Advertisement

ಟ್ರಾಫಿಕ್‌ ಪೊಲೀಸ್‌ ಮತ್ತು ಎಸ್ಕೇಪ್‌ ಪುರಾಣ

01:26 PM Dec 30, 2017 | Team Udayavani |

ಒಮ್ಮೆ ನಾನು ಮತ್ತು ಗೆಳೆಯ ಒನ್‌ ವೇ ರಸ್ತೆಯಾದ ಗಾಂಧಿ ಬಜಾರಿನಲ್ಲಿ ಪ್ರತ್ಯೇಕ ಬೈಕ್‌ನಲ್ಲಿ ಬರುತ್ತಿದ್ದೆವು. ಸರ್ಕಲ್ ಬಳಿ ನಿಂತಿದ್ದ ಟ್ರಾಫಿಕ್‌ ಪೊಲೀಸ್‌ನನ್ನು ದೂರದಿಂದಲೇ ನೋಡಿಯೂ, ಮುಂದೆ ಹೊರಟೆವು. ಗೆಳೆಯ ಪೋಸ್ಟ್ ಆಫೀಸ್‌ ಕಡೆ ಗಾಡಿ ತಿರುಗಿಸಿದ, ನಾನು ಕೆ.ಆರ್‌. ಪುರ ರಸ್ತೆಗೆ ಗಾಡಿ ತಿರುಗಿಸುವುದರಲ್ಲಿದ್ದೆ. 

Advertisement

ನಮ್ಮನ್ನೇ ಗುರಾಯಿಸುತ್ತ ನಿಂತಿದ್ದ ಟ್ರಾಫಿಕ್‌ ಪೊಲೀಸ್‌ ನನ್ನೆಡೆಗೆ ಓಡಿಬಂದ. ನಾನು ಜೋರಾಗಿ ಎಕ್ಸಲೇಟರ್‌ ಒತ್ತಿ ತಪ್ಪಿಸಿಕೊಳ್ಳಲೆತ್ನಿಸಿದೆ. ಅದೃಷ್ಟ ಕೈಕೊಟ್ಟಿತು ನೋಡಿ: ಗಾಡಿ ಸ್ಕಿಡ್‌ ಆಗಿ ಬಿದ್ದುಬಿಟ್ಟೆ. ಅನಾಮತ್ತಾಗಿ ಪೊಲೀಸ್‌ ಕೈಗೆ ಸಿಕ್ಕಿಬಿದ್ದೆ. ಶುರುವಾಯಿತು ನೋಡಿ ಬೈಗುಳ ಪ್ರಹಾರ! “ಯಾಕ್ರೀ ಬಿದ್ದು ಸಾಯ್ತಿರ? ನಮ್ಮನ್ನು ನೋಡಿಯೂ ತಪ್ಪಿಸಿಕೊಂಡು ಹೋಗೋದಿಕ್ಕೆ ನೋಡ್ತೀರಲ್ಲ.

ನಾವು ನಿಮ್ಮ ಕಣ್ಣಿಗೇನು ಜೋಕರ್‌ಗಳ ಥರ ಕಾಣಿ¤àವಾ? ನೀವು ಬೀಳ್ಳೋದಿರ್ಲಿ, ಯಾರಾದ್ರೂ ಅಡ್ಡ ಸಿಕ್ರೆ ಏನ್ರೀ ಗತಿ..?’ ಅನ್ನುತ್ತಲೇ ಗಾಡಿಯ ಕೀ ತೆಗೆದುಕೊಂಡು “ಸೈಡಿಗೆ ಹಾಕ್ರಿ ಗಾಡೀನ’ ಅಂದ. ಇಷ್ಟೆಲ್ಲ ಗೊಣಗುತ್ತಿದ್ದರೂ ನನ್ನನ್ನು ಮೇಲೆತ್ತುವುದನ್ನು ಆತ ಮರೆಯಲಿಲ್ಲ.

“ಸಾರಿ ಸರ್‌. ಇದು ಒನ್‌ ವೇ ಅಂತ ನನಗೆ ಗೊತ್ತಿರ್ಲಿಲ್ಲ. ನನ್‌ ಫ್ರೆಂಡ್‌ ಏನಾಗಲ್ಲ ಹೋಗ್ಬೋದು ಅಂದ, ಅದಕ್ಕೆ ಹೊರಟ್ವಿ ಸರ್‌’ ಎಂದೆ. ಅದಕ್ಕಾತ “ಹೌದ್ರಿ. ದಿನಾ ನೋಡ್ತೀನಿ ನಾನವರನ್ನ. ಅವರನ್ನೇ ಹಿಡಿಯೋಕೆ ಅಂತ ಬಂದೆ. ಇವತ್ತೂ ತಪ್ಪಿಸಿಕೊಂಡ್‌ ಬಿಟ್ರಾ. ಎಜುಕೇಟೆಡ್‌ ಥರ ಕಾಣಿಸ್ತೀರ. ಯಾಕ್ರಿ ಹೀಗ್‌ ಮಾಡ್ತೀರಿ? ಸಾಹೇಬರ ಹತ್ರ ಬನ್ನಿ. ಫೈನ್‌ ಕಟ್ಟಿ ಗೊತ್ತಾಗುತ್ತೆ’ ಅಂದ.

“ಅಲ್ಲೆಲ್ಲ ಯಾಕೆ ಸರ್‌? ಇಲ್ಲೇ ಬಗೆಹರಿಸ್ಕೋಳ್ಳೋಣ’ ಅಂದಿದ್ದಕ್ಕೆ, ಆತನ ಉತ್ತರ ಕೇಳಿ ಅವಮಾನವಾಗಿಬಿಡು. “ಇಲ್ಲಿ ಇಷ್ಟು ಜನ ನೋಡ್ತಾ ಇದ್ದಾರೆ. ನಾನು ನಿಮ್ಮನ್ನು ಹಿಡಿದು ನಿಲ್ಲಿಸೋಕೆ ಬರ್ತೀನಿ. ನೀವು ತಪ್ಪಿಸಿಕೊಂಡು ಹೋಗ್ತಿರ. ಇಲ್ಲಿರೋ ಜನ ಎಲ್ಲ ನನ್ನನ್ನು ನೋಡಿ ನಗ್ತಾರೆ. ಆಗ ನನಗೆಷ್ಟು ಅವಮಾನ ಆಗುತ್ತೆ ಗೊತ್ತಾ ಸರ್‌? ಯಾಕಾದರೂ ಈ ಕೆಲಸಕ್ಕೆ ಸೇರಿದೆನೋ ಅನಿಸುತ್ತದೆ.

Advertisement

ಅದಿರಲಿ, ನೀವೇನು ಕೆಲಸ ಮಾಡ್ತೀರಾ ಸರ್‌?’ ಎಂದ. “ಲೆಕ್ಚರರ್‌’ ಎಂದು ಕೊಂಚ ಗರ್ವದಿಂದಲೇ ಹೇಳಿದೆ. ಅದಕ್ಕಾತ, “ನೀವೇ ಹೇಳಿ. ನಿಮ್ಮ ಸ್ಟೂಡೆಂಟ್‌ ಒಬ್ಬ, ನೀವು ಕರೀತಿರೋದನ್ನ ಲೆಕ್ಕಕ್ಕೆ ತೆಗೆದುಕೊಳ್ಳದೆ ಹಾಗೆ ಸೀದಾ ಹೋದರೆ ನಿಮಗೆ ಬೇಸರ ಆಗೋದಿಲ್ವೆ?’ ಎಂದು ಮರುಪ್ರಶ್ನಿಸಿದಾಗ, ನಾನು ನಿರುತ್ತರನಾದೆ.  ಇಷ್ಟೊತ್ತಿಗಾಗಲೇ ನಾವು ಅವರ ಸಾಹೇಬರ ಬಳಿ ಬಂದಿದ್ದೆವು.

ಅವರು ನನ್ನನ್ನು ನಿಲ್ಲಿಸಿಕೊಂಡು ಕೈಯಲ್ಲಿ ಕೀ ಇಡುತ್ತ, “ಪ್ರತಿ ಕೆಲಸಕ್ಕೂ ಅದರದ್ದೇ ಆದ ಡಿಗ್ನಿಟಿ ಇರುತ್ತೆ ಅಲ್ವಾ ಸರ್‌? ಅರ್ಜೆಂಟಲ್ಲಿ ಟ್ರಾಫಿಕ್‌ ರೂಲ್ಸ್‌ಗಳನ್ನು ಬ್ರೇಕ್‌ ಮಾಡಬೇಕಾದ ಅನಿವಾರ್ಯ ಬರಬಹುದು. ನೀವದನ್ನು ಹೇಳಿದರೆ ನಮಗೂ ಅರ್ಥವಾಗುತ್ತೆ. ನೀವೇ ನಮ್ಮನ್ನು ವಿಲನ್‌ಗಳಂತೆ ನೋಡಿದರೆ? ಫೈನ್‌ ಕಟ್ಟುವುದೇನೂ ಬೇಡ. ನಿಮ್ಮ ಬಗ್ಗೆ ಆ ಗೌರವ ಇದೆ. ಇನ್ನೊಮ್ಮೆ ಹೀಗೆ ಮಾಡಬೇಡಿ ಸರ್‌’ ಎಂದರು. 

ಅದೇ ಸಮಯಕ್ಕೆ ಎಸ್ಕೇಪ್‌ ಆದ ಗೆಳೆಯ ಕಾಲ್ ಮಾಡಿ, “ಏನಾಯೊ¤à? ಅವನು ಹಿಡಿದ್ನಾ? ನೀನ್ಯಾಕೆ ಸಿಕ್ಕಿಹಾಕಿಕೊಂಡೆ? ನಾನು ನೋಡು ದಿನಾ ತಪ್ಪಿಸ್ಕೋತೀನಿ’ ಅಂದ. ನನಗೂ ಮೊದಲು ಟ್ರಾಫಿಕ್‌ ಪೊಲೀಸರಿಂದ ತಪ್ಪಿಸಿಕೊಂಡರೆ ಏನೋ ಗೆದ್ದ ಹಾಗನಿಸುತ್ತಿತ್ತು. ಆದರೆ, ಕ್ಷಣಾರ್ಧದಲ್ಲಿ ನನ್ನ ಯೋಚನೆ ಬದಲಾಗಿತ್ತು. ನಾನು ಏನೊಂದೂ ಮಾತಾಡದೆ ಬೈಕ್‌ ಸ್ಟಾರ್ಟ್‌ ಮಾಡಿದೆ.

* ಶಿವಕುಮಾರ್‌ ಮಾವಲಿ

Advertisement

Udayavani is now on Telegram. Click here to join our channel and stay updated with the latest news.

Next