ಉಪ್ಪಿನಂಗಡಿ: ಗ್ರಾಮೀಣ ಪ್ರದೇಶವಾದ ಉಪ್ಪಿನಂಗಡಿಯಲ್ಲಿ ಎರಡು ರಸ್ತೆಗಳನ್ನು ಏಕಮುಖ ಸಂಚಾರಕ್ಕೆ ಒಳಡಿಸಿದ್ದು, ಸೋಮವಾರವೂ ಎರಡು ಗಂಟೆಗಳ ಕಾಲ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾದ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 75ರಿಂದ ಉಪ್ಪಿನಂಗಡಿಗೆ ಪ್ರವೇಶಿಸುವ ವಾಹನಗಳು ಒಂದೆಡೆಯಾದರೆ, ಶೆಣೈ ಆಸ್ಪತ್ರೆಯ ರಸ್ತೆಯಿಂದ ಶಾಲಾ ರಸ್ತೆಯನ್ನು ಪ್ರವೇಶಿಸುವ ವಾಹನಗಳು ಕೃತಕ ವಾಹನ ದಟ್ಟನೆಗೆ ಕಾರಣವಾಗಿ 6 ಪೊಲೀಸರು ಹಾಗೂ 6 ಗೃಹ ರಕ್ಷಕ ದಳದ ಸಿಬಂದಿ ಹರಸಾಹಸ ಮಾಡಿದರೂ ಸಂಚಾರ ನಿಯಂತ್ರಿಸಲು ಸಾಧ್ಯವಾಗದೆ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಬವಣೆಗೊಳಪಟ್ಟರು.
ಶಾಲೆ ಆರಂಭವಾದಲ್ಲಿಂದಲೂ ಪ್ರತೀ ದಿನ ಎರಡು ಅವಧಿಗಳಲ್ಲಿ ಈ ರೀತಿಯ ವಾಹನ ದಟ್ಟಣೆ ಕಾಣಿಸಿಕೊಳ್ಳುತ್ತಿದ್ದು, ಸೋಮವಾರ ಸತತ ಎರಡು ಗಂಟೆಗಳ ಕಾಲ ಸಮಸ್ಯೆಯಾಯಿತು.
ಮುಕ್ತ ಸಂಚಾರಕ್ಕೆ ಒಡ್ಡಿದ ತಡೆಯೇ ಸಮಸ್ಯೆಗೆ ಮೂಲ
ಈ ಮೊದಲು ಉಪ್ಪಿನಂಗಡಿ ಬ್ಯಾಂಕ್ ರಸ್ತೆ ಹಾಗೂ ಶೆಣೈ ಆಸ್ಪತ್ರೆ ರಸ್ತೆಯಲ್ಲಿ ಮುಕ್ತಸಂಚಾರ ವ್ಯವಸ್ಥೆ ಇತ್ತು. ಉಪ್ಪಿನಂಗಡಿಗೆ ಪ್ರೊಬೆಷನರಿ ನೆಲೆಯ ಬಂದ ಎಎಸ್ಪಿ ಪ್ರದೀಪ್ ಗುಂಟಿ ಸಾರ್ವಜನಿಕರ ಬೇಡಿಕೆ ಎಂದು ಭ್ರಮಿಸಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಉಭಯ ರಸ್ತೆಗಳನ್ನು ಏಕಮುಖ ಸಂಚಾರ ಘೋಷಿಸಿ ನಿರ್ಗಮಿಸಿದ್ದರು. ಇದರಿಂದ ರಸ್ತೆಯ ಪಾರ್ಶ್ವಗಳಲ್ಲಿ ವಾಹನಗಳ ನಿಲುಗಡೆಗೆ, ಅನಧಿಕೃತ ಅಂಗಡಿಗಳ ಸ್ಥಾಪನೆಗೆ ಅನುಕೂಲವಾಯಿತೇ ವಿನಃ ಸಂಚಾರ ವ್ಯವಸ್ಥೆ ಇನ್ನಷ್ಟು ಜಟಿಲಗೊಂಡಿತು.
ಡಿಸಿ ಮಧ್ಯಪ್ರವೇಶಕ್ಕೆ ಆಗ್ರಹ
ಈ ಮಧ್ಯೆ ಉಪ್ಪಿನಂಗಡಿಯ ಸಂಚಾರ ವ್ಯವಸ್ಥೆಯಲ್ಲಿ ಆಗುತ್ತಿರುವ ಸಮಸ್ಯೆಗಳ ನಿವಾರಣೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಧ್ಯ ಪ್ರವೇಶಿಸಬೇಕೆಂದು ಉಪ್ಪಿನಂಗಡಿ ವರ್ತಕರ ಸಂಘದ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ ಅವರು ಅಗ್ರಹಿಸಿದ್ದಾರೆ.