ಪಣಜಿ: ಗೋವಾಕ್ಕೆ ಬರುವ ಪ್ರವಾಸಿಗರಲ್ಲಿ ಹೊಡೆದಾಟದಂತಹ ಘಟನೆಗಳು ನಡೆದಿರುವ ಬಗ್ಗೆ ಈ ಹಿಂದೆಯೂ ಕೂಡ ವರದಿಯಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ಆಗಾಗ ಯಾವುದೋ ವಿಷಯಕ್ಕೆ ಜಗಳ ಮಾಡಿಕೊಂಡು ವಿಷಯ ಹೊಡೆದಾಟದ ಹಂತಕ್ಕೆ ತಲುಪುತ್ತದೆ. ಜನವರಿ 1 ರಂದು ಕೂಡ ಗೋವಾ -ಬೆಳಗಾವಿ ಹೆದ್ದಾರಿ ಚೋರ್ಲಾ ಘಾಟ್‍ನಲ್ಲಿ ಇಂತಹದ್ದೇ ಘಟನೆಯೊಂದು ನಡೆದಿದ್ದು ಇದರಿಂದ ಕೆಲಹೊತ್ತು ಟ್ರಾಫಿಕ್ ಜಾಮ್ ಉಂಟಾದ ಪ್ರಸಂಗ ನಡೆದಿದೆ.
ವರದಿಗಳ ಪ್ರಕಾರ, ಚೋರ್ಲಾ ಘಾಟ್‍ನಿಂದ ಬೆಳಗಾವಿಗೆ ತೆರಳುವ ಮಾರ್ಗದಲ್ಲಿ ತೆಲಂಗಾಣ ಮತ್ತು ಮಹಾರಾಷ್ಟ್ರದ ಪ್ರವಾಸಿಗರ ನಡುವೆ ವಾಗ್ವಾದ ನಡೆದು ನಂತರ ಜಗಳಕ್ಕೆ ತಿರುಗಿತು. ಈ ಸಂಬಂಧ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಇಬ್ಬರು ಪ್ರವಾಸಿಗರು ಒಬ್ಬರನ್ನೊಬ್ಬರು ನೂಕಾಟ ತಳ್ಳಾಟ ಮಾಡುತ್ತಿರುವುದು ಕಂಡುಬಂದಿದೆ. ಇವರ ನಡುವಿನ ಜಗಳಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಈ ಘಟನೆಯಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು.
ಚೋರ್ಲಾ ಘಾಟ್ ರಸ್ತೆ ಕಿರಿದಾಗಿದ್ದು ಎರಡೂ ಕಾರುಗಳು ರಸ್ತೆಯಲ್ಲೇ ನಿಂತಿದ್ದರಿಂದ ಇತರೆ ವಾಹನ ಸವಾರರು ಪರದಾಡಬೇಕಾಯಿತು. ಕೆಲ ಸಮಯದ ವರೆಗೆ ನಡೆದ ಜಗಳದಿಂದಾಗಿ ಈ ಮಾರ್ಗದಲ್ಲಿ ಓಡಾಟ ನಡೆಸುತ್ತಿದ್ದ ಹಲವು ಪ್ರಯಾಣಿಕರು ರಸ್ತೆಯಲ್ಲಿಯೇ ನಿಂತು ಪರದಾಡುವಂತಾಯಿತು.
ಇದನ್ನೂ ಓದಿ : ಮಂಗಳೂರು: ರನ್‌ವೇ ಕಾಮಗಾರಿ… ಹಗಲು ಹೊತ್ತು ವಿಮಾನ ಹಾರಾಟದಲ್ಲಿ ವ್ಯತ್ಯಯ