Advertisement
“ಗಾಡ್‌ಫಾದರ್’ ಸಿನಿಮಾದಲ್ಲಿ ಸಿಗೋ ಮರ್ಲಾನ್ ಬ್ರಾಂಡೋ “ಅಪ್ಪೋಕಾಲಿಪೊÕà ನೌ’ ಸಿನಿಮಾದಲ್ಲಿ ಸಿಗಲ್ಲ. ಆ ಸಿನಿಮಾದಲ್ಲಿ ಕೋಟ್ ಹಾಕಿಕೊಂಡು ಸಿಗಾರ್ ಸೇದುತ್ತಿರೋ ಬ್ರಾಂಡೋ ಇದ್ದರೆ ಈ ಸಿನಿಮಾದಲ್ಲಿ ಬೋಳು ತಲೆಯ, ಕಪ್ಪು ದಿರಿಸಿನ ನಿರ್ಲಿಪ್ತ ಬ್ರಾಂಡೋ ಎದುರಾಗುತ್ತಾನೆ. ಅದೇ ಥರ “ಗಜಿನಿ’ಯ ಅಮೀರ್‌ಖಾನ್ “ಪೀಕೆ’ ಸಿನಿಮಾದಲ್ಲಿ ಸಿಗಲ್ಲ. ಒಂದೊಂದು ಸಿನಿಮಾಗೆ ಒಂದೊಂದು ಗೆಟಪ್ಪು. ಈ ಥರ ಒಂದೊಂದು ಸಿನಿಮಾದಲ್ಲಿ ಒಂದೊಂದು ಗೆಟಪ್ಪಿನಲ್ಲಿ ಎದ್ದು ಬಂದು ಕೈ ಕುಲುಕುವ ನಟರ ಸಂಖ್ಯೆ ತುಂಬಾ ಕಡಿಮೆ. ಯಾಕೆಂದರೆ ಅದು ಕಠಿಣ ಹಾದಿ. ಆ ಕಠಿಣ ಹಾದಿಯಲ್ಲಿ ಕನ್ನಡದ ನಟನೊಬ್ಬ ನಿಂತಿದ್ದಾನೆ. ಒಂದೊಂದು ಸಿನಿಮಾಗೆ ಒಂದೊಂದು ಗೆಟಪ್ಪು. ಆಯಾಯ ಪಾತ್ರಕ್ಕೆ ತಕ್ಕಂತೆ ರೂಪ. ನಿರ್ದೇಶನ ಕಲ್ಪನೆಗೆ ಬೇಕಾದಂತೆ ಬದಲಾವಣೆ. ಅವರು ಬೇರೆ ಯಾರೂ ಅಲ್ಲ, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್.
“ನಾನು ಅವನಲ್ಲ ಅವಳು’ ಸಿನಿಮಾದಲ್ಲಿ ಮಂಗಳಮುಖೀ. “ಹರಿವು’ ಸಿನಿಮಾದಲ್ಲಿ ಬಡ ರೈತ. “ವರ್ತಮಾನ’ ಸಿನಿಮಾದಲ್ಲಿ ವಿಚಿತ್ರ ಪಾತ್ರ. “ರಿಕ್ತ’ ಸಿನಿಮಾದಲ್ಲಿ ದೆವ್ವ. “ಫಿರಂಗಿಪುರ’ ಸಿನಿಮಾದಲ್ಲಿ ಹೋರಾಟಗಾರ. “ಕೃಷ್ಣ ತುಳಸಿ’ ಸಿನಿಮಾದಲ್ಲಿ ಕುರುಡ. ನೀವು ಈ ಸಿನಿಮಾಗಳ ಪೋಸ್ಟರ್‌ಗಳನ್ನು ನೋಡಿದರೂ ಸಾಕು ಥ್ರಿಲ್ ಆಗುತ್ತೀರಿ. ಇದೆಲ್ಲಾ ಹೇಗೆ ಸಾಧ್ಯ ಅಂತ ಕೇಳಿದರೆ ಸಂಚಾರಿ ವಿಜಯ್ ಹೇಳುವ ಒಂದು ವಾಕ್ಯದ ಉತ್ತರ. “ನನ್ನಲ್ಲಿ ಸತ್ವ ಇದೆಯಾ ಅಂತ ತಿಳ್ಕೊàಳ್ಳೋಕೆ ನಾನು ಬೇರೆ ಬೇರೆ ಥರದ ಪಾತ್ರಗಳನ್ನು ಮಾಡುತ್ತಿದ್ದೇನೆ.’ ಫಿರಂಗಿಪುರದ ಹೋರಾಟಗಾರ
ಕೆಲವು ದಿನಗಳ ಹಿಂದೆ ಕನ್ನಡ ಸಿನಿಮಾ ಪ್ರೇಮಿಗಳ ವಾಟ್ಸಪ್ಪಲ್ಲಿ ಒಂದು ಪೋಟೋ ಟ್ರೆಂಡಿಂಗ್ ಆಗಿತ್ತು. ಬಿಳಿ ಮತ್ತು ಕಪ್ಪು ಮಿಶ್ರಿತ ಗಡ್ಡ, ಖಡಕ್ಕಾದ ಮೀಸೆ, ಬೋಳಾದ ಹಣೆಯ ಒಬ್ಬ ವಯಸ್ಸಾದ ಮುದುಕನ ಫೋಟೋ ಅದು. ಫಿರಂಗಿಪುರ ಎಂಬ ಚಿತ್ರ ಪೋಸ್ಟರ್. ಯಾರಪ್ಪಾ ಇದು, ಬಹಳ ಚೆನ್ನಾಗಿದೆ ಅಂತ ಸಿನಿಮಾ ಪ್ರೇಮಿಗಳು ಪ್ರಶ್ನೆ ಮಾಡುತ್ತಲೇ ಫೋಟೋ ಬಗೆದಾಗ ಗೊತ್ತಾಯಿತು, ಅದು ಬೇರಾರೂ ಅಲ್ಲ ಸಂಚಾರಿ ವಿಜಯ್ ಅಂತ. ಹತ್ತು ವರ್ಷದಿಂದ ಸಿನಿಮಾ ಇಂಡಸ್ಟ್ರಿಯಲ್ಲಿರುವ ಜನಾರ್ಧನ ಎಂಬ ನಿರ್ದೇಶಕರ ಕನಸಿನ ಕೂಸು “ಫಿರಂಗಿಪುರ’. ಒಬ್ಬ ಹೋರಾಟಗಾರನ ಕತೆ. ಆ ಹೋರಾಟಗಾರನ ತಾರುಣ್ಯ, ಮಧ್ಯ ವಯಸ್ಸು ಮತ್ತು ಓಲ್ಡ್ ಏಜು ಈ ಚಿತ್ರದ ಒಂದೊಂದು ಘಟ್ಟದಲ್ಲಿ ಬಂದು ಹೋಗುತ್ತದೆ. ಅದಕ್ಕೆ ಸರಿಯಾಗಿ ಹೊಂದುವ ಒಬ್ಬ ನಟ ಬೇಕಿತ್ತು ಅಂತ ಜನಾರ್ಧನ ವಿಜಯ್ ಹತ್ತಿರ ಹೋಗಿದ್ದಾರೆ. ವಿಜಯ್ ಒಪ್ಪಿಕೊಂಡರು. ಇಂಟರೆಸ್ಟಿಂಗ್ ಅಂದ್ರೆ ಈ ಪಾತ್ರಕ್ಕೆ ವಿಶೇಷವಾದ ಗೆಟಪ್ ಅನ್ನು ಮೇಕಪ್‌ಮ್ಯಾನ್ ಉಮಾ ಮಹೇಶ್ವರ್ ಸಿದ್ಧಪಡಿಸಿದ್ದಾರೆ. ಈ ಬಗ್ಗೆ ವಿಜಯ್ ಇಂಟರೆಸ್ಟಿಂಗ್ ಮಾಹಿತಿ ಕೊಡುತ್ತಾರೆ.
Related Articles
Advertisement
“ಈ ಗೆಟಪ್ ನೋಡೋಕೆ ಚೆನ್ನಾಗಿದೆ ಅಂತ ತುಂಬಾ ಜನ ಹೇಳಿದ್ದಾರೆ. ಈ ಚೆಂದದ ಹಿಂದೆ ಅಷ್ಟೇ ಶ್ರಮವೂ ಇದೆ. ಒಂದಿನ ನಾನು ಈ ಗೆಟಪ್‌ಗಾಗಿ ಬೆಳಿಗ್ಗೆ ಹತ್ತೂವರೆಗೆ ಹೋಗಿ ಕೂತಿದ್ದೆ. ಮೇಕಪ್ ಪೂರ್ತಿ ಮುಗಿಯುವಾಗ ಎಷ್ಟ್ ಗಂಟೆ ಆಗಿತ್ತು ಗೊತ್ತಾ? ರಾತ್ರಿ ಒಂದು ಗಂಟೆ. ಉಮಾ ಮಹೇಶ್ವರ್ ಇದಕ್ಕೆ ಬೇಕಾಗಿ ತುಂಬಾ ರಿಸರ್ಚ್ ಮಾಡಿದ್ದಾರೆ. ಎಲ್ಲೆಲ್ಲಿಂದಲೋ ಮೆಟೀರಿಯಲ್ ತರಿಸಿಕೊಂಡಿದ್ದಾರೆ. ಸುಮಾರು ಏಳೆಂಟು ತಿಂಗಳಿಂದ ಇದಕ್ಕಾಗಿ ಶ್ರಮಿಸುತ್ತಿದ್ದಾರೆ. ಅವರು ನನ್ನ ಕೂರಿಸಿ ಬಾಲ್ಡ್ ವಿಗ್ ಹಾಕಿ ಮುದುಕನ ಪಾತ್ರಕ್ಕಾಗಿ ನನ್ನ ಸಜ್ಜು ಗೊಳಿಸುತ್ತಾರೆ ನಾನು ಸುಮ್ಮನೆ ಕೂತಿರಬೇಕು. ಈಗ ಆರಂಭವಾದುದರಿಂದ ಸಾಕಷ್ಟು ಸಮಯ ಮೇಕಪ್ಪಲ್ಲೇ ಹೋಗುತ್ತಿದೆ. ಹೀಗೆ ಪದೇ ಪದೇ ಪ್ರಾಕ್ಟೀಸ್ ಮಾಡಿ ಆ ಸಮಯವನ್ನು ಕಡಿತಗೊಳಿಸಬೇಕು. ಶೂಟಿಂಗಿಗೆ ಹೋಗುವ ಮುನ್ನ ಎರಡು ಗಂಟೆಯಲ್ಲಿ ಮೇಕಪ್ ಮುಗಿಸುವ ಹಾಗೆ ನೋಡಿಕೊಳ್ಳಬೇಕು.’
ರಿಕ್ತದ ದೆವ್ವಈಗಾಗಲೇ “ರಿಕ್ತ’ ಸಿನಿಮಾದ ಪೋಸ್ಟರ್‌ಗಳು ಅನೇಕರನ್ನು ಸೆಳೆದಿವೆ. ಈ ಸಿನಿಮಾದಲ್ಲಿ ವಿಜಯ್ ಒಂದು ದೆವ್ವದ ಪಾತ್ರಧಾರಿಯಂತೆ ಕಾಣಿಸುತ್ತಾರೆ. ಸಿನಿಮಾದ ಕತೆ ಏನು ಅನ್ನೋದು ಗೊತ್ತಿಲ್ಲದಿದ್ದರೂ ಕೂಲಿಂಗ್ ಗ್ಲಾಸ್ ಹಾಕಿಕೊಂಡು ಗಿಟಾರ್ ಹಿಡಿದಿರುವ ದೆವ್ವದ ಗೆಟಪ್ಪಂತೂ ಕುತೂಹಲ ಹುಟ್ಟಿಸಿದೆ. ಉದ್ದದ್ದೊಂದು ಗೌನು, ಬಿಳಿಯದ್ದೊಂದು ವಿಗ್ಗು, ಮುಖಕ್ಕೆ ಬಿಳಿಯ ಬಣ್ಣ, ಕಣ್ಣಿಗೆ ಕಪ್ಪು ಕನ್ನಡಕ ಹಾಕಿ ನಿಂತಿರುವ ವಿಜಯ್ ಡಿಫರೆಂಟಾಗಿ ಕಾಣುತ್ತಾರೆ. ಆದರೆ ಈ ಡಿಫರೆಂಟಾಗಿ ಕಾಣುವುದರ ಹಿಂದಿನ ಕಷ್ಟ “ವಿಜಯ್’ಗೆ ಮಾತ್ರ ಗೊತ್ತು. “ಈ ಸಿನಿಮಾದಲ್ಲಿ ಒಂದು ವಿಗ್ ಹಾಕ್ಕೋಬೇಕಿತ್ತು. ಈ ವಿಗ್ ಹಾಕಿಕೊಳ್ಳುವುದಿತ್ತಲ್ಲ, ಅದು ಭಯಂಕರ ಹಿಂಸೆಯ ಕೆಲಸ. ಯಾಕೆಂದರೆ ಅಸಾಧ್ಯ ವಾಸನೆ. ಆ ವಾಸನೆಯನ್ನು ತಡೆದುಕೊಂಡು ವಿಗ್ ಹಾಕಿಕೊಂಡು ನಟಿಸಬೇಕು. ಈ ಸಿನಿಮಾದ ಚಿತ್ರೀಕರಣವನ್ನು ನಡೆಸುವಾಗ ರಾತ್ರಿ ಹಗಲು ಕೆಲಸ ಮಾಡುತ್ತಿದ್ದೆವು. ಸರಿಯಾಗಿ ನಿದ್ದೆ ಬೇರೆ ಇರಲಿಲ್ಲ. ನಟರಿಗೆ ಸರಿಯಾಗಿ ನಿದ್ದೆ ಇಲ್ಲದಿದ್ದರೆ ಮರುದಿನ ಎದ್ದಾಗ ಕಣ್ಣೆಲ್ಲಾ ಕೆಂಪಾಗಿ ವಿಚಿತ್ರವಾಗಿ ಕಾಣಿಸುತ್ತದೆ. ಬೇಗನೇ ಕ್ಯಾಮೆರಾ ಕಣ್ಣಲ್ಲಿ ಗೊತ್ತಾಗುತ್ತದೆ. ಆ ಸುಸ್ತು ಗೊತ್ತಾಗಬಾರದು. ಏನ್ ಮಾಡೋದು ಅಂತ ಯೋಚನೆಯಲ್ಲಿದ್ದೆ. ಆಮೇಲೆ ಬಿಳಿಯ ಮೇಕಪ್ ಇತ್ತಲ್ಲ, ಸರಿ ಹೋಯ್ತು. ಕ್ಯಾಮೆರಾದಲ್ಲಿ ಸುಸ್ತು ಕಾಣಿಸಲ್ಲ. ಈಥರ ಏನಾದರೂ ಆಗುತ್ತಲೇ ಇರುತ್ತದೆ ಹೊಸ ಹೊಸ ಪ್ರಯತ್ನ ಮಾಡುವಾಗ.’
ಅಂಧು ಹುಡುಗ ಹುಡುಗಿಯ ಕತೆ “ಕೃಷ್ಣ ತುಳಸಿ’. ವಿಜಯ್ ಕೃಷ್ಣ. ಇಡೀ ಸಿನಿಮಾದಲ್ಲಿ ಕುರುಡನಂತೆ ಓಡಾಡಬೇಕು. ದೃಷ್ಟಿ ಇಲ್ಲ ಅನ್ನುವುದು ಬಿಟ್ಟರೆ ಉಳಿದಂತೆ ಆತನಿಗೆ ಬೇರೆ ಸಮಸ್ಯೆ ಇಲ್ಲ. ಆದರೂ ಕುರುಡನಾಗಿ ನಟಿಸುವುದು ಸುಲಭವಲ್ಲವಲ್ಲ. ಏನ್ ಮಾಡ್ತೀರಿ ಅಂತ ಕೇಳಿದರೆ ವಿಜಯ್ ನಗುತ್ತಾರೆ. “ಬೇರೊಂದು ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುವುದು ಸವಾಲಿನ ಕೆಲಸ. ಆದರೆ ಅದು ನಂಗಿಷ್ಟ. ನಿರ್ದೇಶಕರ ಕತೆ ಹೇಳಿದ ತಕ್ಷಣ ನಾನು ಪಾತ್ರದ ಬಗ್ಗೆ ಯೋಚಿಸುತ್ತೇನೆ. ಅದನ್ನು ಡೆವಲಪ್ ಮಾಡೋದು ಹೇಗೆ ಅಂತ ಚಿಂತಿಸುತ್ತೇನೆ. “ಕೃಷ್ಣ ತುಳಸಿ’ ಸಿನಿಮಾ ಸಿಕ್ಕಾಗ ಅದರಲ್ಲಿ ನಟಿಸಲು ತುಂಬಾ ಮೇಕಪ್ ಏನೂ ಬೇಕಾಗಿಲ್ಲ. ಆದರೆ ಆ್ಯಟಿಟ್ಯೂಡ್ ಬೇರೆ ಥರ ಇರಬೇಕು. ಬಾಡಿ ಲ್ಯಾಂಗ್ವೇಜ್ ಕೂಡ ಡಿಫರೆಂಟಾಗಿರಬೇಕು. ಅದಕ್ಕಾಗಿ ಮನೆಯಲ್ಲೇ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಡಾಡುತ್ತೇನೆ. ಆ ಪಾತ್ರವೇ ಆಗಲು ಪ್ರಯತ್ನಿಸುತ್ತೇನೆ. ನಿರ್ದೇಶಕರು ನನಗೆ ಪಾತ್ರ ಹೇಳಿದ ನಂತರ ಆ ಪಾತ್ರವಾಗುವುದು ನನ್ನ ಕರ್ತವ್ಯ. ಅದಕ್ಕೆ ಬೇಕಾದ ತಯಾರಿ ನಾನು ಮಾಡಿಕೊಳ್ಳಲೇಬೇಕು.’ ವರ್ತಮಾನದಲ್ಲಿ ವಿಚಿತ್ರ ಕ್ಯಾರೆಕ್ಟರ್
“ವರ್ತಮಾನ’ ಸಿನಿಮಾ ಕೂಡ ವಿಭಿನ್ನ ಕತೆಯನ್ನು ಹೊಂದಿದ ಸಿನಿಮಾ. ಒಂಥರಾ ಸೈಕೋ ಥರದ ಪಾತ್ರವನ್ನು ವಿಜಯ್ ನಿರ್ವಹಿಸುತ್ತಿದ್ದಾರೆ. ವಿಶಿಷ್ಟ ಕಾಸ್ಟೂéಮು, ಎದ್ದು ಕಾಣೋ ಕನ್ನಡಕ, ಒಮ್ಮೆ ಸೂಟು, ಮತ್ತೂಮ್ಮೆ ಅರೇಬಿಯನ್ ಥರದ ದಿರಿಸು ಹೀಗೆ ಒಂದೊಂದು ವೇಳೆಯಲ್ಲಿ ಒಂದೊಂಥರಾ ಕಾಣಿಸುವ ಪಾತ್ರದಲ್ಲಿ ನಟಿಸುವುದು ಅಂದ್ರೆ ಸುಮ್ಮನೆ ಅಲ್ಲ. ಈ ಬಗ್ಗೆ ವಿಜಯ್ ಹೇಳುವುದು ಇಷ್ಟು-“ಯಾವಾಗಲೂ ಗೊಂದಲದಲ್ಲಿರುವ ವ್ಯಕ್ತಿ ಆತ. ಅರೇಬಿಯನ್ ಪಾಶ್ ಹುಡುಗರ ಥರ ದಿರಿಸು ಧರಿಸುತ್ತಾನೆ. ವಿಭಿನ್ನವಾಗಿ ವರ್ತಿಸುತ್ತಾನೆ. ಅವನನ್ನು ಅವನಿಗೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂಥದ್ದೊಂದು ಕ್ಯಾರೆಕ್ಟರ್ ಅದು. ದಿರಿಸುಗಳೂ ವಿಭಿನ್ನ ಅದರ ಜೊತೆ ಪಾತ್ರವನ್ನು ಅರ್ಥ ಮಾಡಿಕೊಂಡು ಪಾತ್ರವಾಗುವುದು ಕೂಡ ಒಂದು ಸವಾಲು.’ ವಿಜಯ್ ಎಂಬ ಅಭಿನಯ ಚತುರ
ಒಂದಲ್ಲ ಎರಡಲ್ಲ ನೂರಾರು ಪಾತ್ರಗಳಿವೆ ವಿಜಯ್ ತಲೆಯಲ್ಲಿ. ಇದೆಲ್ಲಾ ಹೇಗೆ ಅಂತ ಕೇಳಿದರೆ ವಿಜಯ್ ರಂಗಭೂಮಿ ಕಡೆಗೆ ಕೈ ತೋರಿಸುತ್ತಾರೆ. “ನಾನು ರಂಗಭೂಮಿಯಿಂದ ಬಂದವ. ಅಲ್ಲಿ ಬೇರೆ ಬೇರೆ ಥರದ ಪಾತ್ರಗಳನ್ನು ಮಾಡಿದ್ದೇನೆ. “ನರಿಗಳಿಗೇಕೆ ಕೋಡಿಲ್ಲ’ ಎಂಬ ನಾಟಕದಲ್ಲಿ ಗುಬ್ಬಿಯಾಗಿಯೂ ನಟಿಸಬೇಕಿತ್ತು. ಕರಡಿಯಾಗಿಯೂ ನಟಿಸಿದ್ದೆ. ರಂಗಭೂಮಿಯಲ್ಲಿ ಬೇರೆ ಬೇರೆ ಥರದ ಪಾತ್ರಕ್ಕೆ ತಕ್ಕಂತೆ ಮೇಕಪ್ ಮಾಡೋದು ಗೆಟಪ್ ಬದಲಿಸೋದು ಸಾಮಾನ್ಯ. ನನಗೆ ಅದೇ ಇಷ್ಟ ಕೂಡ.’ ಆದರೆ ಹೇಗೆ ಸಾಧ್ಯ ಅಂತ ಕೇಳಿದರೆ ವಿಜಯ್ ನಗುತ್ತಾರೆ. “ಒಂದ್ಸಲ ಯಶ್ ಕೇಳಿದ್ದರು, ನಿಮಗೆ ಸ್ವಿಚ್ ಆಫ್ ಸ್ವಿಚ್ ಆನ್ ಟೆಕ್ನಿಕ್ ಗೊತ್ತಾ ಅಂತ. ನನಗೆ ಗೊತ್ತಿಲ್ಲ ಅಂದೆ. ಸ್ವಿಚ್ ಆನ್ ಅಂದಾಕ್ಷಣ ಪಾತ್ರವಾಗಿಬಿಡೋದು. ಸ್ವಿಚ್ ಆಫ್ ಅಂದಾಕ್ಷಣ ಸಾಮಾನ್ಯ ಸ್ಥಿತಿಗೆ ಬರೋದು. ಅದೇ ಥರ ನೀವೂ ಮಾಡ್ತೀರಲ್ಲ ಅಂತ ಹೇಳಿದ್ದರು. ಈ ಥರ ಬೇರೆ ಬೇರೆ ಪಾತ್ರಗಳು ಬಂದಾಗ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತೇನೆ. ಪಾತ್ರಗಳಿಗೆ ನ್ಯಾಯ ಸಲ್ಲಿಸುವ ಜವಾಬ್ದಾರಿ ನನ್ನ ಮೇಲಿರುತ್ತದೆ. ಸ್ವಲ್ಪ ಭಯವೂ ಇರುತ್ತದೆ. ಹಾಗಾಗಿ ಹೀಗೆ ಅಷ್ಟೇ.’ ಇಷ್ಟು ಹೇಳಿ ವಿಜಯ್ ಮತ್ತೆ ನಕ್ಕರು. ನಗುವಲ್ಲೇ ಎಲ್ಲಕ್ಕೂ ಉತ್ತರವಿದೆ ಅನ್ನುವಂತೆ.
ನಿರ್ದೇಶಕ ಬಿಎಸ್ ಲಿಂಗದೇವರು “ನಾನು ಅವನಲ್ಲ ಸಿನಿಮಾ’ ಪಾತ್ರಕ್ಕಾಗಿ ನನ್ನ ಕರೆದಿದ್ದರು. ಆ ಹೊತ್ತಲ್ಲೇ ನಾನು ಬೇರೆ ಸಿನಿಮಾದಲ್ಲಿ ನಟಿಸುತ್ತಿದ್ದೆ. ಆ ಸಿನಿಮಾ ಸ್ವಲ್ಪ ತಡವಾಗುತ್ತದೆ, ಮಧ್ಯೆ ಈ ಸಿನಿಮಾ ಮಾಡಬಹುದು ಅಂತ ಬಂದಿದ್ದೆ. ಲಿಂಗದೇವರು ನೀವು ಮೀಸೆ ತೆಗೆಯಬೇಕಲ್ಲ ಅಂದ್ರು. ಅವರ ಸಿನಿಮಾದಲ್ಲಿ ನಾನು ಮಂಗಳಮುಖೀ ಥರ ನಟಿಸಬೇಕಿತ್ತಲ್ಲ. ಅದಕ್ಕಾಗಿ ಅವರು ಸ್ಕ್ರೀನ್ ಟೆಸ್ಟ್ ಮಾಡಬೇಕು ಅನ್ನೋ ಕಾರಣಕ್ಕೆ ಹೇಳಿದ್ದರು. ಆದರೆ ನಂಗೆ ಸಂದಿಗ್ಧತೆ. ನಾನು ಮೀಸೆ ತೆಗೆದು ಆಮೇಲೆ ಪಾತ್ರ ಕೊಡದೇ ಇದ್ದರೆ ಇನ್ನೊಂದು ಸಿನಿಮಾಗೆ ಕಷ್ಟ ಆಗತ್ತಲ್ಲ ಅಂತ. ನಾನದನ್ನು ಅವರಿಗೆ ಹೇಳಿದೆ. ಒಂದೆರಡು ದಿನ ಬಿಟ್ಟು ಅವರೇ ಕರೆದು ಆಯ್ತು ನೀವೇ ಮಾಡಿ, ಮೀಸೆ ತೆಗೆದುಬಿಡಿ ಅಂದ್ರು. ಅವರ ಮಾತು ನಂಬಿ ದೊಡ್ಡ ಮನಸ್ಸು ಮಾಡಿ ಮೀಸೆ ತೆಗೆದೆ. ಆ ಪಾತ್ರವಾದೆ.