“ವಿಧಿ 370′ ಎಂಬ ಸಿನಿಮಾವೊಂದು ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ, ಬಿಡುಗಡೆಯ ಹಂತಕ್ಕೆ ಬಂದಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ (ಆರ್ಟಿಕಲ್ 370) ವನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರ ಅದನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದೆ. “ವಿಧಿ 370′ ರದ್ದಾದ ನಂತರ ಜಮ್ಮು ಮತ್ತು ಕಾಶ್ಮೀರ ಈಗ ಹೇಗಿದೆ ಎಂಬುದನ್ನು ಈಗ “ಆರ್ಟಿಕಲ್ 370′ ಸಿನಿಮಾದ ಮೂಲಕ ತೆರೆಮೇಲೆ ಹೇಳಲು ಹೊರಟಿದೆ.
“ಲೈರಾ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ಭರತ್ ಗೌಡ ಮತ್ತು ಸಿ. ರಮೇಶ್ ನಿರ್ಮಿಸಿರುವ “ಆರ್ಟಿಕಲ್ 370′ ಚಿತ್ರಕ್ಕೆ ಕೆ. ಶಂಕರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ದೊಡ್ಡರಂಗೇಗೌಡ, ನಟಿ ಶ್ರುತಿ, ಯೋಧ ಜಯರಾಮ್ ಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
Related Articles
ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ದೊಡ್ಡ ರಂಗೇಗೌಡ, “ಹಿಂದೂ ಮುಸ್ಲಿಂ ಸಮುದಾಯ ನಡುವೆ ಭಾವೈಕ್ಯತೆ ಮೂಡಿಸುವ ತಿರುಳು ಹೊಂದಿರುವ ಚಿತ್ರವಿದು. ಮಗಳು ರಾಷ್ಟ್ರಪ್ರೇಮಿ, ಆದರೆ ಮಗ ರಾಷ್ಟ್ರದ್ರೋಹದ ಕೆಲಸ ಮಾಡುತ್ತಾನೆ. ಈ ತರಹದ ಒಂದು ಸನ್ನಿವೇಶದಲ್ಲಿ ನನ್ನ ಪಾತ್ರ ಬರುತ್ತದೆ’ ಎಂದರು.
ನಟಿ ಶ್ರುತಿ ಮಾತನಾಡಿ, “ಒಬ್ಬ ಕಲಾವಿದೆಯಾಗಿ ಒಂದು ಪಾತ್ರವನ್ನು ಒಪ್ಪಿಕೊಳ್ಳಬೇಕಾದರೆ, ಸಾಕಷ್ಟು ಯೋಚನೆ ಮಾಡುತ್ತೇನೆ. ಆದರೆ ಈ ಪಾತ್ರವನ್ನು ಹೇಳಿದ ಕೂಡಲೇ ಒಪ್ಪಿದೆ. ದೇಶದ ಗಡಿಯನ್ನು ಕಾಯುತ್ತಿರುವ ಯೋಧನ ಪತ್ನಿಯ ಪಾತ್ರ. ನನಗೆ ತುಂಬಾ ತೃಪ್ತಿ ಕೊಟ್ಟಿತು. ಪ್ರತಿ ವರ್ಷ ನನಗೆ ಇಂಥದ್ದೊಂದು ಪಾತ್ರ ಸಿಗುತ್ತಿದೆ’ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
ನಂತರ ಮಾತನಾಡಿದ ನಿರ್ದೇಶಕ ಕೆ.ಶಂಕರ್, ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಕಾಯಿದೆ ಜಾರಿಯಾದ ನಂತರ ಮತ್ತು ಅದನ್ನು ತೆರವುಗೊಳಿಸಿದ ನಂತರ ನಡೆದಂಥ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಿದ್ದೇವೆ ಎಂದರು.