Advertisement

ರೀಲ್‌ನಲ್ಲೊಂದು ರಿಯಲ್‌ ಸ್ಟೋರಿ!

11:55 AM Dec 07, 2022 | Team Udayavani |

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಹಳ್ಳಿಗಾಡಿನ ವಿದ್ಯಾರ್ಥಿನಿ ಒಬ್ಬಳು ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಬರೆದ ನೈಜ ರೋಚಕ ಘಟನೆಯನ್ನು ಆಧರಿಸಿ ತಯಾರಾದ “ತನುಜಾ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.

Advertisement

ಸದ್ಯ “ತನುಜಾ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮೊದಲ ಟ್ರೇಲರ್‌ ಬಿಡುಗಡೆ ಮಾಡಿದೆ. ಆರೋಗ್ಯ ಸಚಿವ ಡಾ. ಸುಧಾಕರ್‌, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ “ತನುಜಾ’ ಸಿನಿಮಾದ ಮೊದಲ ಟ್ರೇಲರ್‌ ಬಿಡುಗಡೆಯಾಯಿತು.

“ಬಿಯಾಂಡ್‌ ವಿಷನ್‌ ಸಿನಿಮಾಸ್‌’ ಬ್ಯಾನರ್‌ ಅಡಿಯಲ್ಲಿ ಚಂದ್ರಶೇಖರ ಗೌಡ, ಮನೋಜ್‌ ಬಿ. ಜಿ ನಿರ್ಮಾಣ ಮಾಡಿರುವ “ತನುಜಾ’ ಸಿನಿಮಾಕ್ಕೆ ಹರೀಶ್‌ ಎಂ. ಡಿ ಹಳ್ಳಿ ನಿರ್ದೇಶನ ಮಾಡಿದ್ದಾರೆ. “ತನುಜಾ’ ಸಿನಿಮಾದಲ್ಲಿ ಸಪ್ತಾ ಪಾವೂರ್‌, ರಾಜೇಶ್‌ ನಟರಂಗ, ಚಿತ್ಕಲಾ ಬಿರಾದಾರ್‌, ಸಂಧ್ಯಾ, ಸತೀಶ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ. ಎಸ್‌ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಸುಧಾಕರ್‌ ಕೂಡಾ ಸಿನಿಮಾದಲ್ಲಿ ಅತಿಥಿ ಕಲಾವಿದರಾಗಿ ವಿಶೇಷ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ತನುಜಾ’ ಟ್ರೇಲರ್‌ ಬಳಿಕ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಸಪ್ತಾ ಪಾವೂರ್‌, “ನಾನು ನಿಜವಾದ ತನುಜಾ ಅವರನ್ನು ನೋಡಿಲ್ಲ. ಆದರೆ ಅವರ ತಾಯಿಯನ್ನು ಭೇಟಿಯಾಗಿ ತನುಜಾ ಹೇಗಿದ್ದಾರೆ. ಅವರ ಓದು- ಹವ್ಯಾಸಗಳೇನು, ಓದಿನ ಕಡೆಗೆ ಅವರಿಗೆ ಇದ್ದ ಆಸಕ್ತಿ ಎಲ್ಲವನ್ನೂ ತಿಳಿದುಕೊಂಡೆ. ನಿರ್ದೇಶಕರು ಪಾತ್ರ ನಿರ್ವಹಿಸುವಲ್ಲಿ ಸಾಕಷ್ಟು ಸಹಕಾರ ನೀಡಿದ್ದಾರೆ’ ಎಂದರು.

ಆರೋಗ್ಯ ಸಚಿವ ಡಾ. ಸುಧಾಕರ್‌ ಮಾತನಾಡಿ, “ಆರಂಭದಲ್ಲಿ ನಿರ್ದೇಶಕ ಹರೀಶ್‌ ಬಂದು ಸಿನಿಮಾ ಮಾಡುವ ಬಗ್ಗೆ ಹೇಳಿದಾಗ ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. “ತನುಜಾ’ ಕಥೆ ಸಿನಿಮಾ ವಾಗುತ್ತದೆ ಎಂದು ಭಾವಿಸಿರಲಿಲ್ಲ. ಪಿಯುಸಿ ಮುಗಿದ ಮೇಲೆ ನಾನೂ ಕೂಡ ಒಂದು ವರ್ಷ ಮೆಡಿಕಲ್‌ ಸೀಟ್‌ ಸಿಗದೆ ವ್ಯವಸಾಯ ಮಾಡಿಕೊಂಡಿದ್ದೆ. ಆಕೆಗೂ ಹೀಗೆ ಆಗಿತ್ತು. ಒಮ್ಮೆ ನಿರ್ಧಾರ ತೆಗೆದುಕೊಂಡಾಗ ಕೆಲಸವಾಗಲಿಲ್ಲ ಎಂದು ನಂತರ ಮನಸ್ಸು ಬದಲಾಗಬಹುದು. ಆದ್ದರಿಂದ ನಮ್ಮ ಕಡೆಯಿಂದ ಆದಷ್ಟು ಸಹಾಯ ಮಾಡಿದೆ. ಏನೆನೋ ಪ್ರಯತ್ನ ಮಾಡಿ ಆಕೆ ಪರೀಕ್ಷೆ ಬರೆಯುವಲ್ಲಿ ನೆರವಾಗಿದ್ದು ಸಂತೋಷ ತಂದಿದೆ’ ಎಂದರು.

Advertisement

“ತನುಜಾ’ ಚಿತ್ರಕ್ಕೆ ರವೀಂದ್ರನಾಥ ಟಿ. ಛಾಯಾಗ್ರಹಣ, ಉಮೇಶ್‌ ಆರ್‌. ಬಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಪ್ರದ್ಯೋತನ್‌ ಸಂಗೀತ ಸಂಯೋಜಿಸಿದ್ದು, ಜಯಂತ ಕಾಯ್ಕಿಣಿ ಸಾಹಿತ್ಯವಿದೆ. ಸದ್ಯ ಟ್ರೇಲರ್‌ ಬಿಡುಗಡೆ ಮಾಡಿರುವ “ತನುಜಾ’ ಚಿತ್ರತಂಡ, ಜನವರಿ ವೇಳೆಗೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next