Advertisement

ನಿರ್ಲಕ್ಷ್ಯಕ್ಕೊಳಗಾದ ಕೊಯ್ಯೂರು ಗ್ರಾಮ: ಆದುರ್‌ಪೆರಾಲ್‌-ಪರಪ್ಪು ರಸ್ತೆ; ಸಂಚಾರ ದುಸ್ತರ

09:21 PM Aug 20, 2020 | mahesh |

ಬೆಳ್ತಂಗಡಿ: ಗ್ರಾಮೀಣ ಅಭಿವೃದ್ಧಿಗೆ ಸರಕಾರ ಯೋಜನೆಗಳನ್ನು ಹಮ್ಮಿ ಕೊಂಡರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸವಲತ್ತುಗಳಿಂದ ವಂಚಿತವಾಗುತ್ತಲೇ ಇದೆ ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮ ನಿದರ್ಶನ.

Advertisement

ಕೊಯ್ಯೂರು ಗಾಮದ ಆದುರ್‌ಪೆರಾಲ್‌ನಿಂದ ಪರಪ್ಪು ಸಾಗುವ 4 ಕಿ. ಮೀ. ಜಿ.ಪಂ. ರಸ್ತೆಯು ಹೊಂಡಗಳಿಂದ ಕೂಡಿದ್ದು, ಸಂಚಾರ ಕಷ್ಟಸಾಧ್ಯವಾಗಿದೆ. ಬಾಡಿಗೆ ವಾಹನಗಳು, ರಿಕ್ಷಾ ಚಾಲಕರು ಈ ರಸ್ತೆಯಾಗಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೊಯ್ಯೂರು ಮಂದಿಗೆ ಉಪ್ಪಿನಂಗಡಿಯಾಗಿ ಮತ್ತು ಗುರುವಾಯನಕೆರೆಯಾಗಿ ಮಂಗಳೂರಿಗೆ ತೆರಳಲು ಈ ರಸ್ತೆ ಅತ್ಯವಶ್ಯ. ಇಲ್ಲವಾದಲ್ಲಿ ಬೆಳ್ತಂಗಡಿಯಾಗಿ 15 ಕಿ. ಮೀ. ಸುತ್ತಿಬಳಸಿ ಬರಬೇಕಿದೆ. ಹೈನುಗಾರಿಕೆ, ಶಿಕ್ಷಣ, ಕೃಷಿ ಸಲಕರಣೆ ಸಾಗಾಟ, ಆರೋಗ್ಯ ದೃಷ್ಟಿಯಿಂದ ಕೊಯ್ಯೂರು ಬಡವಾಗಿದೆ.

ಕೊಯ್ಯೂರು ಗ್ರಾಮವನ್ನು ಉಜಿರೆ, ಬೆಳ್ತಂಗಡಿ, ಬೆಳಾಲು, ಉಪ್ಪಿನಂಗಡಿ ನಾಲ್ಕು ಕಡೆಗಳಿಂದ ಸಂಪರ್ಕಿಸುವ ರಸ್ತೆಗಳಿದ್ದರೂ ಅಭಿವೃದ್ಧಿಯಾಗಿಲ್ಲ. ಗ್ರಾಮಸ್ಥರು ಹಲವು ವರ್ಷಗಳಿಂದ ಬೇಡಿಕೆ ಸಲ್ಲಿಸಿದ್ದರೂ ಸ್ಪಂದನೆ ಸಿಕ್ಕಿಲ್ಲ.  ಕೊಯ್ಯೂರು ಕ್ರಾಸ್‌ನಿಂದ ಬಜಿಲ ವರೆಗೆ ಸುಮಾರು 15 ಕಿ. ಮೀ. ದೂರ ವಿದ್ದು, ಕಳೆದ ಬಾರಿ ಕೊಯ್ಯೂರು ಕ್ರಾಸ್‌ನಿಂದ ಬಾಸಮೆವರೆಗೆ 6 ಕಿ. ಮೀ. ರಸ್ತೆಯನ್ನು 4.30 ಕೋ. ರೂ. ವೆಚ್ಚದಲ್ಲಿ 12 ಮೀ. ವಿಸ್ತರಣೆ ಮಾಡಿ ಡಾಮರು ಹಾಕಲಾಗಿದೆ. ಉಳಿದಂತೆ ಬಾಸಮೆಯಿಂದ ಬಜಿಲವರೆಗೆ 9 ಕಿ. ಮೀ. ರಸ್ತೆ ತೀರಾ ಹದಗೆಟ್ಟಿದೆ.

ಇತರ ರಸ್ತೆಗಳಲ್ಲೂ ಹೊಂಡ
ಕೊಯ್ಯೂರು ಗ್ರಾಮದ ಒಳ ರಸ್ತೆ
ಗಳು ಕಚ್ಚಾರಸ್ತೆಯಾಗಿದ್ದು, ಪ್ರಮುಖ
ವಾಗಿ ಮಲೆಬೆಟ್ಟು ನಿನ್ನಿಕಲ್ಲು 3 ಕಿ. ಮೀ., ಬಾಸಮೆ-ಬಜಿಲ 9 ಕಿ. ಮೀ., ಆದುರ್‌ಪೆರಾಲ್‌-ಎರುಕಡಪು 4 ಕಿ.ಮೀ. ಅಗತ್ಯವಾಗಿ ಅಭಿವೃದ್ಧಿ ಆಗಬೇಕಾಗಿದೆ.

ಅಭಿವೃದ್ಧಿಗೆ ತೊಡಕು
ಗ್ರಾಮ ಅಭಿವೃದ್ಧಿಗೆ ಅಸಮರ್ಪಕ ರಸ್ತೆ ಸಂಪರ್ಕವೇ ಮೂಲ ತೊಡಕಾಗಿ ಪರಿಣಮಿಸಿದೆ. ಗ್ರಾಮೀಣ ಪ್ರದೇಶ ವಾದರೂ ಇಲ್ಲಿಂದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಉಜಿರೆ, ಮಂಗಳೂರು ಸಹಿತ ಇತರೆಡೆಗೆ ತೆರಳುತ್ತಿದ್ದಾರೆ. ಇದರೊಂದಿಗೆ ಆರೋಗ್ಯ ಸಮಸ್ಯೆಯಾದಲ್ಲಿ ಆಸ್ಪತ್ರೆಗೆ ತೆರಳಲು ಆ್ಯಂಬುಲೆನ್ಸ್‌, ವಾಹನ ಸಂಚಾರ ಬಹುದೊಡ್ಡ ಸವಾಲಾಗಿದೆ.

Advertisement

ಮಳೆಗಾಲ ಬಳಿಕ ಕಾಮಗಾರಿ
ಪರಪ್ಪು-ಆದುರ್‌ಪೆರಾಲ್‌ ರಸ್ತೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಒಟ್ಟು 5 ಕೋ. ರೂ. ಟೆಂಡರ್‌ ಕರೆದು ಅಭ್ಯುದಯ ಕನ್‌ಸ್ಟ್ರಕ್ಷನ್‌ಗೆ ಗುತ್ತಿಗೆ ನೀಡಲಾಗಿದೆ. 5 ಕಿ. ಮೀ. ರಸ್ತೆಯು 7 ಮೀ. ವಿಸ್ತರಣೆ ಜತೆಗೆ ಸಂಪೂರ್ಣ ಹೊಸ ಮೋರಿಗಳನ್ನು ಅಳವಡಿಸಲಾಗುವುದು. 5 ವರ್ಷ ನಿರ್ವಹಣೆ ಗುತ್ತಿಗೆಯನ್ನೂ ನೀಡಲಾಗಿದೆ. ಮಳೆಗಾಲದ ಬಳಿಕ ಕಾಮಗಾರಿ ಆರಂಭಿಸಲಾಗುವುದು.
– ಹರೀಶ್‌ ಪೂಂಜ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next