Advertisement

ಸಂಚಾರ ಪೊಲೀಸರಿಂದಲೂ ಬೀಟ್‌

04:32 PM Oct 04, 2021 | Team Udayavani |

ಬೆಂಗಳೂರು: ಇತ್ತೀಚೆಗೆ ರಾಜಧಾನಿಯಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಕಾರಣಗಳು ಪತ್ತೆ ಹಚ್ಚಿ, ಪರಿಹಾರ ದೊರಕಿಸಿಕೊಡಲು ಸ್ವತಃ ಸಂಚಾರ ಪೊಲೀಸ್‌ ವಿಭಾಗ ಮುಂದಾಗಿದೆ. ಅದರಂತೆ ಕಾನೂನು ಸುವ್ಯವಸ್ಥೆ ಪೊಲೀಸರ ಮಾದರಿಯಲ್ಲಿ ಸಂಚಾರ ಪೊಲೀಸರಿಗೂ “ಬೀಟ್‌’ ವ್ಯವಸ್ಥೆ ಜಾರಿಗೆ ತರಲಾಗಿದ್ದು, ಪ್ರಾಯೋಗಿಕವಾಗಿ ನಗರದ ಕೆಲ ಸಂಚಾರ ಠಾಣೆಗಳಲ್ಲಿ ಸಿಬ್ಬಂದಿ ಕಾರ್ಯೋನ್ಮುಕರಾಗಿದ್ದಾರೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರಯೋಗ ನಡೆಸುತ್ತಿದ್ದು, ಒಂದು ವೇಳೆ ಯಶಸ್ವಿ ಯಾದರೆ ರಾಜ್ಯಾದ್ಯಂತ ವಿಸ್ತರಿಸುವ ಬಗ್ಗೆಯೂ ಪೊಲೀಸ್‌ ಇಲಾಖೆಯಲ್ಲಿ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ.

Advertisement

ನಗರ ಸಂಚಾರ ವಿಭಾಗ ಸಿಬ್ಬಂದಿ ಕೂಡ ಪ್ರತಿ ರಸ್ತೆ, ಏರಿಯಾಗಳಲ್ಲಿ “ಬೀಟ್‌’ ಹಾಕಲಿದ್ದು, ಅಲ್ಲಿನ ಸಂಚಾರಿ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಈಗಾಗಲೇ ಕಾನೂನು ಸುವ್ಯವಸ್ಥೆ ಠಾಣೆಯ ಕಾನ್‌ಸ್ಟೇಬಲ್‌, ಹೆಡ್‌ಕಾನ್‌ಸ್ಟೇಬಲ್‌ಗಳಿಗೆ ಬೀಟ್‌ ವ್ಯವಸ್ಥೆ ಜಾರಿಯಲಿದ್ದು, ಆಯಾ ಠಾಣಾ ವ್ಯಾಪ್ತಿಯ ಏರಿಯಾಗಳಲ್ಲಿನ ಅಪರಾಧ ಚಟುವಟಿಕೆಗಳು, ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಅದೇ ಮಾದರಿಯಲ್ಲಿ ನಗರ ಸಂಚಾರ ವಿಭಾಗದ ಠಾಣೆಯ ಕಾನ್‌ಸ್ಟೇಬಲ್‌, ಹೆಡ್‌ಕಾನ್‌ಸ್ಟೇಬಲ್‌ಗಳಿಗೂ “ಬೀಟ್‌’ ವ್ಯವಸ್ಥೆ ಜಾರಿಗೆ ತರಲಾಗಿದೆ. ಪ್ರತಿ ಸಿಬ್ಬಂದಿಗೆ ಠಾಣಾ ವ್ಯಾಪ್ತಿಯ ಒಂದು ನಿರ್ದಿಷ್ಟ ಪ್ರದೇಶವನ್ನು ವಹಿಸಲಾಗಿದೆ. ಆ ಸಿಬ್ಬಂದಿ ತಮ್ಮ ಸಂಚಾರ ನಿರ್ವಹಣೆ ಕರ್ತವ್ಯದ ಜತೆಗೆ ವಾರಕ್ಕೊಂದು ಅಥವಾ 10-15 ದಿನಗಳಿಗೊಮ್ಮೆ ನಿಗದಿತ ಏರಿಯಾಗಳಿಗೆ ಭೇಟಿ ನೀಡಬೇಕು. ಅಲ್ಲಿ ಸಂಚಾರ ನಿರ್ವಹಣೆಗೆ ತೊಡಕುಂಟಾಗಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಬೇಕು.

ಏನೆಲ್ಲ ಮಾಹಿತಿ ಸಂಗ್ರಹ?: ನಗರದ ಪ್ರಮುಖ ರಸ್ತೆಗಳಲ್ಲಿ ಮಾತ್ರ ಸಂಚಾರ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಇಲ್ಲಿ ನಡೆಯುವ ರಸ್ತೆ ಅಪಘಾತಗಳ ಮಾಹಿತಿ ಮಾತ್ರ ಸಿಗುತ್ತಿದೆ. ಆದರೆ, ಏರಿಯಾಗಳ ಒಳಭಾಗದಲ್ಲೂ ಸಣ್ಣ-ಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಅಂತಹ ಏರಿಯಾಗಳಿಗೆ ಭೇಟಿ ನೀಡಿ, ಸ್ಥಳೀಯ ಮುಖಂಡರು, ಸ್ಥಳೀಯರ ಜತೆ ಸಮಾಲೋಚನೆ ನಡೆಸಿ, ಸಂಚಾರ ಸಮಸ್ಯೆಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು.

ಇದನ್ನೂ ಓದಿ:-  ಮಂಗಳೂರಿನಲ್ಲಿ ವಿಂಟೇಜ್ ಕಾರು; ಮೋಟಾರ್ ಸೈಕಲ್ ರ‍್ಯಾಲಿ

Advertisement

ಒಂದು ವೇಳೆ ತಮ್ಮಲ್ಲೇ ನಿವಾರಿಸಬಹುದಾದ ಸಮಸ್ಯೆಗಳಿಗೆ(ಸಣ್ಣ-ಪುಟ್ಟ ಗುಂಡಿಗಳನ್ನು ಮುಚ್ಚುವುದು ಹಾಗೂ ಇತರೆ) ಅಲ್ಲಿಯೇ ಪರಿಹಾರ ಕೊಡಬಹುದು. ಇಲ್ಲವಾದರೆ ಸೂಕ್ತ ಕಾರಣಗಳನ್ನು ಉಲ್ಲೇಖೀಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ನಂತರ ಠಾಣಾಧಿಕಾರಿ ಅಥವಾ ಮೇಲಧಿಕಾರಿಗಳು ಸಂಬಂಧಿಸಿದ ಇಲಾಖೆಗೆ ಕಳುಹಿಸಿ ಪರಿಹಾರ ದೊರಕಿಸಿಕೊಡಲಿದ್ದಾರೆ.

ಇದರೊಂದಿಗೆ ನಿರ್ದಿಷ್ಟ ಏರಿಯಾದಲ್ಲಿ ಯಾವೆಲ್ಲ ಸರ್ಕಾರಿ ಕಚೇರಿಗಳಿವೆ? ಎಷ್ಟು ಮುಖ್ಯರಸ್ತೆಗಳು, ಅಡ್ಡರಸ್ತೆಗಳಿವೆ? ಹಪ್ಸ್‌ಗಳಿವೆ? ಸಿಸಿ ಕ್ಯಾಮೆರಾ ಇದೆಯೇ? ಇಲ್ಲವೇ? ಬೀದಿ ದೀಪಗಳಿವೆ? ಇಲ್ಲವೇ? ರಸ್ತೆ ಗುಂಡಿಗಳು(ಯಾವ ಗಾತ್ರದಲ್ಲಿ ಫೋಟ ಸಮೇತ) ಎಷ್ಟಿವೆ? ಯಾವ ರಸ್ತೆಯಲ್ಲಿ ಹೆಚ್ಚು ಹಾಗೂ ಕಡಿಮೆ ಅಪಘಾತಗಳು ನಡೆಯುತ್ತವೆ? ಯಾವ ಸಮಯದಲ್ಲಿ ನಡೆಯುತ್ತವೆ? ಸಮಸ್ಯೆ ಏನು? ರಸ್ತೆ ವಿಭಜಕಗಳು ಎಷ್ಟಿವೆ? ಅವುಗಳಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆಯೇ?

ಪಾದಚಾರಿ ಮಾರ್ಗದ ಸಮಸ್ಯೆ, ಪಾದಚಾರಿ ಮಾರ್ಗವಿದ್ದರೂ ಸಾರ್ವಜನಿಕರು ರಸ್ತೆಯಲ್ಲಿ ನಡೆದುಕೊಂಡು ಹೋಗುವುದೇಕೆ? ಸಣ್ಣ ಅಪಘಾತ ನಡೆದರೂ ಅದಕ್ಕೆ ಕಾರಣವೇನು? ರಸ್ತೆ ಗುಂಡಿಗಳೇ? ಬೀದಿ ದೀಪಗಳೇ? ಅಥವಾ ರಸ್ತೆಯ ಕಿರಿದಾದ ತಿರುವುಗಳೇ? ಇತರೆ ಕಾರಣಗಳನ್ನು ಉಲ್ಲೇಖೀಸಬೇಕು.

ಗಾಯಾಳು, ಅವರ ಕುಟುಂಬ ಸದಸ್ಯರ ಭೇಟಿ

ಯಾವುದೇ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಮತ್ತು ಆತನ ಕುಟುಂಬ ಸದಸ್ಯರ(ಮೃತ ವ್ಯಕ್ತಿಯ ಕುಟುಂಬ ಕೂಡ)ನ್ನು ಭೇಟಿಯಾಗಿ ಮಾತನಾಡಬೇಕು. ಘಟನೆಗೆ ಚಾಲನೆ ನಿರ್ಲಕ್ಷ್ಯದ ಜತೆಗೆ ಬೇರೆ ಏನಾದರೂ ವೈಯಕ್ತಿಕ ಕಾರಣಗಳಿವೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸ ಬೇಕು.

ಈ ವಿಚಾರವನ್ನು ಠಾಣಾಧಿಕಾರಿಗಳಿಗೆ ನೀಡಬೇಕು ಎಂದು ಬೀಟ್‌ ಸಿಬ್ಬಂದಿಗೆ ಸೂಚಿಸಲಾಗಿದೆ. ಅದರಿಂದ ಸಂಚಾರ ಸಮಸ್ಯೆ ಜತೆಗೆ ಸಾರ್ವಜನಿಕರ ಜತೆಗೂ ಸಂಚಾರ ಪೊಲೀಸರು ಉತ್ತಮ ಒಡನಾಟ ಇಟ್ಟುಕೊಳ್ಳಲು ಸಹಾಯವಾಗುತ್ತದೆ ಎಂದು ಸಂಚಾರ ವಿಭಾಗ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

“ಕಾನೂನು ಸುವ್ಯವಸ್ಥೆಯಲ್ಲಿ ಬೀಟ್‌ ವ್ಯವಸ್ಥೆ ಜಾರಿಯಲ್ಲಿದೆ. ಅದನ್ನು ಸಂಚಾರ ಠಾಣೆಗಳಿಗೂ ತರಲಾಗಿದೆ. ಅದರಿಂದ ರಸ್ತೆ ಅಪಘಾತಗಳಿಗೆ ಕಾರಣವೇನು? ಹಾಗೂ ಇತರೆ ಸಂಚಾರ ಸಮಸ್ಯೆಗಳ ಬಗ್ಗೆ ಮಾಹಿತಿ ದೊರೆಯುತ್ತದೆ. ಇದರೊಂದಿಗೆ ಸಂಚಾರ ಪೊಲೀಸರು ಕೂಡ ಸಾರ್ವಜನಿಕರ ಜತೆ ಉತ್ತಮ ಒಡನಾಟ ಇಟ್ಟಕೊಳ್ಳಲು ಸಹಾಯವಾಗುತ್ತದೆ”

-ಡಾ.ಬಿ.ಆರ್‌.ರವಿಕಾಂತೇಗೌಡ, ಜಂಟಿ ಪೊಲೀಸ್‌ ಆಯುಕ್ತ, ಸಂಚಾರ ವಿಭಾಗ

ವರದಿ: ಮೋಹನ್ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next