ಮಂಗಳೂರು: ಚಲಿಸುತ್ತಿದ್ದ ರೈಲಿನಲ್ಲಿ ಕಳೆದುಹೋಗಿದ್ದ ಚಿನ್ನಾಭರಣಗಳಿದ್ದ ಟ್ರಾಲಿ ಬ್ಯಾಗ್ ನಗರದ ಕುಲಶೇಖರದಲ್ಲಿ ರೈಲು ಹಳಿ ಪಕ್ಕದಲ್ಲಿ ಪತ್ತೆಯಾಗಿದೆ.
ರವೀಂದ್ರ ಎಂ.ಶೆಟ್ಟಿ ಮತ್ತು ಅವರ ಪತ್ನಿ ಶಶಿಕಲಾ ಶೆಟ್ಟಿ ಅವರು ಮುಂಬೈನಿಂದ ಮಂಗಳೂರಿಗೆ ಫೆ.27ರಂದು ರೈಲಿನಲ್ಲಿ ಬರುತ್ತಿದ್ದಾಗ ಸುರತ್ಕಲ್‌ನಿಂದ ಮಂಗಳೂರು ನಡುವೆ ಅವರ ಟ್ರಾಲಿ ಬ್ಯಾಗ್ ಕಳೆದು ಹೋಗಿತ್ತು. ಕಳವಾಗಿರುವ ಬಗ್ಗೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆಗೆ ಮಂಗಳೂರು ರೈಲ್ವೆ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ವಿಶೇಷ ತಂಡವು ರೈಲ್ವೆ ಸಿಬಂದಿಯೊಂದಿಗೆ ಟ್ರ್ಯಾಕ್ ಪ್ಯಾಟ್ರೋಲಿಂಗ್ ನಡೆಸುವಾಗ ಕುಲಶೇಖರ ಸುರಂಗ ಬಳಿ ತಿರುವಿನಲ್ಲಿ ರೈಲು ಹಳಿ ಸಮೀಪ ಟ್ರಾಲಿ ಬ್ಯಾಗ್ ಪತ್ತೆಯಾಗಿದೆ.
ಬ್ಯಾಗ್‌ನಲ್ಲಿ 245 ಗ್ರಾಂ ತೂಕದ ವಜ್ರದ ಮತ್ತು ಚಿನ್ನದ ಆಭರಣಗಳು ಸೇರಿದಂತೆ ಅಂದಾಜು ಸುಮಾರು 8,57,500 ರೂ. ಮೌಲ್ಯದ ಸೊತ್ತುಗಳಿದ್ದವು. ತನಿಖೆ ಮುಂದುವರೆಸಲಾಗಿದೆ.
ರೈಲ್ವೆ ಪೊಲೀಸ್ ಅಧೀಕ್ಷಕಿ ಡಾ| ಸೌಮ್ಯಲತಾ ಎಸ್.ಕೆ, ಉಪಾಧೀಕ್ಷಕ ಗೀತಾ ಸಿ.ಆರ್. ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಮಂಗಳೂರು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ತಾಯಿ ಜೊತೆ ಮಲಗಿದ್ದ ಹಸುಗೂಸನ್ನು ಎಳೆದೊಯ್ದು ಕಚ್ಚಿ ಕೊಂದ ಬೀದಿ ನಾಯಿ