ಕಾರ್ಕಳ: ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯ ಬೋಳ ಕೆದಿಂಜೆ ಸಮೀಪದ ಮಂಜರಪಲ್ಕೆ ಎಂಬಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಣಿವೆಗೆ ಮಗುಚಿ ಬಿದ್ದು ವಿದ್ಯಾರ್ಥಿಯೋರ್ವ ಮೃತ ಪಟ್ಟ ಘಟನೆ ಮ.21ರಂದು ಬೆಳಗ್ಗೆ ನಡೆದಿದೆ. ಮೃತ ದುರ್ಧೈವಿ ಬಾಲಕ ಉಚ್ಚಿಲದ ವೈಷ್ಣವ್ (16) ಎಂದು ಗುರುತಿಸಲಾಗಿದೆ.
ಉಚ್ಚಿಲದ ಸಹದೇವ ಎಂಬವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ರಫೀಕ್ ಎಂಬವರ ಕುಟುಂಬ ವಾಸವಿತ್ತು. ರಫೀಕ್ ಮನೆಯವರು ಬೆಂಗಳೂರಿಗೆ ಪ್ರವಾಸಕ್ಕೆ ತೆರಳಿದ್ದು, ವಂಡರ್ ಲಾ ನೋಡಲು ಹೋಗಿದ್ದರು. ಇವರ ಜತೆಯಲ್ಲಿ ಸಹದೇವ ಅವರ ಪುತ್ರ ವೈಷ್ಣವ್ ಕೂಡ ತೆರಳಿದ್ದ. ಕಾರಿನಲ್ಲಿ ರಫೀಕ್ ಅವರ ತಾಯಿ ಜಮೀಲಾ, ಪತ್ನಿ ಪರಾನಾ, ನೌಫಲ್ ಇಬ್ಬರು ಮಕ್ಕಳು ಸೇರಿ 7 ಮಂದಿ ಇದ್ದರು. ಅಲ್ಲಿಂದ ಹಿಂತಿರುಗಿ ಬರುತ್ತಿದ್ದಾಗ ಘಟನೆ ನಡೆದಿದೆ.
ಕಾರ್ಕಳದಿಂದ ಬೆಳ್ಮಣ್ ಕಡೆಗೆ ಕಾರು ತೆರಳುತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಿಯೊ ಕಾರು ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟ ವಿದ್ಯಾರ್ಥಿ ಉಡುಪಿಯ ಖಾಸಗಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಇನ್ನಿಬ್ಬರು ಮಹಿಳೆಯರಿಗೂ ಗಂಭೀರ ಗಾಯಗಳಾಗಿವೆ. ಸ್ಥಳೀಯರು ಗಾಯಾಳುಗಳನ್ನು ಕಾರ್ಕಳ ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರಿನಲ್ಲಿ ಇದ್ದ ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇತರೆ ಮೂವರು ಗಾಯಗೊಂಡಿದ್ದಾರೆ. ಮೃತ ವಿದ್ಯಾರ್ಥಿ ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
Related Articles
ಘಟನಾ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಅಪಾಯಕಾರಿ ಸ್ಥಳ:
ಘಟನೆ ನಡೆದ ಸ್ಥಳ ತೀರಾ ಅಪಾಯಕಾರಿ ಸ್ಥಳವಾಗಿದೆ. ಈ ಹಿಂದೆ ಇದೆ ಸ್ಥಳದಲ್ಲಿ ಬಸ್ಸು ಅಪಘಾತ ಸಹಿತ ಹಲವು ಅಪಘಾತಗಳು ಸಂಭವಿಸಿದ್ದಾಗಿ ಸ್ಥಳಿಯರು ಹೇಳಿದ್ದಾರೆ.