ಮೈಸೂರು: ಮಗನ ಹುಚ್ಚಾಟದಿಂದ ಘಟಿಸಿದ ಅಪರಾಧ ಪ್ರಕರಣವೊಂದು ಒಂದಿಡೀ ಕುಟುಂಬವನ್ನು ಬಲಿ ಪಡೆದ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.
ಮಾಡಿದ ಅಪರಾಧಕ್ಕೆ ಅಪ್ಪ-ಮಗ ಜೈಲು ಸೇರಿದರೆ, ಕುಟುಂಬದ ಮೇಲೆರಗಿದ ಅವಮಾನ ತಾಳಲಾರದೇ ತಾಯಿ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ. ಪತ್ನಿ ಸಾವಿನ ಸುದ್ದಿ ತಿಳಿದು ಆಘಾತಕ್ಕೊಳಗಾದ ಪತಿಯೂ ಜೈಲಿನಲ್ಲೇ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಇಡೀ ಕುಟುಂಬದ ಬದುಕು ಮೂರಾಬಟ್ಟೆಯಾಗಿದೆ.
ಪ್ರಕರಣದ ಹಿನ್ನೆಲೆ: ಕಳೆದ 3 ದಿನಗಳ ಹಿಂದೆಯಷ್ಟೇ ಮೈಸೂರಿನ ನಜರ್ ಬಾದ್ ಠಾಣೆ ವ್ಯಾಪ್ತಿಯ ವಿದ್ಯಾನಗರ ಬಡಾವಣೆಯಲ್ಲಿ ಬಾಲರಾಜು ಎಂಬ 28 ವರ್ಷದ ಯುವಕನ ಕೊಲೆಯಾಗಿತ್ತು. ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರ ಪ್ರಸ್ತಾಪದ ವೇಳೆ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಕೆಲವೇ ಗಂಟೆಗಳ ಅಂತರದಲ್ಲಿ ಪೊಲೀಸರು ಬಂಧಿ ಸಿದ್ದರು.
ವಿದ್ಯಾನಗರ ಬಡಾವಣೆ ನಿವಾಸಿಗಳೇ ಆದ ತೇಜಸ್, ಸಂಜಯ್, ಕಿರಣ್ ಹಾಗೂ ಸಾಮ್ರಾಟ್ ಬಂಧಿತರು. ಪ್ರಕರಣದ ಮೊದಲ ಆರೋಪಿ ತೇಜಸ್ ಎಂಬಾತ 4ನೇ ಆರೋಪಿ ಸಾಮ್ರಾಟ್ ಅವರ ಪುತ್ರ. ಮತ್ತಿಬ್ಬರು ಆರೋಪಿಗಳೊಂದಿಗೆ ಅಪ್ಪ ಮಗನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.
ಪತ್ನಿ ಸಾವಿನ ಸುದ್ದಿ ತಿಳಿದು ಸಾವು: ಪ್ರಕರಣದ ಬಳಿಕ ಸಾಮ್ರಾಟನ ಕುಟುಂಬದ ಬಗ್ಗೆ ಇಡೀ ಬಡಾವಣೆ ಜನ ಛೀ ಥೂ ಎನ್ನತೊಡಗಿತು. ಇದರಿಂದ ನೊಂದ ಸಾಮ್ರಾಟನ ಪತ್ನಿ ಇಂದ್ರಾಣಿ ಕಳೆದ ಭಾನುವಾರ ರಾತ್ರಿ ತಮ್ಮದೇ ಮನೆಯಲ್ಲಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದರು. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಪತ್ನಿ ಸಾವಿನ ಸುದ್ದಿ ಜೈಲಿನಲ್ಲಿರುವ ಅಪ್ಪ-ಮಗನಿಗೆ ತಿಳಿದಿದೆ. ಪತ್ನಿ ಸಾವಿನ ಸುದ್ದಿ ಕೇಳಿ ಕುಸಿದುಬಿದ್ದ ಗಂಡ ಸಾಮ್ರಾಟ್ ಕೆಲ ನಿಮಿಷಗಳಲ್ಲೇ ಉಸಿರು ಚೆಲ್ಲಿದ್ದಾನೆ.
ಶವಗಳ ಹಸ್ತಾಂತರ: ನಂತರ ಮಹಜರು ಪ್ರಕ್ರಿಯೆ ನಡೆಸಿದ ಮಂಡಿ, ನಜರ್ ಬಾದ್ ಹಾಗೂ ಕಾರಾಗೃಹ ಪೊಲೀಸರು ಇಬ್ಬರ ಶವಗಳನ್ನು ಸಂಬಂಧಿಕರಿಗೆ ಹಸ್ತಾಂತರ ಮಾಡಿದರು. ಈ ನಡುವೆ ಕೊಲೆ ಆರೋಪಿ ತೇಜಸ್‌ಗೆ ತಂದೆ-ತಾಯಿ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ನ್ಯಾಯಾ ಲಯ ಮಂಗಳವಾರ ಸಂಜೆ 4-6ಗಂಟೆವರೆಗೆ ಅನುಮತಿ ನೀಡಿತ್ತು. ಮಾತ್ರವಲ್ಲ, ಆತನನ್ನು ಜೈಲಿನಿಂದ ಕರೆದುಕೊಂಡು ಹೋಗಿ ಮತ್ತೆ ಜೈಲಿಗೆ ಕರೆತಂದು ಬಿಡುವ ಹೊಣೆಯನ್ನು ನಜರ್‌ಬಾದ್ ಠಾಣೆ ಪೊಲೀಸರಿಗೆ ಒಪ್ಪಿಸಲಾಗಿತ್ತು.
ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಆರೋಪಿ ತೇಜಸ್, ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ತಂದೆ-ತಾಯಿಯ ಅಂತಿಮ ದರ್ಶನ ಪಡೆದನು. ಈ ಮೂಲಕ ಒಂದಿಡೀ ಕುಟುಂಬದ ಬದುಕು ಮೂರಾಬಟ್ಟೆಯಾಗಿದೆ.