Advertisement

ತೆರೆಮರೆಗೆ ಸರಿದ ಕ್ರೀಡಾಪ್ರತಿಭೆ: ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಚಾಲಕ ವೃತ್ತಿವರೆಗೆ

11:36 AM Dec 01, 2021 | Team Udayavani |

ಜೀವನವೇ ಹಾಗೆ, ಕೆಲವೇ ಕ್ಷಣಗಳಲ್ಲಿ ಬದಲಾಗಿ ಬಿಡುತ್ತದೆ. ಒಮ್ಮೆ ಯಶಸ್ಸಿನ ಶಿಖರವೇರಿದವರೂ ಮತ್ತೊಮ್ಮೆ ಪ್ರಪಾತವನ್ನು ಕಾಣಬೇಕಾಗುತ್ತದೆ. ಗೆದ್ದಾಗ ಹಿಗ್ಗದೆ ಸೋತಾಗ ಕುಗ್ಗದೆ ಜೀವನ ಸಾಗಿಸಬೇಕು ಎನ್ನುವ ಹಿರಿಯರ ಮಾತಿಗೆ ಅರ್ಥ ಬರುವುದು ಇದೇ ಕಾರಣಕ್ಕೆ.

Advertisement

ಒಂದು ಕಾಲದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದವರು ನಂತರ ಹೇಳ ಹೆಸರಿಲ್ಲದಂತೆ ನೆಲಕಚ್ಚಿದ್ದನ್ನು ನಾವು ಕಂಡಿದ್ದೇವೆ. ಅದು ಉದ್ಯಮಿಗಳು ಇರಬಹುದು, ಕಲಾವಿದರು ಇರಬಹುದು ಅಥವಾ ಕ್ರೀಡಾಪಟುಗಳೇ ಆಗಿರಬಹುದು. ಇದು ಅಂತಹದೇ ಒಂದು ಕಥೆ.

ಅರ್ಶದ್ ಖಾನ್. ಒಂದು ಕಾಲದಲ್ಲಿ ಸಚಿನ್, ಸೆಹವಾಗ್ ರ ವಿಕೆಟ್ ಕಿತ್ತು ಮೆರೆದಾಡಿದ್ದ ಪಾಕಿಸ್ಥಾನದ ಮಾಜಿ ಅಫ್ ಸ್ನಿನ್ನರ್ ಅರ್ಶದ್ ಖಾನ್ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುವ ಹಂತಕ್ಕೆ ತಲುಪಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದ ಅರ್ಶದ್ ಖಾನ್ ಒಂದು ನಿರ್ಧಾರದಿಂದ ಎಲ್ಲವನ್ನೂ ಕಳೆದುಕೊಳ್ಳ ಬೇಕಾಯಿತು.

1971ರಲ್ಲಿ ಪೇಶಾವರ್ ನಲ್ಲಿ ಜನಿಸಿದ ಅರ್ಶದ್ ಖಾನ್ ಬಲಗೈ ಆಫ್ ಸ್ಪಿನ್ನರ್ ಆಗಿದ್ದರು. 1997-98 ಋತುವಿನಲ್ಲಿ ಪಾಕಿಸ್ಥಾನ ರಾಷ್ಟ್ರೀಯ ತಂಡದ ಕರೆ ಪಡೆದ ಅರ್ಶದ್ ಖಾನ್, ಮುಂದಿನ ವರ್ಷ ನಡೆದ ಏಶ್ಯನ್ ಟೆಸ್ಟ್ ಚಾಂಪಿಯನ್ ಶಿಪ್ ಗೆದ್ದ ತಂಡದ ಭಾಗವಾಗಿದ್ದರು. 2001ರವರೆಗೆ ಪಾಕಿಸ್ಥಾನ ತಂಡದ ಪ್ರಮುಖ ಭಾಗವಾಗಿದ್ದ ಅರ್ಶದ್ ಖಾನ್ ಹಲವು ವೈಫಲ್ಯಗಳ ನಂತರ ತಂಡದಿಂದ ಹೊರಗುಳಿಯಬೇಕಾಯಿತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಅರ್ಶದ್ ಖಾನ್ ಗೆ ಮತ್ತೆ ನಾಲ್ಕು ವರ್ಷ ರಾಷ್ಟ್ರೀಯ ತಂಡದಲ್ಲಿ ಅವಕಾಶವೇ ಸಿಗಲಿಲ್ಲ. ನಾಲ್ಕು ವರ್ಷಗಳ ಕಾಲ ದೇಶಿಯ ಕ್ರಿಕೆಟ್ ನಲ್ಲಿ ಆಡಿದ ಅರ್ಶದ್ ಮತ್ತೆ ಆಯ್ಕೆಗಾರರ ಗಮನ ಸೆಳೆದರು. 2005ರಲ್ಲಿ ಪಾಕ್ ತಂಡದ ಭಾರತ ಪ್ರವಾಸದಲ್ಲಿ ಅರ್ಶದ್ ಖಾನ್ ಮರಳಿ ಸ್ಥಾನ ಪಡೆದರು.

Advertisement

ಭಾರತದ ವಿರುದ್ಧ ಸರಣಿಯಲ್ಲಿ ಅರ್ಶದ್ ಖಾನ್ ಉತ್ತಮ ಪ್ರದರ್ಶನ ನೀಡಿದ್ದರು. ಆ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್, ವೀರೆಂದ್ರ ಸೆಹವಾಗ್ ಮುಂತಾದ ದಿಗ್ಗಜರ ವಿಕೆಟ್ ಪಡೆದು ಅರ್ಶದ್ ಮಿಂಚಿದ್ದರು. ಅದರಲ್ಲೂ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡ ಸೋಲಿನಿಂದ ತಪ್ಪಿಸಿಕೊಳ್ಳಲು ಅರ್ಶದ್ ಕೊಡುಗೆ ನೀಡಿದ್ದರು. ಆದರೆ ವಿಪರ್ಯಾಸವೆಂದರೆ ಅದೇ ಬೆಂಗಳೂರು ಟೆಸ್ಟ್ ಪಂದ್ಯ ಅರ್ಶದ್ ಖಾನ್ ಜೀವನದ ಕೊನೆಯ ಟೆಸ್ಟ್ ಪಂದ್ಯವಾಗಿತ್ತು.

ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಅರ್ಶದ್ ಖಾನ್ 58 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ್ದರು. ಇದರಲ್ಲಿ 56 ವಿಕೆಟ್ ಪಡೆದಿದ್ದಾರೆ. 9 ಟೆಸ್ಟ್ ಪಂದ್ಯ ಆಡಿದ್ದ ಅರ್ಶದ್ ಖಾನ್ 32 ವಿಕೆಟ್ ಪಡೆದಿದ್ದರು.

2007ರಲ್ಲಿ ಆರಂಭವಾದ ಐಸಿಎಲ್ (ಇಂಡಿಯನ್ ಕ್ರಿಕೆಟ್ ಲೀಗ್) ಎಂಬ ಬಂಡಾಯ ಟಿ20 ಲೀಗ್ ನಲ್ಲಿ ಆಡಲು ಮುಂದಾಗಿದ್ದು ಅರ್ಶದ್ ಖಾನ್ ಎಂಬ 6.4 ಅಡಿ ಉದ್ದ ಎತ್ತರದ ಸ್ಪಿನ್ನರ್ ಗೆ ಮುಳುವಾಯಿತು. ಐಸಿಸಿ ಮತ್ತು ಬಿಸಿಸಿಐ ಗೆ ವಿರುದ್ಧವಾಗಿ ಆರಂಭವಾದ ಐಸಿಎಲ್ ಕೂಟ ಎರಡು ಮಂಡಳಿಯ ಕೋಪಕ್ಕೆ ಗುರಿಯಾಗಿತ್ತು.

ಐಸಿಎಲ್ ನ ಲಾಹೋರ್ ಬಾದ್ ಶಾಹ ತಂಡದಲ್ಲಿ ಆಡಿದ್ದ ಅರ್ಶದ್ ಖಾನ್ ರ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನ ಕೊನೆಗೊಂಡಿತು. ಐಸಿಎಲ್ ನಲ್ಲಿ ಆಡಿದ್ದ ಭಾರತೀಯ ಆಟಗಾರರನ್ನು ಬಿಸಿಸಿಐ ಬ್ಯಾನ್ ಮಾಡಿತ್ತು. ಪಾಕಿಸ್ಥಾನ ಕೂಡಾ ಇದೇ ರೀತಿಯ ನಿರ್ಣಯ ಕೈಗೊಂಡಿತ್ತು. 2009ರಲ್ಲಿ ಐಪಿಎಲ್ ನ ಹೊಡೆತಕ್ಕೆ ಸಿಲುಕಿದ ಐಸಿಎಲ್ ಕೊನೆಯಾಯಿತು. ಬಂಡಾಯ ಕೂಟದಲ್ಲಿ ಆಡಿದ್ದ ಆಟಗಾರರಿಗೂ ಸಂಕಷ್ಟ ಉಂಟಾಯಿತು.

ಕ್ರಿಕೆಟ್ ನಿಂದ ದೂರವಾದ ಅರ್ಶದ್ ಖಾನ್ 2015ರಲ್ಲಿ ಆಸ್ಟ್ರೇಲಿಯಾಗೆ ತೆರಳಿದ್ದರು. ಅಲ್ಲಿ ಸಿಡ್ನಿಯಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಒಂದು ಪೋಸ್ಟ್ ಅರ್ಶದ್ ಖಾನ್ ರ ಈ ಸ್ಥಿತಿಯನ್ನು ತೆರದಿಟ್ಟಿತ್ತು.

ಅರ್ಶದ್ ಖಾನ್ ರ ಕ್ಯಾಬ್ ಏರಿದ್ದ ಯುವಕನೋರ್ವನಿಗೆ ಕ್ಯಾಬ್ ಚಾಲಕನನ್ನು ಮಾತಿಗೆಳೆದಿದ್ದ. “ತಾನು ಪಾಕಿಸ್ಥಾನದವನು, ಸದ್ಯ ಸಿಡ್ನಿಯಲ್ಲಿ ನೆಲೆಸಿದ್ದೇನೆ. ಐಸಿಎಲ್ ನಲ್ಲಿ ಅಡುತ್ತಿದ್ದಾಗ ಹೈದರಾಬಾದ್ ಗೆ ಹೋಗಿದ್ದೆ” ಎಂದು ಅರ್ಶದ್ ಹೇಳಿಕೊಂಡಿದ್ದ ಎಂದು ಆತ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ.

ಸದ್ಯ ಅರ್ಶದ್ ಖಾನ್ ಪಾಕಿಸ್ಥಾನಕ್ಕೆ ಮರಳಿದ್ದಾರೆ. ಪಾಕಿಸ್ಥಾನ ಮಹಿಳಾ ಕ್ರಿಕೆಟ್ ತಂಡ ಕೋಚ್ ಆಗಿ ಅರ್ಶದ್ ಖಾನ್ ಕೆಲಸ ಮಾಡುತ್ತಿದ್ದಾರೆ.

– ಕೀರ್ತನ್ ಶೆಟ್ಟಿ ಬೋಳ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next