Advertisement
ರಫೆಲ್ ಯುದ್ಧ ವಿಮಾನ ಹಸ್ತಾಂತರಿಸುವ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡೆಸಿದ ಆಯುಧ ಪೂಜೆಯ ಔಚಿತ್ಯವನ್ನು ಕೆಲವು ರಾಜಕಾರಣಿಗಳು ಮತ್ತು ಪ್ರಗತಿಪರರು ಮೂಢನಂಬಿಕೆಯೆಂದು ಗೇಲಿ ಮಾಡಿದ್ದಾರೆ. ನವರಾತ್ರಿಯಲ್ಲಿ ಕಾರ್ಖಾನೆಗಳಲ್ಲಿ, ಪತ್ರಿಕಾ ಕಾರ್ಯಾಲಯಗಳಲ್ಲಿ, ಸರಕಾರಿ ಆಸ್ಪತ್ರೆ-ಕಚೇರಿಗಳಲ್ಲಿ ಆಯುಧ ಪೂಜೆ ನಡೆಸುವ ಪರಿಪಾಠ ಇದೆ. ಅಣುರೇಣು ತೃಣ ಕಾಷ್ಟದಲ್ಲಿ ಭಗವಂತನನ್ನು ಕಾಣುವ ನಮ್ಮ ಜೀವನ ಪದ್ಧತಿಯಲ್ಲಿ ಸಹಸ್ರಾರು ವರ್ಷಗಳಿಂದ ಪ್ರಕೃತಿ, ಸೂರ್ಯ, ಚಂದ್ರ, ವೃಕ್ಷ, ನದಿ, ಯಂತ್ರಗಳನ್ನು ಪೂಜಿಸುವ ಸಂಪ್ರದಾಯ ಇದೆ. ಅವರವರ ಭಾವಕ್ಕೆ ಅವರವರ ಭಕುತಿಗೆ… ಎನ್ನುವಂತೆ ವೈದ್ಯಕೀಯ ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಜೀವ ಉಳಿಸುವ ನಿಪುಣ ವೈದ್ಯರೂ ಎಲ್ಲವೂ ಮೇಲಿನವನ ಕೃಪೆ ಎನ್ನುತ್ತಾರೆ. ವಿಜ್ಞಾನಕ್ಕೂ ನಿಲುಕದ ಅಗೋಚರ ಶಕ್ತಿಯ ಇರುವಿಕೆಯನ್ನು ವಿಜ್ಞಾನಿಗಳೂ ಒಪ್ಪುತ್ತಾರೆ. ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ಜನರ ನಂಬಿಕೆಗೆ ಸಂಬಂಧಿಸಿದ ಭೂಮಿ ಪೂಜೆ, ಶಸ್ತ್ರ ಪೂಜೆಗಳನ್ನು ಸಾರ್ವಜನಿಕವಾಗಿ ಟೀಕಿಸುವವರೂ ಖಾಸಗಿಯಾಗಿ ಅನುಸರಿ ಸುತ್ತಾರೆ. ಹಾಗಿದ್ದ ಮೇಲೆ ಇದರ ವಿರೋಧ ಆಷಾಡ ಭೂತಿತನವಲ್ಲವೇ?
Related Articles
Advertisement
ಈ ದೇಶವನ್ನು ನೂರಾರು ವರ್ಷ ಮುಸ್ಲಿಮರು ಹಾಗೂ ಅನಂತರ ಆಂಗ್ಲರು ಆಳಿದರೂ ಸೇನೆಯ ಬಟಾಲಿಯನ್‌ಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳ ರೀತಿ-ರಿವಾಜುಗಳು, ಸಂಪ್ರದಾಯಗಳು ಅಡೆತಡೆಯಿಲ್ಲದೆ ನಡೆದು ಬಂದಿದೆ. ಫಿಸಿಕಲ್ ಟ್ರೈನಿಂಗ್ ಪರೇಡ್, ಡ್ರಿಲ್ ಪರೇಡ್, ವೆಪನ್ ಟ್ರೈನಿಂಗ್ ಪರೇಡ್ ಇದ್ದಂತೆ ಸೇನೆಯಲ್ಲಿ ಸಾಪ್ತಾಹಿಕ ಹಾಗೂ ವಿಶೇಷ ಸಂದರ್ಭಗಳಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ, ಪೂಜೆಗೆ ಇಂದಿಗೂ ಮಂದಿರ್ ಪರೇಡ್ ಎನ್ನಲಾಗುತ್ತದೆ. ಕಾರಣವಿಲ್ಲದೇ ಸೈನಿಕರು ಮಂದಿರ್ ಪರೇಡ್‌ನಿಂದ ಗೈರಾಗುವಂತಿಲ್ಲ. ಮಂದಿರ್ ಪರೇಡ್‌ನಲ್ಲಿ ಎಷ್ಟು ಸೈನಿಕರು ಭಾಗವಹಿಸುತ್ತಿದ್ದಾರೆ, ಮಿಕ್ಕವರು ಎಲ್ಲೆಲ್ಲಿ ಇದ್ದಾರೆ ಎನ್ನುವ ಕುರಿತು ಪರೇಡ್ ಸ್ಟೇಟ್ ತಯಾರಿಸಿ ಸಂಬಂಧಿತ ಮೇಲಧಿಕಾರಿಗೆ ಸಲ್ಲಿಸಲಾಗುತ್ತದೆ.
ಇಂದಿಗೂ ಸೇನೆಯಲ್ಲಿ ಕಾರ್ಯಾಚರಣೆ, ಯುದ್ಧಾಭ್ಯಾಸಗಳಿಗೆ ತೆರಳುವ ಮೊದಲು ಅಲ್ಲಾ, ವಾಹೆ ಗುರೂ, ಭಗವಂತನನ್ನು ಸ್ಮರಿಸುವ, ಮಂದಿರ , ಮಸೀದಿ, ಗುರುದ್ವಾರಾ ಪರೇಡ್ ಏರ್ಪಡಿಸುವ ರಿವಾಜಿದೆ. ಆಯುಧ ಪೂಜೆ, ಹೋಮ-ಹವನಗಳಲ್ಲಿ ಬಟಾಲಿಯನ್ ಕಮಾಂಡರ್ ಹಿಂದೂಯೇತರರಾಗಿದ್ದರೂ ಒಂದಷ್ಟೂ ಚ್ಯುತಿ ಬಾರದಂತೆ ನಡೆಸಲಾಗುತ್ತದೆ. ಸೈನಿಕರು ಪರಸ್ಪರರನ್ನು, ಹಿರಿಯ ಅಧಿಕಾರಿಗಳನ್ನು ಜೈ ಹಿಂದ್ ಎಂದು ಸೆಲ್ಯೂಟ್ ನೀಡಿ ಗೌರವಿಸುವುದರ ಜತೆಯಲ್ಲೇ ಹಲವು ಬಟಾಲಿಯನ್ ಗಳಲ್ಲಿ ರಾಮ್ ರಾಮ…, ಜೈ ದುರ್ಗೆ ಎಂದು ಹೇಳುವ ಸಂಪ್ರದಾಯವೂ ಇದೆ. ಮಹಾರ್ ರೆಜಿಮೆಂಟಿನಲ್ಲಿ ನಡೆಯುವ ಹೋಮದಲ್ಲಿ ಮುಸಲ್ಮಾನ ಬಟಾಲಿಯನ್ ಕಮಾಂಡರ್ ಪೂರ್ಣಾಹುತಿ ನೀಡುವ, ಸಿಖ್ ರೆಜಿಮೆಂಟಿನಲ್ಲಿ ನಡೆಯುವ ಗುರುದ್ವಾರಾ ಸಾಹಿಬ್‌ನಲ್ಲಿ ಕ್ರಿಶ್ಚಿಯನ್ ಬಟಾಲಿಯನ್ ಕಮಾಂಡರ್ ನೇತೃತ್ವವನ್ನು ವಹಿಸುವ ಭವ್ಯ ಪರಂಪರೆ ಇದೆ. ಧಾರ್ಮಿಕ ರೀತಿ ರಿವಾಜುಗಳು ಸೇನೆಯ ದಿನಚರಿಯ ಅವಿಭಾಜ್ಯ ಅಂಗವಾಗಿವೆ.
ರೈತ, ಕೈ ಬಾಯಿ ಸಂಘರ್ಷದ ದಯನೀಯ ಸ್ಥಿತಿಯಲ್ಲಿರುವ ಕಾರ್ಮಿಕ ವರ್ಗ, ಸಣ್ಣ ವ್ಯಾಪಾರಿ, ಸೈನಿಕರು ಅನಿಶ್ಚಿತ ಬದುಕಿನ ಬವಣೆಯ ನಡುವೆ ತಮ್ಮ ಆತ್ಮಸಂತೋಷದ ಆಸರೆಯಾಗಿ ಅನುಸರಿಸುವ ಆಚರಣೆಗಳಿಂದ ಯಾರಿಗೇನೂ ತೊಂದರೆಯಾಗದೆಂದ ಮೇಲೆ ಅವುಗಳನ್ನು ಲೇವಡಿ ಮಾಡುವ ಅಗತ್ಯವಿಲ್ಲ. ಹವಾಮಾನದ ವೈಪರೀತ್ಯದಿಂದ ಬೆಳೆನಾಶ, ಪೃಕೃತಿ ವಿಕೋಪದಂತಹ ವಿಪತ್ತುಗಳಿಂದ ಕಂಗೆಟ್ಟಿರುವ ರೈತ ನೆಮ್ಮದಿಗಾಗಿ ಪೃಕೃತಿ ಪೂಜೆಗೆ ಶರಣಾಗುತ್ತಾನೆ. ಸಾವಿನ ದವಡೆಗೆ ಕೈ ಹಾಕಲು ಹೊರಟಿರುವ ಸೈನಿಕ ತನ್ನ ಆತ್ಮಸ್ಥೆರ್ಯವನ್ನು ಉಚ್ಚಸ್ಥಿತಿಯಲ್ಲಿಟ್ಟುಕೊಳ್ಳಲು ಪ್ರಾರ್ಥನೆ, ಪೂಜೆಯ ಮೊರೆ ಹೋದರೆ ಅದು ಮೂಢ ನಂಬಿಕೆ ಎನ್ನಲಾಗದು. ನಮ್ಮದೆಲ್ಲವನ್ನೂ ತೆಗಳುವ, ಜೀವನಕ್ಕೆ ಅರ್ಥ ನೀಡಬಲ್ಲ ಆಸರೆಯಾಗಬಲ್ಲ ರೀತಿ ರಿವಾಜುಗಳನ್ನು ವಿರೋಧಿಸಿ ಬರಡಾಗಿಸುವ ಬೊಗಳೆ ವಿಚಾರವಾದಿಗಳನ್ನು ಅಲಕ್ಷಿಸುವುದೇ ಸರಿಯಾದ ಕ್ರಮ.
– ಬೈಂದೂರು ಚಂದ್ರಶೇಖರ ನಾವಡ