Advertisement

ಸಂಚಾರ ಪೊಲೀಸರಿಗೆ ಪ್ರತಿದಿನ 40 ಪ್ರಕರಣ ದಾಖಲು ಟಾರ್ಗೆಟ್‌?

02:38 PM Sep 28, 2022 | Team Udayavani |

ಬೆಂಗಳೂರು: ದಂಡ ಸಂಗ್ರಹ ನಮ್ಮ ಉದ್ದೇಶವಲ್ಲ. ಸಂಚಾರ ನಿಯಮ ಬಗ್ಗೆ ವಾಹನ ಸವಾರರಿಗೆ ಜಾಗೃತಿ ಮೂಡಿಸುವುದೇ ಮೊದಲ ಆದ್ಯತೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮಧ್ಯೆ ಪೂರ್ವ ವಿಭಾಗದ ಸಂಚಾರ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ವೊಬ್ಬರು ತಮ್ಮ ಅಧೀನ ಸಿಬ್ಬಂದಿಗೆ ಪ್ರತಿ ದಿನ 40 ಪ್ರಕರಣ ದಾಖಲಿಸಬೇಕು ಎಂದು ಆದೇಶ ನೀಡಿರುವ ಪತ್ರವೊಂದು ವೈರಲ್‌ ಆಗಿದೆ.

Advertisement

ನಿತ್ಯ ಕನಿಷ್ಠ 40 ಪ್ರಕರಣ ದಾಖಲಿಸಿಕೊಳ್ಳಬೇಕು. ನಿಗದಿತ ಸಂಖ್ಯೆಯಲ್ಲಿ ಕೇಸ್‌ ದಾಖಲಿಸದಿದ್ದರೆ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ನಗರದಲ್ಲಿ ಟೋಯಿಂಗ್‌ ರದ್ದಾಗಿದೆ. ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದರೆ ಮಾತ್ರ ವಾಹನಗಳನ್ನು ತಡೆದು ನಿಲ್ಲಿಸಿ ಪ್ರಕರಣ ದಾಖಲಿಸಬೇಕು. ಅಲ್ಲದೆ ಪ್ರಕರಣಕ್ಕೆ ದಾಖಲಿಸಲು ಯಾವುದೇ ಟಾರ್ಗೆಟ್‌ ನೀಡಿಲ್ಲ ಎಂದು ಹಿರಿಯ ಅಧಿಕಾರಿಗಳು ಆಗಾಗ್ಗೆ ಹೇಳುತ್ತಲೇ ಇದ್ದಾರೆ. ಈ ಮಧ್ಯೆ ದಿನ 40 ಪ್ರಕರಣ ದಾಖಲಿಗೆ ಸೂಚನೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದೆಡೆ ರಾಜ್ಯ ಸರ್ಕಾರದ ವಿರುದ್ಧ ಶೇ.40ರಷ್ಟು ಸರ್ಕಾರ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿರುವ ಬೆನ್ನಲ್ಲೇ ಇನ್‌ಸ್ಪೆಕ್ಟರ್‌ವೊಬ್ಬ ನಿತ್ಯ 40 ಪ್ರಕರಣ ದಾಖಲು ಮಾಡಬೇಕೆಂಬ ಪತ್ರ ವೈರಲ್‌ ಆಗಿರುವ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈರಲ್‌ ಪತ್ರದಲ್ಲಿ ಏನಿದೆ? :

ಪ್ರತಿ ನಿತ್ಯ ಕನಿಷ್ಠ 40 ಭಾರತೀಯ ಮೋಟಾರ್‌ ವಾಹನಗಳ ಕಾಯ್ದೆ (ಐಎಂವಿ) ಪ್ರಕರಣಗಳನ್ನು ದಾಖಲಿಸುವಂತೆ ಸೂಚಿಸಿದ್ದರೂ ಸೆ.18 ರಿಂದ ಸೆ. 22ರವರೆಗಿನ 5 ದಿನಗಳಲ್ಲಿ ತೀರಾ ಕಳಪೆ ರೀತಿಯಲ್ಲಿ ಐಎಂವಿ ಪ್ರಕರಣಗಳನ್ನು ದಾಖಲು ಮಾಡಿರುತ್ತೀರಿ. ದಿನಕ್ಕೆ ಕನಿಷ್ಠ 40 ಐಎಂವಿ ಪ್ರಕರಣಗಳನ್ನು ದಾಖಲು ಮಾಡಿದ್ದಲ್ಲಿ 200 ಐಎಂವಿ ಪ್ರಕರಣ ದಾಖಲಿಸಬೇಕಿತ್ತು. ಆದರೆ ನೀವುಗಳು (ಅಧಿಕಾರಿ ಹಾಗೂ ಸಿಬ್ಬಂದಿ) ಅತ್ಯಂತ ಕಡಿಮೆ ಪ್ರಕರಣಗಳನ್ನು ದಾಖಲಿಸಿದ್ದೀರಾ. ಈ ಕುರಿತು ಮೇಲಧಿಕಾರಿಗಳು ಆಕ್ಷೇಪಣೆ ವ್ಯಕ್ತಪಡಿಸುತ್ತಿರುವ ಬಗ್ಗೆ ನಿಮಗೆ ಹಲವು ಬಾರಿ ತಿಳಿಸಿ ಸೂಕ್ತ ತಿಳಿವಳಿಕೆ ನೀಡಿದರೂ ಸಹ ನಿಮ್ಮ ಕರ್ತವ್ಯದಲ್ಲಿ ಅತ್ಯಂತ ತೀರಾ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನ ತೋರಿಸಿದ್ದು ಕ್ಷಮೆಗೆ ಅರ್ಹವಾಗಿಲ್ಲ. ಆದ್ದರಿಂದ ಈ ಬಗ್ಗೆ ಜ್ಞಾಪನ ನೀಡಲಾಗಿದ್ದು, ಸ್ವೀಕರಿಸಿ, ಕೂಡಲೇ ಸಮಜಾಯಿಷಿ ನೀಡುವುದು. ಇಲ್ಲದಿದ್ದಲ್ಲಿ ನಿಮ್ಮಗಳ ಸಮಜಾಯಿಷಿ ಏನು ಇಲ್ಲವೆಂದು ಪರಿಗಣಿಸಿ ಮೇಲಧಿಕಾರಿ ಗಳಿಗೆ ವಿಶೇಷ ವರದಿ ಸಲ್ಲಿಸಲಾಗುವುದು ಎಂದು ವೈರಲ್‌ ಆಗಿರುವ ಪೂರ್ವ ವಿಭಾಗದ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ವೊಬ್ಬರು ನೀಡಿರುವ ಆದೇಶ ಪತ್ರದಲ್ಲಿ ಉಲ್ಲೇಖೀಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next