Advertisement

ವಾಹನಗಳಿಂದ ಸಂಚಾರ ನಿಯಮ ಉಲ್ಲಂಘನೆ; ದೂರುಗಳ ಸರಮಾಲೆ

09:01 PM Jun 14, 2019 | Team Udayavani |

ಮಹಾನಗರ: ಸಿಟಿ ಬಸ್‌, ಇತರ ವಾಹನಗಳ ಸಂಚಾರ ನಿಯಮ ಉಲ್ಲಂಘನೆ ಕುರಿತಂತೆ ನಾಗರಿಕರಿಂದ ದೂರುಗಳ ಸರಮಾಲೆಯೇ ಶುಕ್ರವಾರ ನಗರದ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಕೇಳಿ ಬಂತು. ಪೊಲೀಸ್‌ ಕಾರ್ಯಾಚರಣೆ ನಡೆದರೂ ಸಂಚಾರ ನಿಯಮ ಗಾಳಿಗೆ ತೂರುತ್ತಿರುವ ಬಸ್‌ ಸಿಬಂದಿ ವಿರುದ್ಧ ಕಠಿನ ಕ್ರಮಕ್ಕೆ ಅವರು ಆಗ್ರಹಿಸಿದರು. ಕಮಿಷನರ್‌ ಪರವಾಗಿ ಕರೆಗಳನ್ನು ಸ್ವೀಕರಿಸಿದ ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀ ಗಣೇಶ್‌ ಅವರು ನಿಯಮ ಉಲ್ಲಂಘಿಸುವ ಬಸ್‌ಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಲಾಗುವುದು ಎಂದರು.

Advertisement

ಕುತ್ತಾರು – ರಾಣಿಪುರ ರಸ್ತೆಯ ಅಲ್ಲಲ್ಲಿ ಸಂಜೆ ವೇಳೆ ಬೈಕ್‌ನಲ್ಲಿ ಬರುವ ಕೆಲವರು ಗಾಂಜಾ ಸೇವನೆ ಮಾಡುತ್ತಿದ್ದಾರೆ. ಅಲ್ಲದೆ ಪುಂಡಾಟಿಕೆ ನಡೆಸುತ್ತಿದ್ದಾರೆ ಎಂದು ನಾಗರಿಕರೊಬ್ಬರು ಗಮನ ಸೆಳೆದರು. ಪ್ರತಿಕ್ರಿಯಿಸಿದ ಡಿಸಿಪಿ, ಗಾಂಜಾ ಸೇವಿಸುತ್ತಿರುವ ಸಂದರ್ಭದಲ್ಲಿಯೇ ಪೊಲೀಸ್‌ ಕಂಟ್ರೋಲ್‌ ರೂಂ (ನಂ. 100/ 0824- 2220800) ಆಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಿ ದರೆ ತತ್‌ಕ್ಷಣ ಕಾರ್ಯಾಚರಣೆ ನಡೆಸಲು ಅನುಕೂಲವಾಗುತ್ತದೆ ಎಂದರು.

ದುಬಾರಿ ಬಾಡಿಗೆ
ದೇರಳಕಟ್ಟೆಯಲ್ಲಿ ರಿಕ್ಷಾ ಚಾಲಕರು ಪ್ರಯಾಣಿಕರಿಂದ ದುಬಾರಿ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ; ಮೀಟರ್‌ ಪ್ರಕಾರ ದರ ವಸೂಲಿ ಮಾಡುತ್ತಿಲ್ಲ ಎಂಬ ದೂರು ಕೇಳಿ ಬಂತು. ಈಗಾಗಲೇ ಪೊಲೀಸರು ಸ್ಥಳಕ್ಕೆ ತೆರಳಿ ಆಟೋ ಚಾಲಕರಿಗೆ ದುಬಾರಿ ದರ ವಸೂಲಿ ಮಾಡದಂತೆ ಸೂಚನೆ ನೀಡಿದ್ದಾರೆ. ಮತ್ತೆ ಅದೇ ಚಾಳಿ ಮುಂದುವರಿಸುತ್ತಿದ್ದರೆ, ಸಾರಿಗೆ ಅ ಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲದೆ ಪೊಲೀಸರು ಕೂಡ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಪಿ ತಿಳಿಸಿದರು.

ಬೀದಿ ಬದಿ ವ್ಯಾಪಾರ
ವಿಮಾನ ನಿಲ್ದಾಣ ರಸ್ತೆಯ ಬದಿಗಳಲ್ಲಿ ವ್ಯಾಪಾರ ನಡೆಯುತ್ತಿದೆ. ಇಲ್ಲಿನ ಇಕ್ಕೆಲಗಳಲ್ಲಿ ನೋ ಪಾರ್ಕಿಂಗ್‌ ಎಂದು ಎರಡು ವರ್ಷಗಳ ಹಿಂದೆಯೇ ಆದೇಶ ಹೊರಡಿಸಲಾಗಿದೆ. ಆದರೆ ಇನ್ನೂ ಅನುಷ್ಠಾನಗೊಂಡಿಲ್ಲ ಎಂದು ಕೆಲವರು ದೂರಿದರು. ಉತ್ತರಿಸಿದ ಡಿಸಿಪಿ, ಬೀದಿಬದಿ ವ್ಯಾಪಾರಸ್ಥರಿಗೂ ವ್ಯಾಪಾರ ಮಾಡಲು ಅವಕಾಶ ಇದೆ. ಕಾನೂನು ಚೌಕಟ್ಟು ಮೀರಿದರೆ ಅವರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದರು.

ಪಿಕ್‌ಪಾಕೆಟ್‌
ಲೇಡಿಗೋಷನ್‌ ಬಸ್‌ ನಿಲ್ದಾಣದಲ್ಲಿ ಯುವತಿಯೊಬ್ಬಳ ಪಿಕ್‌ಪಾಕೆಟ್‌ಗೆ ಯತ್ನಿಸಿದ ಬಗ್ಗೆ ಆಕೆಯ ತಾಯಿ ಫೋನ್‌ ಇನ್‌ನಲ್ಲಿ ದೂರಿದರು. ಈಗಾಗಲೇ ಆರೋಪಿಯೊಬ್ಬನನ್ನು ಬಂ ಧಿಸಲಾಗಿದೆ. ಅಲ್ಲಿ ಪೊಲೀಸ್‌ ನಿಯೋಜನೆಗೆ ಕ್ರಮ ವಹಿಸಲಾಗುವುದು ಎಂದು ಡಿಸಿಪಿ ತಿಳಿಸಿದರು. ಇದು 116ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 26 ಕರೆಗಳು ಬಂದವು.

Advertisement

ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌, ಎಸಿಪಿ ಮಂಜುನಾಥ ಶೆಟ್ಟಿ, ಟ್ರಾಫಿಕ್‌ ಇನ್‌ಸ್ಪೆಕ್ಟರ್‌ಗಳಾದ ಸಿ.ಎನ್‌. ದಿವಾಕರ್‌, ಹರೀಶ್‌ ಕೆ. ಪಟೇಲ್‌, ಅಶೋಕ್‌ ಕುಮಾರ್‌, ಪಿಎಸ್‌ಐ ಯೋಗೀಶ್‌, ಎಎಸ್‌ಐ ಪಿ. ಯೋಗೇಶ್ವರನ್‌, ಹೆಡ್‌ಕಾನ್‌ಸ್ಟೆಬಲ್‌ ಪುರುಷೋತ್ತಮ ಉಪಸ್ಥಿತರಿದ್ದರು.

ಪ್ರಮುಖ ದೂರುಗಳು
 ಅಡ್ಯಾರಿನ ಆಸ್ಪತ್ರೆಯೊಂದರ ಎದುರಿನ ಬಾರ್‌ನಲ್ಲಿ ಯಾವಾಗಲೂ ಗಲಾಟೆ ನಡೆಯುತ್ತಿದ್ದು, ಸ್ಥಳೀಯರ ಶಾಂತಿಗೆ ಭಂಗ ಉಂಟಾಗುತ್ತಿದೆ.
 ಇನೋಳಿ ದೇವಸ್ಥಾನದಿಂದ ಕೊಟ್ಟಾರಕ್ಕೆ ತೆರಳುವ ಸಿಟಿ ಬಸ್‌ ಸಂಚರಿಸುತ್ತಿಲ್ಲ. ಇನೋಳಿ ಟೆಂಪಲ್‌- ಸ್ಟೇಟ್‌ಬ್ಯಾಂಕ್‌ ಬಸ್‌ ಬೆಳಗ್ಗೆ 6.10ರ ಟ್ರಿಪ್‌ ಕಟ್‌ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next