Advertisement

ಅಂತಿಮ ಹಂತದಲ್ಲಿ ಟೆಂಡರ್‌ ಪ್ರಕ್ರಿಯೆ: ಶೀಘ್ರ ಕಾಮಗಾರಿ ನಿರೀಕ್ಷೆ

02:40 AM Jul 26, 2018 | Karthik A |

ವಿಶೇಷ ವರದಿ – ಮಹಾನಗರ: ಮೋರ್ಗನ್‌ ಗೇಟ್‌ ಸಮೀಪದ ನೇತ್ರಾವತಿ ರೈಲ್ವೇ ಸೇತುವೆಯಿಂದ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದವರೆಗಿನ ಒಂದೂವರೆ ಕಿ.ಮೀ. ಉದ್ದ ರೈಲು ಹಳಿ ದ್ವಿಗುಣಗೊಳಿಸುವ ಕಾಮಗಾರಿ ಶೀಘ್ರ ಕಾರ್ಯಾರಂಭವಾಗುವ ಸಾಧ್ಯತೆಯಿದೆ. 2016- 17ರಲ್ಲಿ  ರೈಲ್ವೇ ಇಲಾಖೆಯಿಂದ ಅನುಮೋದನೆಯಾದ ಈ ಯೋಜನೆ ಅನುಷ್ಠಾನವಾದರೆ, ಸೆಂಟ್ರಲ್‌ ನಿಲ್ದಾಣಕ್ಕೆ ರೈಲುಗಳು ನಿಲುಗಡೆ ಇಲ್ಲದೆ (ನೇತ್ರಾವತಿ ಸೇತುವೆ ಬಳಿ) ನೇರವಾಗಿ ಸಂಚರಿಸಲು ಅನುಕೂಲವಾಗಲಿದೆ.

Advertisement

ಈ ಹಳಿ ದ್ವಿಗುಣ ಕಾಮಗಾರಿಗೆ 2017ರ ಆ. 18ರಂದು ನಗರದಲ್ಲಿ ಶಿಲಾನ್ಯಾಸ ನಡೆದಿತ್ತು. ರೈಲ್ವೇ ಸಚಿವರಾಗಿದ್ದ ಸುರೇಶ್‌ ಪ್ರಭು ಅವರು ಹೊಸದಿಲ್ಲಿಯ ರೈಲ್ವೇ ಮಂಡಳಿ ಸಭಾಭವನದಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ಚಾಲನೆ ನೀಡಿದ್ದರು. 28.05 ಕೋಟಿ ರೂ. ವೆಚ್ಚದಲ್ಲಿ ಈ ಹಳಿ ದ್ವಿಗುಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅಂದು ತಿಳಿಸಲಾಗಿತ್ತು. ಆ ಬಳಿಕ ಈ ಯೋಜನೆ ಕುರಿತು ದೊಡ್ಡ ಮಟ್ಟದ ಪ್ರಕ್ರಿಯೆ ನಡೆದಿರಲಿಲ್ಲ. ಆದರೆ, ಈಗ ಪ್ರಸ್ತಾವಿತ ಯೋಜನೆಯ ಅಂದಾಜು ಮೊತ್ತ 38 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಬಗ್ಗೆ ಜೂ. 29ರಂದು ನಗರದಲ್ಲಿ ಸಂಸದ ನಳಿನ್‌ ಅವರ ನೇತೃತ್ವದಲ್ಲಿ ನಡೆದ ರೈಲ್ವೇ ಇಲಾಖೆ ಸಭೆಯಲ್ಲಿ ಮಾಹಿತಿ ನೀಡಲಾಗಿತ್ತು. ಈಗ ನೇತ್ರಾವತಿ ಸೇತುವೆಯಿಂದ ಬಲಭಾಗದ ರೈಲು ಹಳಿಯು ಮಂಗಳೂರು ಜಂಕ್ಷನ್‌ವರೆಗೆ ದ್ವಿಗುಣ ಗೊಂಡಿದೆ. ಆದರೆ, ನೇತ್ರಾವತಿ ಸೇತುವೆ ಯಿಂದ ಮಂಗಳೂರು ಸೆಂಟ್ರಲ್‌ ಹಾಗೂ ಸೆಂಟ್ರಲ್‌ನಿಂದ ಮಂಗಳೂರು ಜಂಕ್ಷನ್‌ (ಕಂಕನಾಡಿ) ಮಧ್ಯೆ ರೈಲು ದ್ವಿಗುಣಗೊಂಡಿಲ್ಲ. 

ಫಿಟ್‌ ಲೈನ್‌ ಶಿಪ್ಟ್
ರೈಲು ಹಳಿ ದ್ವಿಗುಣಗೊಳ್ಳುವ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್‌ನಲ್ಲಿ ಇನ್ನೊಂದು ಫ್ಲ್ಯಾಟ್‌ ಫಾರಂ ಕೂಡ ನಿರ್ಮಾಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈಗ ಸೆಂಟ್ರಲ್‌ ನಲ್ಲಿರುವ ‘ಫಿಟ್‌ ಲೈನ್‌’ ಅನ್ನು (ಬೋಗಿಗಳ ತಾಂತ್ರಿಕ ಕಾಮಗಾರಿ ನಡೆಸುವ ಹಳಿ) ಸ್ಥಳಾಂತರಿಸಬೇಕಾಗುತ್ತದೆ. ಸದ್ಯ ಫಿಟ್‌ ಲೈನ್‌ ಅನ್ನು ಈಗಿರುವ ಜಾಗದಿಂದ ಸ್ವಲ್ಪ ದೂರಕ್ಕೆ ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಸ್ಥಳ ಕೂಡ ನಿಗದಿ ಮಾಡಲಾಗಿದೆ. ಮೊದಲಿಗೆ ಇದರ ಕಾಮಗಾರಿ ನಡೆದು, ಆ ಬಳಿಕ ರೈಲ್ವೇ ದ್ವಿಗುಣ ಹಾಗೂ ಹೆಚ್ಚುವರಿ ಫ್ಲ್ಯಾಟ್‌ಫಾರಂ ರಚನೆ ನಡೆಯಲಿದೆ. 

ರೈಲ್ವೆಯದ್ದೇ ಭೂಮಿ!
ರೈಲ್ವೇ ಇಲಾಖೆಯ ಮೂಲಗಳ ಪ್ರಕಾರ ನೇತ್ರಾವತಿ ಸೇತುವೆಯಿಂದ ಸೆಂಟ್ರಲ್‌ ವರೆಗಿನ ಹಳಿ ದ್ವಿಗುಣದ ಹಿನ್ನೆಲೆಯಲ್ಲಿ ಯಾವುದೇ ಖಾಸಗಿ ಭೂಮಿ ಇರುವುದಿಲ್ಲ ಎಂಬ ಮಾಹಿತಿ ಇದ್ದು, ರೈಲ್ವೇ ಇಲಾಖೆಗೆ ಸೇರಿದ ಭೂಮಿಯಲ್ಲಿಯೇ ಇನ್ನೊಂದು ಹಳಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಮೋರ್ಗನ್‌ ಗೇಟ್‌ ಸೇರಿದಂತೆ ಕೆಲವು ಕಡೆಯಲ್ಲಿ ಖಾಸಗಿ ಭೂಮಿ ಇದ್ದು, ಭೂಸ್ವಾಧೀನ ನಡೆಸಬೇಕಾಗಬಹುದು ಎಂಬ ಬಗ್ಗೆಯೂ ಮಾಹಿತಿ ಇದೆ. ಟೆಂಡರ್‌ ಪೂರ್ಣಗೊಂಡ ಬಳಿಕವಷ್ಟೇ ಈ ಪ್ರಕ್ರಿಯೆ ಅಂತಿಮವಾಗಲಿದೆ.

ಕೈಬಿಟ್ಟಿದ್ದ ಸೆಂಟ್ರಲ್‌
ಶೋರ್ನೂರುವಿನಿಂದ ಮಂಗಳೂರುವರೆಗೆ ರೈಲು ಹಳಿ ದ್ವಿಗುಣ ಕಾಮಗಾರಿ ಯನ್ನು ಸುದೀರ್ಘ‌ ವರ್ಷದ ಹಿಂದೆ ಕೈಗೊಳ್ಳಲಾಗಿತ್ತು. ಆದರೆ, ಮಂಗಳೂರು ಸೆಂಟ್ರಲ್‌ ಗೆ ಬರಬೇಕಾದ ದ್ವಿಗುಣ ಸವಲತ್ತು ಮಂಗಳೂರು ಜಂಕ್ಷನ್‌ (ಕಂಕನಾಡಿ) ಪಾಲಾಯಿತು. ಕೇರಳದಿಂದ ಬರುವ ರೈಲುಗಳು ಮಂಗಳೂರು ಜಂಕ್ಷನ್‌ ಅನ್ನೇ ನೆಚ್ಚಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್‌ಗೆ ರೈಲು ದ್ವಿಗುಣ ಸವಲತ್ತು ದೊರೆತಿರಲಿಲ್ಲ. ಆದರೆ ಕೆಲವು ವರ್ಷಗಳ ಹಿಂದೆ ಈ ತಾರತಮ್ಯವನ್ನು ಖಂಡಿಸಿ ಕರಾವಳಿ ಭಾಗದ ರೈಲ್ವೇ ಹೋರಾಟಗಾರರು ಕೇಂದ್ರ ಸರಕಾರದ ಗಮನಕ್ಕೆ ತಂದ ಬಳಿಕ ಈಗ ಸೆಂಟ್ರಲ್‌ನಿಂದ ನೇತ್ರಾವತಿ ಸೇತುವೆವರೆಗಿನ ರೈಲು ಹಳಿಯು ದ್ವಿಗುಣ ಪ್ರಕ್ರಿಯೆಗೆ ಜೀವಬಂದಿದೆ. 

Advertisement

ತಾಸುಗಟ್ಟಲೆ ಕಾಯಬೇಕಾಗಿಲ್ಲ !
ಈಗ ಸೆಂಟ್ರಲ್‌ ನಿಂದ ನೇತ್ರಾವತಿ ಸೇತುವೆವರೆಗೆ ಒಂದು ರೈಲು ಹಳಿ ಇರುವ ಕಾರಣದಿಂದ, ಸೆಂಟ್ರಲ್‌ ನಿಂದ ಒಂದು ರೈಲು ಹೊರಟ ಅನಂತರ ಅದು ನೇತ್ರಾವತಿ ಸೇತುವೆ ದಾಟುವವರೆಗೆ, ಕೇರಳ ಭಾಗದಿಂದ ಇನ್ನೊಂದು ರೈಲು ಬರಲು ಅವಕಾಶವಿಲ್ಲ. ಹೀಗಾಗಿ ಕೇರಳ ಭಾಗದಿಂದ ಬರುವ ರೈಲು ಸುಮಾರು 10- 15 ನಿಮಿಷ ನೇತ್ರಾವತಿ ಸೇತುವೆ ಬಳಿ ನಿಲ್ಲಬೇಕಾಗುತ್ತದೆ. ಕಾದು ಕಾದು ಸುಸ್ತಾಗುವ ಕೆಲವು ಪ್ರಯಾಣಿಕರು ಅಲ್ಲೇ ರೈಲಿನಿಂದಿಳಿದು ಸೇತುವೆಯ ಬಲಭಾಗದ ದಾರಿಯಲ್ಲಿ ನಡೆದುಕೊಂಡು ಬಂದು ರಸ್ತೆ$ಮೂಲಕ ಮಂಗಳೂರಿಗೆ ಬರುವವರೂ ಇದ್ದಾರೆ. ಹಳಿ ದ್ವಿಗುಣಗೊಂಡರೆ ಇಂತಹ ಪ್ರಮೇಯ ಇರುವುದಿಲ್ಲ. ಜತೆಗೆ ಹೊಸ ರೈಲು ಓಡಾಟಕ್ಕೂ ಅವಕಾಶ ಸಿಗಲಿದೆ ಎಂಬುದು ರೈಲ್ವೇ ಮೂಲಗಳ ಮಾಹಿತಿ.

ಶೀಘ್ರ ಕಾರ್ಯಾರಂಭ
ಮಂಗಳೂರು ಸೆಂಟ್ರಲ್‌ ನಿಂದ ನೇತ್ರಾವತಿ ಸೇತುವೆವರೆಗಿನ ರೈಲು ಹಳಿ ದ್ವಿಗುಣ ಕಾಮಗಾರಿಯ ಟೆಂಡರ್‌ ಅಂತಿಮ ಹಂತದಲ್ಲಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ಎಲ್ಲವೂ ಪೂರ್ಣವಾಗಲು ಸುಮಾರು ಒಂದೂವರೆ ವರ್ಷ ಬೇಕಾಗಬಹುದು.
– ನಳಿನ್‌ ಕುಮಾರ್‌ ಕಟೀಲು, ಸಂಸದರು

Advertisement

Udayavani is now on Telegram. Click here to join our channel and stay updated with the latest news.

Next