Advertisement

ರೈಲು ಢಿಕ್ಕಿ: 60 ಅಡಿ ಆಳಕ್ಕೆ ಬಿದ್ದ ಗೂಳಿ ರಕ್ಷಣೆ

03:35 PM Mar 09, 2017 | Team Udayavani |

ಉಡುಪಿ: ಉಡುಪಿ ನಗರದ ಹೊರವಲಯದಲ್ಲಿರುವ ಕುಕ್ಕಿಕಟ್ಟೆ ರೈಲ್ವೇ ಮೇಲ್ಸೇತುವೆಯ ಸಮೀಪದಲ್ಲಿ ರೈಲು ಢಿಕ್ಕಿ ಹೊಡೆದ ಪರಿಣಾಮ ಸರಿಸುಮಾರು 60 ಅಡಿ ಕಂದಕಕ್ಕೆ ಬಿದ್ದು ಅಪಾಯದಲ್ಲಿ ಸಿಲುಕಿಕೊಂಡಿದ್ದ ಗೂಳಿಯನ್ನು ಬುಧವಾರ ಬೆಳಗ್ಗೆ ಸಮಾಜ ಸೇವಕರ ತಂಡವು ಯಶಸ್ವಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದೆ.

Advertisement

ಅಲೆವೂರು ಯುವಕ ಸಂಘದ ಸದಸ್ಯರು ಮಂಗಳವಾರ ಸಮಾಜ ಸೇವಕ ವಿಶು ಶೆಟ್ಟಿ ಅವರಿಗೆ ವಿಷಯ ಮುಟ್ಟಿಸಿದ್ದರು. ಅದೇ ದಿನ ಘಟನಾ ಸ್ಥಳಕ್ಕೆ ತೆರಳಿ ನೋಡಿದಾಗ ಗೂಳಿಯ ಕಾಲಿಗೆ ಪೆಟ್ಟಾಗಿ ನಡೆದಾಡಲಾಗದ ಪರಿಸ್ಥಿತಿಯಲ್ಲಿ ಇತ್ತು. ಅಲ್ಲಿಯೇ ಉಪಚಾರಗಳನ್ನು ಮಾಡಿ ಮೇವು- ನೀರಿನ ವ್ಯವಸ್ಥೆಗೊಳಿಸಿದರು. ಕತ್ತಲಾಗಿದ್ದರಿಂದ ಗೂಳಿ ರಕ್ಷಣಾ ಕಾರ್ಯಾಚರಣೆಯನ್ನು ಮರುದಿನ ಅಂದರೆ ಬುಧವಾರ ನಸುಕಿನ ಸಮಯಕ್ಕೆ ನಡೆಸಲು ನಿರ್ಧರಿಸಲಾಯಿತು.

ಸಮಾಜಸೇವಕ ವಿಶು ಶೆಟ್ಟಿ ಅವರ ಮುಂದಾಳತ್ವದಲ್ಲಿ ಬೆಳಗ್ಗೆ 6.30ಕ್ಕೆ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಯಿತು. ಕ್ರೇನ್‌, ಜೇಸಿಬಿ ಯಂತ್ರದ ಸಹಾಯ, ಸಾಮಾಜಿಕ ಕಾರ್ಯಕರ್ತ ಕೃಷ್ಣ ಅಂಬಲಪಾಡಿ, ಪಶು ವೈದ್ಯ ಡಾ| ಸಂದೀಪ್‌ ಶೆಟ್ಟಿ ಮತ್ತು ಅಲೆವೂರು ಯುವಕ ಸಂಘದ ಸದಸ್ಯರ ಸಹಕಾರದೊಂದಿಗೆ ಗೂಳಿಗೆ ವೈದ್ಯರಿಂದ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕಾರ್ಯಾಚರಣೆ ಪ್ರಾರಂಭಿಸಲಾಯಿತು.

“3 ಗಂಟೆಯ ಕಾರ್ಯಾಚರಣೆ’
ನೆಲಮಟ್ಟದಿಂದ ಸುಮಾರು 60 ಅಡಿ ಆಳದಲ್ಲಿ ಗೂಳಿ ಇದ್ದ ಕಾರಣ, ಸ್ಥಳಕ್ಕೆ ಹೋಗಲು ಕ್ರೇನ್‌ಗೆ ರಸ್ತೆಯ ಸಮಸ್ಯೆ ಎದುರಾಯಿತು. ಜೆಸಿಬಿ ಯಂತ್ರದ ಮುಖಾಂತರ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿ ಕ್ರೇನ್‌ಗೆ ದಾರಿ ಮಾಡಿಕೊಡಲಾಯಿತು. ಗೂಳಿಯ ಸೊಂಟದ ಭಾಗಕ್ಕೆ ಬೆಲ್ಟ್ ಅಳವಡಿಸಿ ಕ್ರೇನ್‌ ಮುಖಾಂತರ ಮೇಲಕ್ಕೆತ್ತುವ ಪ್ರಯತ್ನ ನಡೆಯುತ್ತಿದ್ದಂತೆಯೇ ನೋವಿನ ಕಾರಣದಿಂದ ಗೂಳಿ ಒದ್ದಾಟ ಮಾಡಲಾರಂಭಿಸಿತು. ಕೆಳಗೆ ಬೀಳುವ ಅಪಾಯವಿದ್ದ ಕಾರಣ ಗೂಳಿಯನ್ನು ನಿಧಾನವಾಗಿ ಕೆಳಗಿಳಿಸಲಾಯಿತು. ಆನಂತರದಲ್ಲಿ ವೈದ್ಯರ ಸಹಾಯದಿಂದ ಅರವಳಿಕೆ ಚುಚ್ಚು ಮದ್ದು ನೀಡಿ ಗೂಳಿಯನ್ನು ಯಶಸ್ವಿಯಾಗಿ ಮೇಲಕ್ಕೆ ಎತ್ತಲಾಯಿತು. ಸುಮಾರು ಮೂರು ಗಂಟೆಗಳ ಕಾಲ ಗೂಳಿ ರಕ್ಷಣಾ ಕಾರ್ಯಾಚರಣೆ ನಡೆಯಿತು.

“ಪಾಲನೆಯ ಹೊಣೆ, ಉಚಿತ ಸೇವೆ’
ಮುಂದಿನ ದಿನಗಳಲ್ಲಿ ವಾರಸುದಾರರು ಇಲ್ಲದ ಗೂಳಿ ಪಾಲನೆಯ ಹೊಣೆಯನ್ನು ಅಲೆವೂರು ಯುವಕ ಸಂಘ ವಹಿಸಿಕೊಂಡಿದೆ. ಪಶು ವೈದ್ಯ ಡಾ| ಸಂದೀಪ್‌ ಶೆಟ್ಟಿ ಅವರು ಗೂಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುವ ಭರವಸೆ ನೀಡಿದ್ದಾರೆ. ಗೂಳಿ ರಕ್ಷಣಾ ಕಾರ್ಯಾಚರಣೆಗೆ ಜೇಸಿಬಿ ಯಂತ್ರವನ್ನು ಅಭಿನಂದನ್‌ ಶ್ರೀಧರ್‌ ಶೆಟ್ಟಿ ಅವರು ಉಚಿತವಾಗಿ ಒದಗಿಸಿದರು. ಕ್ರೇನ್‌ ಅನ್ನು ಶ್ರೀದೇವಿ ಕ್ರೇನ್‌ನ ಮಾಲಕ ಸುಧೀರ್‌ ಶೆಟ್ಟಿ ಉಚಿತವಾಗಿ ನೀಡಿದರು. ಡಾ|ಸಂದೀಪ್‌ ಶೆಟ್ಟಿ ಉಚಿತ ವೈದ್ಯಕೀಯ ಸೇವೆ ನೀಡಿದರು.

Advertisement

“ಗೂಳಿಗಳಿಗೆ ಸೂಕ್ತ ವ್ಯವಸ್ಥೆ-ಆಗ್ರಹ’
ವಾರಸುದಾರರಿಲ್ಲದ ಅಲೆಮಾರಿ ಗೋವುಗಳಿಗೆ ಆಶ್ರಯ ನೀಡುವ ಸೂಕ್ತವಾದ ವ್ಯವಸ್ಥೆಯನ್ನು ಸರಕಾರ ಮಾಡಬೇಕಿದೆ. ಬೀದಿಯಲ್ಲಿದ್ದರೆ ರಸ್ತೆ ಅಪಘಾತಗಳಿಂದ ಸಾವು- ನೋವುಗಳಿಗೆ ಕಾರಣವಾಗುತ್ತವೆ. ಗೋವು ಕಳ್ಳರಿಂದಾಗಿ ಸಮಾಜದ ಆರೋಗ್ಯವು ಕೆಡುತ್ತದೆ. ಹಾಗಾಗಿ ಸರಕಾರ, ಧಾರ್ಮಿಕ ಮುಖಂಡರು, ಜನನಾಯಕರು, ಅಧಿಕಾರಿ ವರ್ಗದವರು, ಸಾರ್ವಜನಿಕರು ಈ ವಿಚಾರದಲ್ಲಿ ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ವಿಶು ಶೆಟ್ಟಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next