Advertisement

ವರ್ಗಾವಣೆ ದಂಧೆ; ಪ್ರತಿ ಹುದ್ದೆಗೆ “ಶುಲ್ಕ”:ಸರಕಾರದ ವಿರುದ್ಧ HDK ವಾಗ್ಧಾಳಿ

10:49 PM Jun 08, 2023 | Team Udayavani |

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರಕಾರದ ವಿರುದ್ಧ ವಾಗ್ಧಾಳಿ ಮುಂದುವರಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ವರ್ಗಾವಣೆ ದಂಧೆ ಶುರುವಾಗಿದ್ದು, ಪ್ರತಿ ಹುದ್ದೆಗೂ “ರೇಟ್‌ ಫಿಕ್ಸ್‌’ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Advertisement

ಇದೇ ವೇಳೆ ಇಂಧನ ಇಲಾಖೆಯನ್ನು ಗುರಿಯಾಗಿಸಿಕೊಂಡು ಹರಿಹಾಯ್ದಿರುವ ಕುಮಾರಸ್ವಾಮಿ, ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಇಂಧನ ಇಲಾಖೆಯಲ್ಲಿ ನಡೆದ ಅವ್ಯವಹಾರ ಹಾಗೂ ಅಕ್ರಮ ಅದಿರು ಸಾಗಾಣಿಕೆ ಕುರಿತು ಸದನ ಸಮಿತಿಗಳ ವರದಿಯನ್ನು ಪ್ರಸ್ತಾವಿಸಿ “ಕುರಿ ಕಾಯಲು ತೋಳವನ್ನೇ ಬಿಟ್ಟಂತಾಗಿದೆ’ ಎಂದು ಕಾಂಗ್ರೆಸ್‌ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಪಕ್ಷದ ಕೇಂದ್ರ ಕಚೇರಿ ಜೆ.ಪಿ. ಭವನದಲ್ಲಿ ಗುರುವಾರ ವಿವಿಧ ಜಿಲ್ಲೆಗಳ ಮುಖಂಡರೊಂದಿಗೆ ಆತ್ಮಾವಲೋಕನ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಹಿಂದಿನ ಬಿಜೆಪಿ ಸರಕಾರವನ್ನು ಟೀಕಿಸುತ್ತಿದ್ದ ಇದೇ ಕಾಂಗ್ರೆಸ್‌ ನಾಯಕರು ಈಗ ಪ್ರತಿ ಹುದ್ದೆಗೆ ರೇಟ್‌ ಫಿಕ್ಸ್‌ ಮಾಡಿದ್ದಾರೆ. ಹಿಂದಿನ ಮುಖ್ಯಮಂತ್ರಿಗಳ ಬಗ್ಗೆ ಇವರೇ “ಪೇ ಸಿಎಂ’ ಎಂದು ಪ್ರಚಾರ ಮಾಡಿದರು. ಆದರೆ ಅದಕ್ಕಿಂತ ಜಾಸ್ತಿ ಈ ಸರಕಾರದಲ್ಲಿ ನಡೆಯುತ್ತಿದೆ. ಇದನ್ನು ಎಷ್ಟು ಪರ್ಸೆಂಟ್‌ ಸರಕಾರ ಎನ್ನಬೇಕು ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಅಕ್ರಮ ಅದಿರು ಸಾಗಾಣಿಕೆ ಕುರಿತಂತೆ 2013-18ರಲ್ಲಿ ಎಚ್‌.ಕೆ. ಪಾಟೀಲ್‌ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಲಾಗಿತ್ತು. ಸುದೀರ್ಘ‌ ಪರಿಶೀಲನೆ ಬಳಿಕ ಸಮಿತಿ ಒಂದು ವರದಿ ನೀಡಿತ್ತು. ಬಿಜೆಪಿಯದ್ದು 40 ಪರ್ಸಂಟ್‌ ಎನ್ನುವರು ಈ ವರದಿಯನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ಗ್ಯಾರಂಟಿಗಳ ಬಗ್ಗೆ ಸಚಿವರಿಗೆ ಮಾಹಿತಿ ಇಲ್ಲ
ಗ್ಯಾರಂಟಿಗಳ ಬಗ್ಗೆ ಸ್ವತಃ ಸಚಿವರಿಗೆ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಅವರೆಲ್ಲರೂ ಅರೆಬರೆ ಜ್ಞಾನದಿಂದ ಮಾತನಾಡುತ್ತಿದ್ದಾರೆ. ಅದು ಜನತೆಗೂ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು. ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರ ಹೇಳಿಕೆ ಗೊಂದಲ ಹುಟ್ಟಿಹಾಕಿದೆ. ಅವರೊಬ್ಬರೇ ಅಲ್ಲ, ಬಹುತೇಕ ಎಲ್ಲ ಸಚಿವರಿಗೆ ಗ್ಯಾರಂಟಿಗಳ ಬಗ್ಗೆ ಯಾವ ಮಾಹಿತಿಯೂ ಇಲ್ಲ, ಯಾವ ಗ್ಯಾರಂಟಿಯೂ ಇಲ್ಲ ಎಂದರು. ಗೃಹಜ್ಯೋತಿ ಯೋಜನೆಯ ಬಗ್ಗೆ ಸ್ವತಃ ಇಂಧನ ಸಚಿವ ಕೆ.ಜೆ.ಜಾರ್ಜ್‌ ಅವರಿಗೇ ಅರ್ಥ ಆಗಿಲ್ಲ. ಗೃಹಲಕ್ಷ್ಮಿ, ಗೃಹಜ್ಯೋತಿ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಕುತೂಹಲ, ನಿರೀಕ್ಷೆ ಹುಟ್ಟು ಹಾಕಲಾಗಿತ್ತು. ಈಗ ಸಚಿವರ ಹೇಳಿಕೆ ಗಮನಿಸಿದರೆ ಅವುಗಳ ಬಗ್ಗೆ ಖಾತರಿಯೂ ಇಲ್ಲ, ಸ್ಪಷ್ಟತೆಯೂ ಇಲ್ಲ ಎಂದು ಗೊತ್ತಾಗುತ್ತದೆ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next