ಕನಕಪುರ: ಪೂರ್ವಿಕರ ಕಾಲದಿಂದಲೂ ಅಂತರ್ಜಲಕ್ಕೆ ಕೊಂಡಿಯಾಗಿ ರೈತರ ಜೀವನಾಡಿ ಯಾಗಿದ್ದ ಮಾವತ್ತೂರು ಕೆರೆ ಇತ್ತೀಚಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಕೆರೆಯ ಅಂಧ ಮತ್ತು ಕೋಡಿ ಬಿದ್ದು ಜಲಪಾತದಂತೆ ಹರಿಯುವ ನೀರನ್ನು ನೋಡಲು, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು, ಕೆರೆಯಲ್ಲಿ ಈಜಲು ಹೋಗಿ ಕಾಲು ಜಾರಿ ಬಿದ್ದು ಕಳೆದ 6 ತಿಂಗಳ ಅವಧಿಯಲ್ಲಿ ನಾಲ್ಕೈದು ಮಂದಿ ಸಾವನ್ನಪ್ಪಿದ್ದಾರೆ.
ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು, ಓರ್ವ ಖಾಸಗಿ ಕಂಪನಿ ಉದ್ಯೋಗಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರ, ಸಂಸದ ಬಿ.ಆರ್.ರಾಘವೇಂದ್ರ ಅವರ ಛಾಯಾಗ್ರಹಕ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಜೊತೆಗೆ ವೃದ್ಧನೊಬ್ಬ ಇದೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
20 ವರ್ಷಗಳ ಬಳಿಕ ಭರ್ತಿ: ತಾಲೂಕಿನಲ್ಲಿ ಅತಿ ವಿಶಾಲವಾದ ಕೆರೆ ಎಂಬ ಹೆಗ್ಗಳಿಕೆ ಪಡೆದಿರುವ ಮಾವತ್ತೂರು ಕೆರೆ ಸುಮಾರು 200 ಎಕರೆ ಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿದೆ. ಈಗಾಗಲೇ ಕೆರೆ ಕೆಲವು ಭಾಗಗಳಲ್ಲಿ ಒತ್ತುವರಿಯೂ ಆಗಿದೆ. ಬಹಳ ವಿಶಾಲವಾಗಿರುವ ಕೆರೆ ಕಳೆದ 20 ವರ್ಷಗಳಿಂದ ಮಳೆಯ ಅಭಾವದಿಂದ ಭರ್ತಿ ಯಾಗಿರಲಿಲ್ಲ. ಆದರೆ, ಕಳೆದೆರಡು ವರ್ಷಗಳಿಂದ ಬೀಳುತ್ತಿರುವ ನಿರೀಕ್ಷೆಗೂ ಮೀರಿದ ಮಳೆಯಿಂದ ಮಾವತ್ತೂರು ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಕೋಡಿ ಹರಿಯುವ ದೃಶ್ಯವು ಚಿಕ್ಕದಾದ ಜಲಪಾತದ ರೀತಿ ಕಾಣುತ್ತದೆ. ನೀರು ಮೇಲಿಂದ ಧುಮ್ಮಿ ಕ್ಕುವುದರಿಂದ ನೋಡುಗರನ್ನು ಆಕರ್ಷಿಸುತ್ತದೆ.
6 ತಿಂಗಳಿನಿಂದ ಕೋಡಿ: ಪ್ರಸ್ತುತ ವರ್ಷ ಸುರಿದ ಮಳೆಯಿಂದ ಸಂಪೂರ್ಣ ಭರ್ತಿಯಾಗಿರುವ ಮಾವತ್ತೂರು ಕೆರೆ ಕಳೆದ 6 ತಿಂಗಳಿಂದಲೂ ಕೋಡಿ ಹರಿಯುತ್ತಿದೆ. ಕೋಡಿ ಹರಿಯುವ ನೀರು ಜಲಪಾತದಂತೆ ಧುಮ್ಮಿಕ್ಕುವ ದೃಶ್ಯವನ್ನು ಕೆಲವರು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದು ವೈರಲ್ ಆಗಿ ಸುತ್ತಮುತ್ತಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕೆರೆ ನೋಡಲು ಬರುತ್ತಿದ್ದಾರೆ. ಜೊತೆಗೆ ತಾಲೂಕಿನ ಹೊರ ಭಾಗಗಳಿಂದಲೂ ಸಾಕಷ್ಟು ಪ್ರವಾಸಿಗರು ಆಗಮಿಸುತ್ತಾರೆ. ವಾರಾಂತ್ಯದಲ್ಲಿ ಹೆಚ್ಚು ಮಂದಿ ಭೇಟಿ ನೀಡುತ್ತಿದ್ದಾರೆ. ಇದರಿಂದ ಮಾವತ್ತೂರು ಕೆರೆ ಇತ್ತೀಚೆಗೆ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ.
Related Articles
ಸೆಲ್ಫಿ ಗೀಳು: ಕೆರೆಯನ್ನು ವೀಕ್ಷಣೆ ಮಾಡಲು ಬರುವ ಪ್ರವಾಸಿಗರು ಅದರ ಅಪಾಯವನ್ನು ಅರಿಯದೇ ಈಜು ಬಾರದಿದ್ದರೂ ನೀರಿಗಿಳಿಯುವ ದುಸ್ಸಾಹಸ ಮಾಡಿ ಜೀವ ಕಳೆದುಕೊಂಡಿದ್ದಾರೆ. ಕೆಲವರು ಕೆರೆ ಕೋಡಿಯ ಮೇಲೆ ನಡೆದು ಹೋಗುವಾಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಇನ್ನು ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ನೀರುಪಾಲಾಗಿದ್ದಾರೆ. ನೀರಿನಲ್ಲಿ ಮುಳುಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿವೆ.
30 ಅಡಿ ಆಳ: ಮಾವತ್ತೂರು ಕೆರೆ ಸುಮಾರು 30 ಅಡಿಗಳಷ್ಟು ಆಳವಾಗಿದೆ. ಇಲ್ಲಿ ಸಾವನ್ನಪ್ಪುವವರ ಮೃತದೇಹಗಳನ್ನು ಪತ್ತೆ ಹಚ್ಚುವುದು ಸವಾಲಿನ ಕೆಲಸವಾಗಿದೆ. ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ನುರಿತ ಈಜುಗಾರರು ಪ್ರಾಣವನ್ನು ಪಣಕ್ಕಿಟ್ಟು ಮೃತದೇಹ ಹುಡುಕಬೇಕು. ಕೆಲವು ಮೃತದೇಹ ಪತ್ತೆಹಚ್ಚಲು ಹಗಲು ರಾತ್ರಿ ಎನ್ನದೆ ಮೂರು ದಿನ ಕಾರ್ಯಾಚರಣೆ ಮಾಡಿ ಮೃತ ದೇಹ ಮೇಲೆತ್ತಿರುವ ಉದಾಹರಣೆಗಳಿವೆ.
ಇದೀಗ ಎಚ್ಚೆತ್ತ ಪೊಲೀಸರು: ಮೇಲಿಂದ ಮೇಲೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದರೂ, ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆ, ಸ್ಥಳೀಯ ಪೊಲೀಸ ರಾಗಲಿ, ಗ್ರಾಮ ಪಂಚಾಯ್ತಿ ಅಧಿಕಾರಿಗಳಾಗಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ. ಕೆರೆಯ ಸಮೀಪದಲ್ಲಿ ಅಪಾಯ ಸೂಚಿಸುವ ನಾಮಫಲಕಗಳನ್ನು ಹಾಕಿ ಪ್ರವಾಸಿಗರು ಕೆರೆಯ ಸಮೀಪ ಹೋಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳದ ಕಾರಣ ನಾಲ್ಕೈದು ಜೀವಗಳು ಬಲಿಯಾಗಿವೆ. ಹೀಗಾಗಿಯೇ ಶುಕ್ರವಾರ(ಜ.6) ಮತ್ತೂಬ್ಬ ವೈದ್ಯ ವಿದ್ಯಾರ್ಥಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಇದರಿಂದ ಇದೀಗ ಎಚ್ಚೆತ್ತುಕೊಂಡ ಗ್ರಾಮಾಂತರ ಠಾಣೆಯ ಪೊಲೀಸರು ಕೆರೆ ಸುತ್ತಲೂ ಫೆನ್ಸ್ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಕ್ರಮ ಈ ಹಿಂದೆಯೇ ಕೈಗೊಂಡಿದ್ದರೆ ಮೂರ್‍ನಾಲ್ಕು ಜೀವ ಗಳು ಬಲಿಯಾಗುವುದನ್ನು ತಪ್ಪಿಸಬಹುದಿತ್ತು.
ಸುರಕ್ಷತಾ ಕ್ರಮ, ಒತ್ತುವರಿ ತೆರವುಗೊಳಿಸಿ : ನೀರಿನಲ್ಲಿ ಐವರು ಆಹುತಿಯಾದ ಬಳಿಕ ಇದೀಗ ಗ್ರಾಮಾಂತರ ಠಾಣೆ ಪೊಲೀಸರು ಕೆರೆಗೆ ತಂತಿಬೇಲಿ ಹಾಕಲು ಮುಂದಾಗಿದ್ದಾರೆ. ನೆಪ ಮಾತ್ರಕ್ಕೆ ಹಾಕದೇ ಕಟ್ಟುನಿಟ್ಟಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಸೆಲ್ಫಿ ತೆಗೆಯುವ ಸ್ಥಳ ಸೇರಿದಂತೆ ಅಲ್ಲಲ್ಲಿ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಬೇಕು. ಜೊತೆಗೆ ಈ ಮಾವತ್ತೂರು ಕೆರೆಯ ವಿವಿಧ ಭಾಗಗಳು ಒತ್ತುವರಿಯಾಗಿದ್ದು, ನೀರಾವರಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಅತಿಕ್ರಮಣ ತೆರವುಗೊಳಿಸಿ, ಕೆರೆಯನ್ನು ಸಂರಕ್ಷಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ನಡೆದ ಪ್ರಕರಣಗಳು:
2022ರ ಸೆಪ್ಟೆಂಬರ್ 14 : 2022ರ ಸೆ.14 ರಂದು ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಲು ಬಂದಿದ್ದ ಬೆಂಗಳೂರಿನ ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಓದುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ಬೇಲೂರು ಮೂಲದ ಸಚಿನ್ ಕುಮಾರ್ (26) ಮಾವತ್ತೂರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ.
2022ರ ಡಿಸೆಂಬರ್ 23: 2022ರ ಡಿಸೆಂಬರ್ ತಿಂಗಳ 23ರಂದು ತಮಿಳುನಾಡು ರಾಜ್ಯದ ತಿರುಚಿ ಮೂಲದ ಮಹಮ್ಮದ್ ಯಾಸಿರ್ ಎಂಬಾತ ಕೆರೆನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದನು.
2023ರ ಜನವರಿ 1 : ಜ.1ರಂದು ಹೊಸ ವರ್ಷ ಆಚರಣೆಗೆ ಬಂದಿದ್ದ ಮಾಜಿ ಸಿಎಂ ಯಡಿಯೂರಪ್ಪ ಪುತ್ರ, ಸಂಸದ ಬಿ.ಆರ್. ರಾಘವೇಂದ್ರ ಅವರ ಛಾಯಾಗ್ರಹಕ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರಸನ್ನ ಭಟ್ (25) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
2023ರ ಜನವರಿ 6 : ಈ ವರ್ಷ ಜನವರಿ 6 ರಂದು ಶುಕ್ರವಾರ ಎಂಬಿಬಿಎಸ್ ವಿದ್ಯಾ ರ್ಥಿ, ಕೋಲಾರ ಮೂಲದ ಅಶ್ವತ್ಥರೆಡ್ಡಿ ಅವರ ಪುತ್ರ ಭರತ್ ರೆಡ್ಡಿ (24) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.
2022ರ ಮಾರ್ಚ್ : 2022ರ ಮಾರ್ಚ್‌ನಲ್ಲಿ ಶಿವನಹಳ್ಳಿ ಗ್ರಾಮದ ನಿಂಗಯ್ಯ ಎಂಬ ವೃದ್ಧರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ 6 ತಿಂಗಳ ಅವಧಿಯಲ್ಲಿ ಐವರು ಮಾವತ್ತೂರು ಕೆರೆಯಲ್ಲಿ ಮೃತಪಟ್ಟಿದ್ದಾರೆ.
-ಬಿ.ಟಿ.ಉಮೇಶ್ ಬಾಣಗಹಳ್ಳಿ