ಬೋಸ್ಟನ್: ನದಿ ಸೇತುವೆಯ ಮೇಲೆ ಸಾಗುತ್ತಿದ್ದ ರೈಲಿನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಅಮೆರಿಕದ ಬೋಸ್ಟನ್‌ನ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.
ಸುಮಾರು 200 ಜನರನ್ನು ರೈಲಿನಿಂದ ಹೊರಕ್ಕೆ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನವರು ರೈಲಿನ ಕಿಟಕಿಗಳ ಮೂಲಕ ತಪ್ಪಿಸಿಕೊಂಡರು, ಒಬ್ಬ ಮಹಿಳೆ ಕೆಳಗಿನ ಮಿಸ್ಟಿಕ್ ನದಿಗೆ ಹಾರಿದ್ದಾರೆ ಎಂದು ವರದಿಯಾಗಿದೆ.
ರೈಲಿನ ಶೀಟ್ ಮೆಟಲ್ ಅಥವಾ ಸೈಡ್ ಪ್ಯಾನೆಲ್ ನ ಒಂದು ಭಾಗವು ಮೂರನೇ ಹಳಿಯೊಂದಿಗೆ ತಾಗಿದ ಪರಿಣಾಮ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಧಿಕಾರಿಗಳು ಪ್ರಾಥಮಿಕ ತಪಾಸಣೆಯ ಬಳಿಕ ಮಾಹಿತಿ ನೀಡಿದ್ದಾರೆ.
“ಇಂದು ಬೆಳಿಗ್ಗೆ, ಆರೆಂಜ್ ಲೈನ್ ರೈಲು ವೆಲ್ಲಿಂಗ್ಟನ್ ಮತ್ತು ಅಸೆಂಬ್ಲಿ ನಿಲ್ದಾಣದ ನಡುವಿನ ಸೇತುವೆಯ ಮೂಲಕ ಪ್ರಯಾಣಿಸುತ್ತಿದ್ದಾಗ ಅದರ ಹೆಡ್ ಕಾರಿನಿಂದ ಬೆಂಕಿ ಮತ್ತು ಹೊಗೆ ಬಂದ ಬಗ್ಗೆ ವರದಿಯಾಗಿದೆ” ಎಂದು ಮ್ಯಾಸಚೂಸೆಟ್ಸ್ ಬೇ ಸಾರಿಗೆ ಪ್ರಾಧಿಕಾರ ಹೇಳಿದೆ.
ಇದನ್ನೂ ಓದಿ:ಮಹತ್ವದ ಆದೇಶ: ‘ಅವಿವಾಹಿತ ಮಹಿಳೆ’ಯ ಗರ್ಭಪಾತಕ್ಕೆ ಸುಪ್ರೀಂ ಕೋರ್ಟ್ ಅನುಮತಿ
ಜನರು ತಮ್ಮನ್ನು ರಕ್ಷಿಸಿಕೊಳ್ಳಲು ರೈಲಿನ ಕಿಟಕಿಗಳಿಂದ ಜಿಗಿದ ಬಗ್ಗೆ ವೀಡಿಯೊಗಳು ಟ್ವಿಟರ್ ವೈರಲ್ ಆಗಿದೆ. ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ, ನದಿಗೆ ಹಾರಿದ ಮಹಿಳೆಯೂ ವೈದ್ಯಕೀಯ ಆರೈಕೆಯನ್ನು ನಿರಾಕರಿಸಿದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.