Advertisement

ಇನ್ನೂ ಸಿಗದ ನಾಲ್ವರ ಕುರುಹು

01:44 AM Sep 09, 2019 | Team Udayavani |

ಮಡಿಕೇರಿ: ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂ ಕುಸಿತ ಉಂಟಾದ ಸಂದರ್ಭ ನಾಪತ್ತೆಯಾದ 10 ಮಂದಿಯ ಪೈಕಿ ಇಲ್ಲಿಯ ವರೆಗೆ 6 ಮಂದಿಯ ಮೃತ ದೇಹಗಳು ಪತ್ತೆಯಾಗಿವೆ. ಘಟನೆ ಸಂಭವಿಸಿ ಒಂದು ತಿಂಗಳೇ ಕಳೆದಿದ್ದರು ಉಳಿದ ನಾಲ್ವರ ದೇಹಗಳು ಇಲ್ಲಿಯವರೆಗೆ ಪತ್ತೆಯಾಗಿಲ್ಲ. ಶೋಧ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಎರಡು ವಾರಗಳಾಗಿವೆ.

Advertisement

ಆ.9ರ ವರಮಹಾಲಕ್ಷ್ಮೀ ಹಬ್ಬದ ದಿನ ಬೆಳಗ್ಗೆ 10.30ರ ಹೊತ್ತಿಗೆ ನಡೆದ ಈ ಘೋರ ದುರಂತದಲ್ಲಿ ಮಣ್ಣಿನಡಿ ಸಿಲುಕಿದ್ದ ಹರೀಶ್‌ ಅವರ ಪತ್ನಿ, 8 ತಿಂಗಳ ಗರ್ಭಿಣಿ ವೀಣಾ ಮತ್ತು ಪ್ರಭು ಭಟ್ ಅವರ ತಾಯಿ ಹಾಗೂ ಇಬ್ಬರು ಮಕ್ಕಳು ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಆ.22ರ ವರೆಗೆ ನಿರಂತರ ಶೋಧ ಕಾರ್ಯ ನಡೆಸಿದ್ದರೂ ನಿರೀಕ್ಷಿತ ಫ‌ಲಿತಾಂಶ ಕಂಡುಬಂದಿಲ್ಲ. ಇವರು ಭೂ ಕುಸಿತದಲ್ಲಿ ಸಿಲುಕಿ ಮೃತಪಟ್ಟಿರುವ ಎಲ್ಲ ಸಾಧ್ಯತೆಗಳಿವೆ. ಆದರೆ ನಾಪತ್ತೆಯಾದವರು ಮೃತಪಟ್ಟಿದ್ದಾರೆ ಎಂದು ಘೋಷಿಸಲು ಕಾನೂನಾತ್ಮಕವಾಗಿ ಸದ್ಯಕ್ಕೆ ಅಸಾಧ್ಯವಾಗಿದೆ.

ಭಾರೀ ಕೆಸರು ಮಣ್ಣು, ಮಣ್ಣಿನಡಿ ಹುದುಗಿರುವ ಬೃಹತ್‌ ಮರದ ದಿಮ್ಮಿಗಳು, ಕಲ್ಲು ಬಂಡೆಗಳು ಮಾತ್ರವಲ್ಲದೆ ಆಳೆತ್ತರಕ್ಕೆ ತುಂಬಿರುವ ಮಣ್ಣಿನಲ್ಲಿ ಮೊಣಕಾಲಿನವರೆಗೂ ಹೂತು ಹೋಗುವ ವಿಷಮ ಪರಿಸ್ಥಿತಿ ತೋರಾದಲ್ಲಿದೆ. ಇದರ ನಡುವೆಯೂ ಆಂಧ್ರಪ್ರದೇಶದ ವೆಲ್ಲೂರಿನ 10ನೇ ಬೆಟಾಲಿಯನ್‌ನ ಎನ್‌ಡಿಆರ್‌ಎಫ್ ಯೋಧರು ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭಾರೀ ಪರಿಶ್ರಮದಿಂದ 6 ಮಂದಿಯ ಮೃತದೇಹಗಳನ್ನು ಹೊರೆತೆಗೆದಿದ್ದರು.

ಮಣಿಪಾರೆ ಬೆಟ್ಟ ಕುಸಿದು ಅಂದಾಜು 1.5 ಕಿ.ಮೀ. ವ್ಯಾಪ್ತಿಯ 150 ಎಕರೆ ಪ್ರದೇಶ ಭೂ ಗರ್ಭ ಸೇರಿದ್ದು, ಅಲ್ಲಿದ್ದ 7 ಮನೆಗಳು 50ರಿಂದ 60 ಅಡಿ ಆಳದಲ್ಲಿ ಭೂ ಸಮಾಧಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next