Advertisement

ಪೊಲೀಸ್‌ ಬಂದೋಬಸ್ತ್ನಲ್ಲಿ ವರ್ಗಾವಣೆ ಕೌನ್ಸೆಲಿಂಗ್‌

10:00 AM Sep 17, 2019 | Team Udayavani |

ಧಾರವಾಡ: ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ 2018-19ನೇ ಸಾಲಿನ ಅಂತರ್‌ ಘಟಕ (ವಿಭಾಗದ ಒಳಗೆ ಮತ್ತು ವಿಭಾಗದ ಹೊರಗಿನ ಸಮಗ್ರ ಪಟ್ಟಿಯಂತೆ) ವರ್ಗಾವಣಾ ಕೌನ್ಸೆಲಿಂಗ್‌ಗೆ ನಗರದ ಡಯಟ್ ಆವರಣದಲ್ಲಿ ಸೋಮವಾರ ಚಾಲನೆ ದೊರೆತಿದೆ.

Advertisement

ಸೆ. 16ರಿಂದ 21ರ ವರೆಗೆ ಕ್ರಮಸಂಖ್ಯೆವಾರು ವರ್ಗಾವಣೆ ಕೌನ್ಸೆಲಿಂಗ್‌ ಜರುಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ ವರ್ಗಾವಣೆ ಬಯಸಿ ಬಂದಿದ್ದ ಶಿಕ್ಷಕರು ಸರ್ಕಾರದ ನಿಯಮಾವಳಿಗೆ ಆಕ್ಷೇಪ ವ್ಯಕ್ತಪಡಿಸಿದರು. ಶೇ. 20ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇರುವ ತಾಲೂಕುಗಳಿಂದ ವಿಭಾಗದ ಹೊರಗೆ ವರ್ಗಾವಣೆ ನೀಡುವುದಿಲ್ಲ ಎಂಬ ನಿಯಮಾವಳಿ ಆಕ್ರೋಶಕ್ಕೆ ಕಾರಣವಾಯಿತು. ನಂತರ ಸ್ಥಳಕ್ಕೆ ಬಂದ ಅಪರ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ಶಿಕ್ಷಕರೊಂದಿಗೆ ಚರ್ಚಿಸಿ, ಸರ್ಕಾರದ ನಿಯಮಾವಳಿ ಬಗ್ಗೆ ವಿವರಿಸಿದರು. ಆದರೆ ಅವರ ಮಾತಿಗೆ ಒಪ್ಪದ ಶಿಕ್ಷಕರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ಹೊರ ಹಾಕಿದರು.

ಶಿಕ್ಷಕರ ಅಳಲು: ಪ್ರತಿ ಕ್ಷೇತ್ರದಿಂದ ಶೇ.20 ಶಿಕ್ಷಕರ ವರ್ಗಾವಣೆ ಎಂಬ ನಿಯಮ ರದ್ದುಪಡಿಸಬೇಕು. ಕಡ್ಡಾಯ ವರ್ಗಾವಣೆಯನ್ನೂ ನಿಲ್ಲಿಸಬೇಕು. ಕೆಲವು ಕ್ಷೇತ್ರಗಳಲ್ಲಿ ಶಿಕ್ಷಕರ ಕೊರತೆ ಇದೆ. ಶೇ.20ಕ್ಕಿಂತ ಕಡಿಮೆ ಶಿಕ್ಷಕರ ಕೊರತೆ ಇರುವ ಕ್ಷೇತ್ರಗಳಿಗೆ ವರ್ಗಾವಣೆ ನಡೆಯುತ್ತಿಲ್ಲ. ಕೆಲ ಪ್ರದೇಶಗಳಿಗೆ ವರ್ಗಾವಣೆ ಬಯಸಿ ಹಲವು ವರ್ಷಗಳಿಂದ ಅರ್ಜಿ ಹಾಕುತ್ತಿದ್ದರೂ ಸಾಧ್ಯವಾಗಿಲ್ಲ ಎಂದು ಅಳಲು ತೋಡಿಕೊಂಡರು.

ಶಿಕ್ಷಕರ ಕೊರತೆ ನೀಗಿಸಲು ಸರ್ಕಾರ ನೇಮಕಾತಿ ಮಾಡಿಕೊಂಡಿಲ್ಲ. ಇದು ಶಿಕ್ಷಕರ ಸಮಸ್ಯೆ ಅಲ್ಲ. ಆದರೆ ನಿಗದಿತ ಸಂಖ್ಯೆಗಿಂತ ಕಡಿಮೆ ಶಿಕ್ಷಕರು ಇದ್ದಾರೆ ಎಂಬ ಕಾರಣಕ್ಕೆ ಈ ಕ್ಷೇತ್ರಕ್ಕೆ ಇತರರು ಹೋಗುವುದನ್ನು ತಡೆಯುವುದು ಸರಿಯಾದ ಕ್ರಮವಲ್ಲ. ಈ ಕಾಯ್ದೆಗೆ ತಿದ್ದುಪಡಿ ತಂದು ವರ್ಗಾವಣೆ ನಡೆಸಬೇಕು. ಸದ್ಯಕ್ಕೆ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.

ಆಯುಕ್ತರು ಗರಂ: ಇದಕ್ಕೆ ಪ್ರತಿಕ್ರಿಯಿಸಿದ ಅಪರ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ನೌಕರಿ ಮಾಡುವ ಸ್ಥಳಕ್ಕೆ ತಂದೆ-ತಾಯಿಯರನ್ನೂ ಕರೆದುಕೊಂಡು ಹೋಗಿ. ಅಲ್ಲಿಯೂ ನೆಮ್ಮದಿಯಿಂದ ಇರಬಹುದು. ಆದರೂ ಶಿಕ್ಷಕರ ಬೇಡಿಕೆಯನ್ನು ಸರ್ಕಾರಕ್ಕೆ ಮುಟ್ಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು. ಆದರೆ ಇದಕ್ಕೆ ಶಿಕ್ಷಕರು ಒಪ್ಪದೇ ಪ್ರತಿಭಟನೆ ಕೈಗೊಂಡು ಗೊಂದಲ ಉಂಟು ಮಾಡಿದರು.

Advertisement

ಇದರಿಂದ ಕೆರಳಿದ ಆಯುಕ್ತ ಹಿರೇಮಠ, ಪೊಲೀಸರನ್ನು ಕರೆಸಿ ಗದ್ದಲ ಮಾಡುವವರನ್ನು ಒದ್ದು ಒಳಗೆ ಹಾಕಿಸುವುದಾಗಿ ಹೇಳಿದರು. ಈ ಮಾತಿಗೆ ಮತ್ತಷ್ಟು ಕೆರಳಿದ ಶಿಕ್ಷಕರು, ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು. ಕೊನೆಗೆ ಆಯುಕ್ತರ ಸೂಚನೆ ಅನ್ವಯ ಸಂಜೆ 4 ಗಂಟೆ ನಂತರ ಸ್ಥಳಕ್ಕೆ ಪೊಲೀಸ್‌ ಸಿಬ್ಬಂದಿ ಹಾಗೂ ಕೆಎಸ್‌ಆರ್‌ಪಿ ತುಕಡಿಯನ್ನು ಕರೆಸಿ, ಬಂದೋಬಸ್ತ್ನಲ್ಲಿ ಕೌನ್ಸೆಲಿಂಗ್‌ ನಡೆಸಲಾಯಿತು.

ಪರಿಷ್ಕೃತ ವೇಳಾಪಟ್ಟಿ: ಸೆ.16ರಿಂದ ನಡೆದಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಘಟಕದ ಹೊರಗಿನ ವರ್ಗಾವಣೆ ಕೌನ್ಸೆಲಿಂಗ್‌ನ್ನು ಕ್ರಮಸಂಖ್ಯೆಗೆ ಅನುಗುಣವಾಗಿ ನಿಗದಿಪಡಿಸಲಾಗಿದ್ದು, ಆಯಾ ದಿನಾಂಕದಂದು ಶಿಕ್ಷಕರು ಹಾಜರಾಗಬೇಕಿದೆ. ಅಂತಿಮ ಆದ್ಯತಾ ಪಟ್ಟಿಯಲ್ಲಿರುವ ಕ್ರಮ ಸಂಖ್ಯೆಗಳಂತೆ ಸೆ. 16ರಂದು 1ರಿಂದ 300ರ ವರೆಗಿನ ಶಿಕ್ಷಕರ ಕೌನ್ಸೆಲಿಂಗ್‌ ಮುಗಿದಿದೆ.

17ರಂದು ಬೆಳಗ್ಗೆ 9ರಿಂದ 301-1500; 18ರಂದು ಬೆಳಗ್ಗೆ 9ರಿಂದ 1501-3000; 19ರಂದು ಬೆಳಗ್ಗೆ 9ರಿಂದ 3001-5000; 20ರಂದು ಬೆಳಗ್ಗೆ 9ರಿಂದ 5001-7000; 21ರಂದು ಬೆಳಗ್ಗೆ 9ರಿಂದ 7001-10000; 22ರಂದು ಬೆಳಗ್ಗೆ 9ರಿಂದ 10001ರಿಂದ 11340ರ ವರೆಗಿನ ಶಿಕ್ಷಕರ ಕೌನ್ಸೆಲಿಂಗ್‌ ನಡೆಯಲಿದೆ. ಸೆ.23 ರಂದು ಮುಖ್ಯ ಶಿಕ್ಷಕರು ಮತ್ತು ವಿಶೇಷ ಶಿಕ್ಷಕರ ಕೌನ್ಸೆಲಿಂಗ್‌ ನಡೆಯಲಿದೆ. ಬೆಳಗ್ಗೆ 9ರಿಂದ ಮುಖ್ಯಶಿಕ್ಷಕರು 1ರಿಂದ 355ರ ವರೆಗೆ, ವಿಶೇಷ ಶಿಕ್ಷಕರು 1 ರಿಂದ 371ರವರೆಗಿನ ಕೌನ್ಸೆಲಿಂಗ್‌ ನಡೆಯಲಿದೆ ಎಂದು ಅಪರ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next