Advertisement

ನದಿಗೆ ಬಿದ್ದ ಮಗ, ರಕ್ಷಣೆಗಳಿದ ತಾಯಿ ಸಾವು : ವಾಯುವಿಹಾರದ ವೇಳೆ ನಡೆದ ಘಟನೆ

11:16 PM Sep 11, 2021 | Team Udayavani |

ಕುಂದಾಪುರ: ನದಿದಂಡೆಯಲ್ಲಿ ವಾಯುವಿಹಾರ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಮಗ ಕಾಲು ಜಾರಿ ನದಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲೆಂದು ನದಿಗೆ ಹಾರಿದ ತಾಯಿ ಹಾಗೂ ಮಗ ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಶನಿವಾರ ನಾಡ ಗ್ರಾಮದ ಚುಂಗಿಗುಡ್ಡೆಯಲ್ಲಿ ಸಂಭವಿಸಿದೆ.

Advertisement

ನಾಡ ಗ್ರಾಮದ ನಿವಾಸಿ, ಪತ್ರಕರ್ತ ನೋಯೆಲ್‌ ಚುಂಗಿಗುಡ್ಡೆ ಅವರ ಪತ್ನಿ ರೊಸಿರಿಯಾ (34) ಹಾಗೂ ಪುತ್ರ ಶಾನ್‌ ರಿಚ್ಚಿ (11) ಸಾವನ್ನಪ್ಪಿದವರು.

ರೊಸಿರಿಯಾ ಅವರು ಹಿಂದೆ ಕುವೈಟ್‌ನಲ್ಲಿ ಜೆಟ್‌ ಏರ್‌ವೆàಸ್‌ನಲ್ಲಿ  ಉದ್ಯೋಗಿಯಾಗಿದ್ದು, ಪ್ರಸ್ತುತ ವಿದೇಶದಲ್ಲಿಯೇ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 6 ತಿಂಗಳ ಹಿಂದೆ ಊರಿಗೆ ಬಂದಿದ್ದು, ಲಾಕ್‌ಡೌನ್‌ ಕಾರಣದಿಂದ ಈಗ ವರ್ಕ್‌ ಫ್ರಂ ಹೋಂ ಕೆಲಸದಲ್ಲಿದ್ದರು. ಕೆಲವೇ ದಿನಗಳಲ್ಲಿ ಮತ್ತೆ ವಿದೇಶಕ್ಕೆ ತೆರಳುವವರಿದ್ದರು ಎಂದು ತಿಳಿದು ಬಂದಿದೆ.

ಘಟನೆ ವಿವರ:

ಶನಿವಾರ ಬೆಳಗ್ಗೆ 11 ಗಂಟೆಗೆ ರೊಸಿರಿಯಾ ಅವರು ಮಗ ಶಾನ್‌ನನ್ನು ಮನೆ ಸಮೀಪದ ಸೌಪರ್ಣಿಕಾ ನದಿ ತೀರಕ್ಕೆ ವಾಯು ವಿಹಾರಕ್ಕೆಂದು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ನದಿದಂಡೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಗ ಶಾನ್‌ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಇದನ್ನು ಕಂಡ ತಾಯಿ ಮಗನನ್ನು ರಕ್ಷಿಸಲೆಂದು ನದಿಗೆ ಹಾರಿದ್ದಾರೆ. ನಿರಂತರ ಮಳೆಯಿಂದಾಗಿ ನೀರಿನ ಸೆಳೆತ ಜಾಸ್ತಿ ಇದ್ದ ಕಾರಣ ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಮಗ ಮಧ್ಯಾಹ್ನವಾದರೂ ಮನೆಗೆ ಬಾರದಿದ್ದುದನ್ನು ತಿಳಿದು ನೋಯೆಲ್‌ ನದಿ ಕಡೆಗೆ ಬಂದಿದ್ದಾರೆ. ಅಷ್ಟರಲ್ಲಿ ಪುತ್ರನ ಚಪ್ಪಲಿ ನದಿ ದಂಡೆ ಪಕ್ಕ ಕಾಣಸಿಕ್ಕಿದ್ದು ಸಮೀಪದ ಮನೆಯವರನ್ನು ಕರೆದು ಹುಡುಕಾಟ ನಡೆಸಿದ್ದಾರೆ.

Advertisement

ಸ್ವಲ್ಪ ದೂರದಲ್ಲಿ ನದಿಯಲ್ಲಿ ಮಗನ ಮೃತದೇಹ ಕಂಡು ಬಂದಿದ್ದು, ಸ್ಥಳೀಯರ ಸಹಾಯದಿಂದ ಮೇಲೆತ್ತಲಾಯಿತು. ಕೊಚ್ಚಿಕೊಂಡು ಹೋಗಿದ್ದ ತಾಯಿಯ ಮೃತದೇಹ ಮರವಂತೆಯ ಮಾರಸ್ವಾಮಿ ದೇವಸ್ಥಾನದ ಎದುರಿನ ಸೇತುವೆ ಸಮೀಪ ಸಿಕ್ಕಿದ್ದು, ಸ್ಥಳೀಯರು ಹಾಗೂ ಕುಂದಾಪುರದ ಅಗ್ನಿ ಶಾಮಕ ದಳದ ಸಿಬಂದಿ ಸಹಕಾರದಿಂದ ಮೇಲೆತ್ತಲಾಯಿತು.

ಪ್ರತಿ ದಿನ ಸಂಜೆ ಮಗನನ್ನು ವಾಯು ವಿಹಾರಕ್ಕೆಂದು ತಂದೆ ಅಥವಾ ತಾಯಿ ನದಿದಂಡೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಶುಕ್ರವಾರ ಮಳೆ ಕಡಿಮೆಯಿದ್ದ ಕಾರಣ ಬೆಳಗ್ಗಿನ ವೇಳೆಯೇ ವಿಹಾರಕ್ಕೆ ತೆರಳಿದ್ದರು. ಶನಿವಾರವೂ ಅದೇ ಸಮಯಕ್ಕೆ ಮಗ ಹಠ ಮಾಡಿದ್ದು, ತಂದೆ-ತಾಯಿಯರಿಬ್ಬರೂ ಬೇಡವೆಂದರೂ ಕೇಳಲಿಲ್ಲ. ಮಗನ ಹಠಕ್ಕಾಗಿ ತಾಯಿ ವಾಯು ವಿಹಾರಕ್ಕೆ ನದಿದಂಡೆಗೆ ಕಡೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವಿಧಿಯಾಟ ಮಾತ್ರ ಬೇರೆಯದ್ದೇ ಆಗಿತ್ತು.

ಘಟನಾ ಸ್ಥಳಕ್ಕೆ ಬೈಂದೂರು ವೃತ್ತ ನಿರೀಕ್ಷಕ ಸಂತೋಷ್‌ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ನಂಜಾ ನಾಯ್ಕ, ಕುಂದಾಪುರ ಅಗ್ನಿ ಶಾಮಕ ಸಿಬಂದಿ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಮತ್ತಿತರರು ಭೇಟಿ ನೀಡಿದರು.  ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next