ಕಲಬುರಗಿ: ಬಿಸಿಲಿನ ಝಳಕ್ಕೆ ಟ್ರ್ಯಾಕ್ಟರ್ ನ ಟೈರ್ ಸ್ಫೋಟಗೊಂಡು ಪಲ್ಟಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, 15 ಜನರು ಗಾಯಗೊಂಡ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕಲ್ಲೂರು ರೋಡ್ ಗ್ರಾಮದ ಸಮೀಪ ಶನಿವಾರ ಮಧ್ಯಾಹ್ನ ನಡೆದಿದೆ.
ಸೇಡಂ ತಾಲೂಕಿನ ಮಳಖೇಡ ಗ್ರಾಮದ ಯಲ್ಲಮ್ಮ ಭೀಮರಾವ್ (40) ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ಗ್ರಾಮದ 15 ಜನರು ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ:ಮಸೀದಿ ಧರ್ಮ ಗುರುಗಳ ಮೇಲೆ ಹಲ್ಲೆ ಪ್ರಕರಣ : ಕಿಡಿಗೇಡಿಗಳ ಸೆರೆಗೆ ಒತ್ತಾಯ
ಕಲ್ಲೂರು ರೋಡ್ ಗ್ರಾಮದಲ್ಲಿ ಪರಿಚಯಸ್ಥರೊಬ್ಬರು ಮೃತಪಟ್ಟಿದ್ದರು. ಇವರ ಶವ ಸಂಸ್ಕಾರಕ್ಕೆಂದು ಸೇಡಂ ತಾಲೂಕಿನ ಮಳಖೇಡದಿಂದ ಟ್ರ್ಯಾಕ್ಟರ್ ನಲ್ಲಿ ಒಟ್ಟು 23 ಜನರು ಬರುತ್ತಿದ್ದರು. ಕಲ್ಲೂರು ಗ್ರಾಮದ ಸಮೀಪ ಬರುತ್ತಿದ್ದಂತೆ ಟ್ರ್ಯಾಕ್ಟರ್ ನ ಟೈರ್ ಸ್ಫೋಟಗೊಂಡಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ರಸ್ತೆ ಬದಿಗೆ ಉರುಳಿದೆ.
ತೀವ್ರ ಬಿಸಿಲಿನ ಕಾರಣದಿಂದ ಟ್ರ್ಯಾಕ್ಟರ್‌ನ ಟೈರ್ ಸ್ಫೋಟಿಸಿರುವುದರಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಂಚೋಳಿ ತಾಲೂಕ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.