Advertisement

ಪದವಿ ವಿದ್ಯಾರ್ಥಿಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತಿ

05:20 PM Dec 07, 2021 | Team Udayavani |

ಉಡುಪಿ: ಜಿಲ್ಲೆಯ ಎಸೆಸೆಲ್ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯ ಫ‌ಲಿತಾಂಶದಲ್ಲಿ ಶ್ರೇಷ್ಠತೆ ಉಳಿಸಿಕೊಳ್ಳಲು ವಿದ್ಯಾರ್ಥಿಗಳಿಂದಲೇ ವಿದ್ಯಾರ್ಥಿಗಳಿಗೆ ತರಬೇತಿ ಎಂಬ ವಿನೂತನ ಕಾರ್ಯಕ್ರಮ ರೂಪಿಸಲಾಗಿದೆ.

Advertisement

ಕೊರೊನಾ ಹಿನ್ನೆಲೆಯಲ್ಲಿ 2020-21ನೇ ಸಾಲಿನಲ್ಲಿ ಎಸೆಸೆಲ್ಸಿ ಪರೀಕ್ಷೆ ಸರಳೀಕೃತ ರೂಪದಲ್ಲಿ ನಡೆದಿತ್ತು. ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಸಿದ್ಧತೆ ಈಗಾಗಲೇ ಆರಂಭವಾಗಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೇ.20ರಷ್ಟು ಪಠ್ಯವನ್ನು ಕಡಿತ ಮಾಡಿದೆ. ಜಿಲ್ಲೆಯ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಲು ಅನುಕೂಲ ಆಗುವಂತೆ ಜಿ.ಪಂ. ಹಾಗೂ ಜಿಲ್ಲೆಯ ಶಿಕ್ಷಣ ಇಲಾಖೆ, ಎನ್‌ಜಿಒ ಸಹಕಾರದಲ್ಲಿ ಪದವಿ ವಿದ್ಯಾರ್ಥಿಗಳು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಲಿಕೆ, ಫ‌ಲಿತಾಂಶ ಉನ್ನತೀಕರಣ, ಶಿಕ್ಷಣ ಕೌಶಲದ ಬಗ್ಗೆ ತರಬೇತಿ ನೀಡಲಿದ್ದಾರೆ.

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳಲ್ಲಿ ಸ್ಪೆಶಲ್‌ ಕ್ಲಾಸ್‌, ಪ್ರಯೋಗಾತ್ಮಕ ತರಗತಿಗಳು ನಡೆಸುತ್ತಿವೆ. ಆಯಾ ಶಾಲೆಗಳಲ್ಲಿ ಉತ್ತಮ ಫ‌ಲಿತಾಂಶಕ್ಕೆ ಬೇಕಾದ ಕ್ರಮ ತೆಗೆದುಕೊಳ್ಳಲಾಗುತ್ತದೆ. ಜಿಲ್ಲೆಯ ಒಟ್ಟಾರೆ ಫ‌ಲಿತಾಂಶ ಹೆಚ್ಚಿಸುವ ಮತ್ತು ಅದರಲ್ಲಿ ಪ್ರತೀ ವರ್ಷ ಶ್ರೇಷ್ಠತೆ ಕಾಪಾಡಿಕೊಳ್ಳುವ ಜಿಲ್ಲೆಯ ಪದವಿ, ಎಂಜಿನಿಯರಿಂಗ್‌ ಕಾಲೇಜುಗಳ ಮೂಲಕ ಪ್ರೌಢಶಾಲಾ ಮಕ್ಕಳಿಗೆ ತರಬೇತಿ ನೀಡುವ ಕಾರ್ಯ ಆರಂಭವಾಗಿದೆ.

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಗೂ ಆದ್ಯತೆ
ಜಿಲ್ಲೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳ ಕೊರತೆಯಿಲ್ಲ. ಆದರೆ, ಸೂಕ್ತ ಮಾರ್ಗದರ್ಶನ ದೊರಕುತ್ತಿಲ್ಲ. ಹೀಗಾಗಿ ಈ ವರ್ಷ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ಭಾಗವಹಿಸಲು ವಿಶೇಷ ಮಾರ್ಗದರ್ಶನ ನೀಡಲಿದ್ದೇವೆ.

ಜಿಲ್ಲೆಯ ಸರಕಾರಿ, ಅನುದಾನಿತ, ಅನುದಾನರಹಿತ ಪ್ರೌಢಶಾಲೆ 10ನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಎನ್‌.ಟಿ.ಎಸ್‌.ಇ ಪರೀಕ್ಷೆ ಬರೆಯಲು ಉತ್ತೇಜನ ನೀಡುತ್ತಿದ್ದೇವೆ. ಕಳೆದ ವರ್ಷ 11 ವಿದ್ಯಾರ್ಥಿಗಳು ಈ ಪರೀಕ್ಷೆ ತೇರ್ಗಡೆಯಾಗಿದ್ದರು. ಈ ವರ್ಷ ಕನಿಷ್ಠ 500 ವಿದ್ಯಾರ್ಥಿಗಳು ತೇರ್ಗಡೆಯಾಗುವಂತೆ ಮಾಡುವ ಗುರಿ ಹೊಂದಿದ್ದೇವೆ ಎಂದು ಜಿ.ಪಂ.ಸಿಇಒ ಡಾ| ನವೀನ್‌ ಭಟ್‌ ತಿಳಿಸಿದ್ದಾರೆ.

Advertisement

ತರಬೇತಿ ಏನು?
ಸದ್ಯ ನಾಲ್ಕು ಗ್ರಾ.ಪಂ.ನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪದವಿ, ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳ ಮೂಲಕ ವಾರಕ್ಕೆ ಒಮ್ಮೆ ಗ್ರಾ.ಪಂ. ಗ್ರಂಥಾಲಯದಲ್ಲಿ ತರಬೇತಿ ನೀಡಲಾಗುತ್ತಿದೆ. ಓದು, ಬರವಣಿಗೆಯ ಜತೆಗೆ ಗಣಿತ, ವಿಜ್ಞಾನದ ಮೂಲಾಂಶಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳ ಶಿಕ್ಷಣ ಕೌಶಲ ಹೇಗಿದೆ ಎಂಬುದನ್ನು ಸಂಗ್ರಹಿಸುತ್ತಿದ್ದಾರೆ. ಒಟ್ಟಾರೆಯಾಗಿ ಪ್ರೌಢಶಾಲಾ ವಿದ್ಯಾರ್ಥಿಗಳು ಅಧ್ಯಯನದ ಮೇಲೆ ಹೆಚ್ಚಿನ ಆಸಕ್ತಿ ವಹಿಸಲು ಬೇಕಾದ ಕ್ರಮ ಇದರಿಂದ ಆಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ನಾಲ್ಕು ಗ್ರಾ.ಪಂ.ಗಳಲ್ಲಿ ಪ್ರಯೋಗ
ಪದವಿ ವಿದ್ಯಾರ್ಥಿಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಹೊಸ ಪ್ರಯೋಗವನ್ನು ಸದ್ಯ ಜಿಲ್ಲೆಯ ನಾಲ್ಕು ಗ್ರಾ.ಪಂ.ಗಳಲ್ಲಿ ಆರಂಭಿಸಿದ್ದೇವೆ. ಇದಕ್ಕೆ ಎನ್‌ಒಜಿ ಸಹಾಯ ಪಡೆಯುತ್ತಿದ್ದೇವೆ. ಇದರ ಫ‌ಲಿತಾಂಶದ ಆಧಾರದಲ್ಲಿ ಎಲ್ಲ ಗ್ರಾ.ಪಂ.ಗಳಿಗೂ ವಿಸ್ತರಿಸುವ ಯೋಚನೆಯಿದೆ. ವಿಶೇಷವಾಗಿ 8ನೇ ತರಗತಿ ಮಕ್ಕಳನ್ನು ಈಗಿನಿಂದಲೇ ಎಸೆಸೆಲ್ಸಿ ಪರೀಕ್ಷೆಗೆ ಸಜ್ಜುಗೊಳಿಸಲು ಈ ಪ್ರಯತ್ನ ನಡೆಸುತ್ತಿದ್ದೇವೆ.
-ಡಾ| ನವೀನ್‌ ಭಟ್‌,
ಜಿ.ಪಂ. ಸಿಇಒ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next