳು ಸಂಕಷ್ಟ ಅನುಭವಿಸುವಂತಾಗಿದೆ. ಈ ನಿಯಮದಿಂದ ಕೆಲವು ಪ್ರಾಮಾಣಿಕ, ದಕ್ಷ ಅಧಿಕಾರಿಗಳ ಸೇವೆ ಒಂದು ವಲಯ ಅಥವಾ ಜಿಲ್ಲೆಗೆ ಸೀಮಿತಗೊಳಿಸಿದಂತಾಗಿದೆ.

Advertisement

ನಿಯಮ ತೆಗೆದು ಹಾಕಿ
ಸೇವೆಗೆ ಸೇರಿದ ದಿನದಿಂದ ಒತ್ತಡದಲ್ಲಿಯೇ ಕುಟುಂಬ, ಊರು ಬಿಟ್ಟು ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ವಯಸ್ಸಾದ ತಂದೆ-ತಾಯಿಯ ಕನಿಷ್ಠ ಯೋಗಕ್ಷೇಮ ವಿಚಾರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸರಕಾರ ಹಿಂದಿನಂತೆ ಪ್ರೊಬೆಷನರಿ ಪೂರ್ಣಗೊಂಡ ಬಳಿಕ ಸೇವಾ ಜ್ಯೇಷ್ಠತೆ ಕಳೆದುಕೊಳ್ಳದೆ ಕೋರಿಕೆ ಮೇರೆಗೆ ಒಂದು ಬಾರಿಗೆ ಅಂತರ್‌ ವಲಯ ವರ್ಗಾವಣೆ ನೀಡಬೇಕು. ಇದಕ್ಕೆ ತೊಡಕಾಗಿರುವ ನಿಯಮ ತೆಗೆದು ಹಾಕಿ ಏಳೆಂಟು ವರ್ಷ ಸೇವೆ ಸಲ್ಲಿಸಿದವರಿಗೆ ಕೂಡಲೇ ವರ್ಗಾವಣೆ ಭಾಗ್ಯ ನೀಡಬೇಕು ಎಂದು ಹೆಸರು ಹೇಳಲಿಚ್ಛಿಸದ ಪೊಲೀಸ್‌ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಬೇಡಿಕೆಗೆ ಸ್ಪಂದಿಸುತ್ತಾ ಸರಕಾರ?
ಸರಕಾರ ಕೆಸಿಎಸ್‌ಆರ್‌ 16 ಎ ಪುನರ್‌ ಸ್ಥಾಪನೆ ಮಾಡಿ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ವರ್ಗಾವಣೆ ಅವಕಾಶ ಕಲ್ಪಿಸಬೇಕು. ನೇಮಕಾತಿ ಹೊಂದಿದ ವಲಯದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದವರೆಗೆ ಬಯಸಿದ ವರ್ಗಾವಣೆ ನೀಡಬೇಕು. ಈ ಹಿಂದೆ ಕಾಂಗ್ರೆಸ್‌ ಸರಕಾರ ನಿಗದಿಗೊಳಿಸಿದ್ದ ಮೂರು ವರ್ಷದ ಸೇವೆಯನ್ನು ಸರಕಾರ ಅಂತಿಮಗೊಳಿಸಬೇಕು. ಕೆಸಿಎಸ್‌ಆರ್‌ 16 ಎ ಪುನರ್‌ಸ್ಥಾಪನೆ ಸಾಧ್ಯವಾಗದಿದ್ದರೆ ಪೊಲೀಸ್‌ ಇಲಾಖೆಯ ಪಿಎಸ್‌ಐ ವರ್ಗಾವಣೆಯನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಅವಕಾಶ ನೀಡಬೇಕು ಎಂಬುದಾಗಿದ್ದು, ಈ ಕುರಿತು ಗೃಹ ಸಚಿವರು ಹಾಗೂ ಸರಕಾರಕ್ಕೆ ಮನವಿ ಮಾಡುವ ಸಾಧ್ಯತೆಗಳಿವೆ.

 ಹೇಮರಡ್ಡಿ ಸೈದಾಪುರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next