ಪುತ್ತೂರು : ಕಲೆಯ ಜ್ಞಾನದ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಉದಯೋನ್ಮುಖ ಕಲಾವಿದರಿಗೆ ತರಬೇತಿ ನೀಡುವ ಕಾರ್ಯಾಗಾರ ಹಮ್ಮಿಕೊಂಡರೆ ಉತ್ತಮ ಎಂದು ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ನಿರ್ದೇಶಕ ಡಾ| ಹರಿಕೃಷ್ಣ ಪಾಣಾಜೆ ಹೇಳಿದರು.
ಅವರು ಶನಿವಾರ ನಗರದ ಮಂಜಲ್ಪಡು ಸುಧಾನ ವಸತಿಯುತ ಶಾಲಾ ಬಯಲು ರಂಗಮಂದಿರದಲ್ಲಿ ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪುತ್ತೂರು ಘಟಕ ಉದ್ಘಾಟಿಸಿ ಮಾತನಾಡಿದರು.
ಸಂಗೀತ, ಸಾಹಿತ್ಯ, ಅಭಿನಯ, ನಾಟ್ಯ ಸಹಿತ ಎಲ್ಲವನ್ನು ಒಳಗೊಂಡ ಯಕ್ಷಗಾನ ಕಲೆ ಪರಿಪೂರ್ಣ, ಶ್ರೀಮಂತಿಕೆ ತುಂಬಿದ ಕಲೆ. ಅಂತಹ ಕಲಾಸೇವೆಗೈದ ಹಿರಿಯರನ್ನು ಗುರುತಿಸುವ ನಿಟ್ಟಿನಲ್ಲಿ ಯಕ್ಷಧ್ರುವ ಪಟ್ಲ ಪೌಂಢಶೇಷನ್ ಕಾರ್ಯ ಪ್ರವೃತವಾಗಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.ಕಲಾ ವಿದ್ಯೆಯ ಜತೆಗೆ ವಿನಯ ಇದ್ದರೆ ಅದರಿಂದ ಯಶಸ್ಸು ಸಾಧ್ಯ. ಬದುಕಿನಲ್ಲಿ ಹಣವೊಂದಿದ್ದರೆ ಮಾತ್ರ ಸಾಲದು. ಅದನ್ನು ಸದ್ವಿನಿಯೋಗಿಸುವ ಗುಣವೂ ಬೇಕು. ಆಗ ಮಾತ್ರ ನಿಜವಾದ ಸುಖ ದೊರೆಯಲು ಸಾಧ್ಯ ಎಂದ ಅವರು ಟ್ರಸ್ಟ್ ಗುರಿ ತಲುಪಿ ಯಶಸ್ಸು ಹೊಂದಲಿ ಎಂದು ಹೇಳಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕ ಗೌರವಧ್ಯಕ್ಷ ಸವಣೂರು ಸೀತಾರಾಮ ರೈ ಮಾತನಾಡಿ, ಯಕ್ಷಗಾನ ಸರ್ವಶ್ರೇಷ್ಠ ಕಲೆ. ಅಂತಹ ಕಲೆಯನ್ನು ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸುವ, ಜತೆಗೆ ಕಲೆಯ ಮಹತ್ವವನ್ನು ಸಾರುವ ಕೆಲಸ ಪಟ್ಲ ಫೌಂಡೇಶನ್ ಟ್ರಸ್ಟ್ ಮೂಲಕ ನಡೆಯುತ್ತಿದೆ. ಆ ಕಾರ್ಯಕ್ಕೆ ಪುತ್ತೂರು ಘಟಕವೂ ಪೂರ್ಣ ಬೆಂಬಲ ನೀಡಲಿದೆ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಉದಾರ ದಾನಿಗಳ ನೆರವಿನಿಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾಕಾರರ ಸೇವೆಯಲ್ಲಿ ತೊಡಗಿದೆ. ಇದು ಸರ್ವರ ಒಗ್ಗೂಡುವಿಕೆಯ ಪ್ರಯತ್ನದ ಫಲ ಎಂದ ಅವರು, ಕಳೆದ ಒಂದೂವರೆ ವರ್ಷದಲ್ಲಿ 55 ಲಕ್ಷಕ್ಕೂ ಅಧಿಕ ಗೌರವಧನವನ್ನು ನೀಡಲಾಗಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ಟ, ಜನಪ್ರಿಯ ಯಕ್ಷಗಾನ ಕಲಾವಿದ ಮುಂಡಾಜೆ ಬಾಲಕೃಷ್ಣ ಶೆಟ್ಟಿ ಅವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ತಲಾ ಹತ್ತು ಸಾವಿರ ಗೌರವಧನ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಸುದಾನ ವಸತಿಯುತ ಶಾಲಾ ಸಂಚಾಲಕ ವಂ.ವಿಜಯ ಹಾರ್ವಿನ್, ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪುರುಷೋತ್ತಮ ಭಂಡಾರಿ, ಸುದೇಶ್ ರೈ, ಪುತ್ತೂರು ಘಟಕದ ಉಪಾಧ್ಯಕ್ಷರಾದ ಡಾ| ಅಶೋಕ್ ಪಡಿವಾಳ್, ಸುಬ್ರಹ್ಮಣ್ಯ ಭಟ್ ಪೆರುವೋಡಿ, ಕೋಶಾಧಿಕಾರಿ ಜಗಜೀವನದಾಸ್ ರೈ ಚಿಲ್ಮೆತ್ತಾರು, ಸಂಘಟನ ಕಾರ್ಯದರ್ಶಿಗಳಾದ ಸುಧೀರ್ ಕುಮಾರ್, ಚಂದ್ರಶೇಖರ ಶೆಟ್ಟಿ ಬೆಟ್ಟಂಪಾಡಿ, ಸದಸ್ಯರಾದ ರಾಕೇಶ್ ರೈ ಕೆಡೆಂಜಿ ಮೊದಲಾದವರು ಉಪಸ್ಥಿತರಿದ್ದರು.
ದಾಸಪ್ಪ ರೈ ಮತ್ತು ಗಂಗಾಧರ ರೈ ಅವರು ಅಭಿನಂದನ ಪತ್ರ ವಾಚಿಸಿದರು. ಪುತ್ತೂರು ಘಟಕದ ಅಧ್ಯಕ್ಷ ಜೈರಾಜ್ ಭಂಡಾರಿ ಪ್ರಸ್ತಾವನೆಗೈದರು. ಪ್ರಧಾನ ಸಂಚಾಲಕ ಪ್ರಶಾಂತ್ ರೈ ಮುಂಡಾಳಗುತ್ತು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಕೆ.ಸಿ ನಿರೂಪಿಸಿದರು.