Advertisement

ಸಾಯಲು ಅನುಮತಿ ಕೊಡಿ: ರಾಷ್ಟ್ರಪತಿಗೆ ಲಿಂಗಾಂತರಿ ಮಹಿಳೆ ಮನವಿ

07:16 PM Feb 14, 2018 | Team Udayavani |

ಹೊಸದಿಲ್ಲಿ : “ಲಿಂಗಾಂತರದ ಕಾರಣಕ್ಕೆ ಸರಕಾರಿ ಒಡೆತನದ ಏರಿಂಡಿಯಾ ಸಂಸ್ಥೆ ನನಗೆ ಉದ್ಯೋಗ ನಿರಾಕರಿಸಿರುವುದರಿಂದ ನನಗೆ ಸಾಯಲು ಅನುಮತಿ ಕೊಡಿ’ ಎಂದು ಲಿಂಗ ಪರಿವರ್ತಿತ ಮಹಿಳೆ ಶಾನವಿ ಪೊನ್ನುಸ್ವಾಮಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಲ್ಲಿ ಮನವಿ ಮಾಡಿಕೊಂಡಿದ್ದಾಳೆ. 

Advertisement

“ಲಿಂಗಾಂತರಿತ ಮಹಿಳೆಯರಿಗೆ ಉದ್ಯೋಗ ನೀಡುವ ‘ವರ್ಗ’ ನಮ್ಮಲ್ಲಿ ಇಲ್ಲ ಎಂದವರು ಹೇಳುತ್ತಾರೆ. ನನಗೆ ಶೈಕ್ಷಣಿಕ ಅರ್ಹತೆ ಇದೆ; ಅನುಭವವಿದೆ; ಹಾಗಿದ್ದರೆ ಕೇವಲ ನನ್ನ ಲಿಂಗ ಮಾತ್ರವೇ ನನಗೆ ಉದ್ಯೋಗಕ್ಕೆ ಅಡಚಣೆಯಾಗಿದೆಯೇ?’ ಎಂದು ಎಎನ್‌ಐ ಸುದ್ದಿ ಸಂಸ್ಥೆ ಜತೆ ಮಾತನಾಡುತ್ತಾ ಶಾನವಿ ಹೇಳಿದ್ದಾಳೆ. 

“ಲಿಂಗದ ಕಾರಣಕ್ಕೆ ನನಗೆ ಯಾವುದೇ ತೆರಿಗೆ ರಿಯಾಯಿತಿ ಸಿಗುವುದಿಲ್ಲ ವೆಂದಾದರೆ, ಅದೇ ಕಾರಣಕ್ಕೆ ನನಗೆ ಉದ್ಯೋಗವನ್ನು ಏಕೆ ನಿರಾಕರಿಸಬೇಕು?’ ಎಂದು ಪ್ರಶ್ನಿಸಿರುವ ಶಾನವಿ “ನನ್ನ ಸಾವು ಬದುಕು ಈಗ ರಾಷ್ಟ್ರಪತಿಗಳ ಕೈಯಲ್ಲಿದೆ’ ಎಂದು ಹೇಳಿದ್ದಾಳೆ. 

ಏರಿಂಡಿಯಾ ಉದ್ಯೋಗ ನಿರಾಕರಿಸಿದ ಬಳಿಕ ಶಾನವಿ ಬೇರೆ ಯಾವುದೇ ವಾಯು ಯಾನ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಿಲ್ಲ. ಆಕೆ ಹೇಳುತ್ತಾಳೆ : “ನಾನು ಬೇರೆ ಯಾವುದೇ ಏರ್‌ ಲೈನ್ಸ್‌ ನಲ್ಲಿ ಉದ್ಯೋಗಕ್ಕೆ ಪ್ರಯತ್ನಿಸಿಲ್ಲ ಏಕೆಂದರೆ ಸರಕಾರಿ ಒಡೆತನದ ಏರ್‌ ಲೈನ್ಸ್‌ ನಲ್ಲೇ ನನ್ನ ಲಿಂಗದ ವರ್ಗ ಇಲ್ಲವೆಂದಾದರೆ ಇನ್ನು ಖಾಸಗಿ ಏರ್‌ ಲೈನ್ಸ್‌ನಿಂದ ನಾನು ಏನನ್ನು ತಾನೇ ನಿರೀಕ್ಷಿಸಬಲ್ಲೆ?’.

ನ್ಯೂಸ್‌ ಮಿನಿಟ್‌ ಪ್ರಕಾರ ಶಾನವಿ ತನ್ನ ಕುಟುಂಬದಲ್ಲಿ ಪದವಿ ಸಂಪಾದಿಸಿದ ಮೊದಲ ವ್ಯಕ್ತಿ; ಆಕೆ ಶೈಕ್ಷಣಿಕ ಅರ್ಹತೆಯುಳ್ಳ ಇಂಜಿನಿಯರ್‌. ಆಕೆ ಮಾಡೆಲ್‌, ನಟಿ ಆಗಿಯೂ ಕೆಲಸ ಮಾಡಿದ್ದಾಳೆ; ಮೇಲಾಗಿ ಏರ್‌ ಲೈನ್ಸ್‌ ನ ಗ್ರಾಹಕ ಬೆಂಬಲ ವಿಭಾಗದಲ್ಲೂ ಕೆಲಸ ಮಾಡಿದ್ದಾಳೆ. 

Advertisement

ಶಾನವಿ 2016ರಲ್ಲಿ ಮೊದಲ ಬಾರಿಗೆ ಏರಿಂಡಿಯಾದಲ್ಲಿ ಕ್ಯಾಬಿನ್‌ ಕ್ರೂé ಹುದ್ದೆಗೆ ಅರ್ಜಿ ಹಾಕಿದ್ದಳು. “ಮಹಿಳಾ’ ವರ್ಗದಡಿಯ ಎಲ್ಲ ಮಾನದಂಡಗಳ ಪ್ರಕಾರ ಅರ್ಹತೆ ಇದ್ದ ಹೊರತಾಗಿಯೂ ಆಕೆಯನ್ನು ಏರ್‌ ಲೈನ್ಸ್‌ ನಾಲ್ಕು ಬಾರಿ ತಿರಸ್ಕರಿಸಿತ್ತು. ಆದರೆ ಏರಿಂಡಿಯಾ ಅದಕ್ಕೆ ಒಂದು ಬಾರಿಯೂ ಕಾರಣ ಕೊಟ್ಟಿರಲಿಲ್ಲ. ಕೊನೆಗೆ ಆಕೆಗೆ ಗೊತ್ತಾಯಿತೇನೆಂದರೆ ತಾನು ಲಿಂಗಾಂತರಿ ಆದ ಕಾರಣಕ್ಕೇನೇ ತನಗೆ ಅವಕಾಶ ನಿರಾಕರಿಸಲಾಗಿದೆ ಎಂದು. 

ಶಾನವಿ ತಮಿಳು ನಾಡಿನ ತೂತುಕುಡಿ ಜಿಲ್ಲೆಯ ತಿರುಚ್ಚೆಂದೂರಿನವಳು. ಅತ್ಯಂತ ಬಡ ಕುಟುಂಬದಿಂದ ಬಂದ ಹೊರತಾಗಿಯೂ ಆಕೆ 2010ರಲ್ಲಿ ಇಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಶನ್‌ ಇಂಜಿನಿಯರಿಂಗ್‌ ಪದವಿ ಪಡೆದಳು. ಆದರೆ ಆಕೆಗೆ ಮೊದಲ ಉದ್ಯೋಗ ಸಿಕ್ಕಿದ್ದು 2013ರಲ್ಲಿ.

ಲಿಂಗ ತಾರತಮ್ಯದ ಕಾರಣಕ್ಕೆ ತನಗೆ ಉದ್ಯೋಗ ನಿರಾಕರಿಸಲಾದುದನ್ನು ಆರೋಪಿಸಿ 2017ರಲ್ಲಿ ಶಾನವಿ ಸುಪ್ರೀಂ ಕೋರ್ಟ್‌ ಮೆಟ್ಟಲು ಹತ್ತಿದಳು. ಆಕೆಯ ಪ್ರಕರಣ ಇನ್ನೂ  ಅಲ್ಲಿ  ವಿಚಾರಣೆಗೆ ಬಾಕಿ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next