ಹೊಸದಿಲ್ಲಿ: ಭಾರತದ ಮೊಟ್ಟಮೊದಲ ಜಲಜನಕ ಇಂಧನ ಆಧಾರಿತ ಕಾರನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಬುಧವಾರ ಲೋಕಾರ್ಪಣೆ ಮಾಡಿದರು. ಟೊಯೊಟಾ ಕಿರ್ಲೋಸ್ಕರ್ ಕಂಪೆನಿ, “ಇಂಟರ್‌ನ್ಯಾಶನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ಐಸಿಎಟಿ) ಸಂಸ್ಥೆಯ ಜತೆಗೆ ಕೈ ಜೋಡಿಸಿ ಈ ಕಾರನ್ನು ತಯಾರಿಸಿದ್ದು, ಇದಕ್ಕೆ “ಟೊಯೊಟಾ ಮಿರಾಯ್ ಎಫ್ಸಿಇವಿ’ ಎಂದು ಹೆಸರಿಡಲಾಗಿದೆ.
ಈ ಕಾರು ಜಲಜನಕ ಆಧಾರಿತ ಬ್ಯಾಟರಿಯಿಂದ ಚಲಿಸಲಿದ್ದು, ಒಮ್ಮೆ ಚಾರ್ಜ್ ಮಾಡಿದರೆ 650 ಕಿ.ಮೀ.ವರೆಗೆ ಕ್ರಮಿಸಬಹುದು ಎಂದು ಟೊಯೊಟಾ ಕಂಪೆನಿ ತಿಳಿಸಿದೆ.
5 ವರ್ಷಗಳಲ್ಲಿ ಬದಲಾಗುತ್ತೆ: ಬುಧವಾರ ರಾಜ್ಯಸಭೆ ಯಲ್ಲಿ ಮಾತನಾಡಿದ ಗಡ್ಕರಿ, ಸಾಂಪ್ರದಾಯಿಕವಲ್ಲದ ಇಂಧನಗಳು ಅಥವಾ ವಿದ್ಯುತ್ ವಾಹನಗಳಿಗೆ ಇರುವ ಬೇಡಿಕೆ ಸತತವಾಗಿ ಹೆಚ್ಚಾಗಲಿದೆ ಎಂದು ಹೇಳಿದರು. ಪೆಟ್ರೋಲ್, ಡೀಸೆಲ್ ವಾಹನಗಳ ಮಾರಾಟ ದಿನೇ ದಿನೆ ಕುಸಿಯುತ್ತಿದೆ. ವಿದ್ಯುತ್ ಚಾಲಿತ ವಾಹನಗಳ ಮಾರಾಟ ಏರುತ್ತಿದೆ. ಇನ್ನೈದು ವರ್ಷಗಳಲ್ಲಿ ಇಡೀ ಮಾರುಕಟ್ಟೆಯ ಸನ್ನಿವೇಶವೇ ಬದಲಾಗಲಿದೆ ಎಂದರು.
ರಸ್ತೆ ಅಪಘಾತ ನಿಗ್ರಹಕ್ಕೆ 7 ಸಾವಿರ ಕೋಟಿ ರೂ.!: ದೇಶದಲ್ಲಿ ವರ್ಷಕ್ಕೆ 1.5 ಲಕ್ಷ ಮಂದಿ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಹೆದ್ದಾರಿಗಳಲ್ಲಿನ ಅಪಘಾತಗಳನ್ನು ಗಣನೀಯವಾಗಿ ಇಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದಿಂದ 7,500 ಕೋಟಿ ರೂ.ಗಳ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು ಈ ಯೋಜನೆಗೆ ವಿಶ್ವಬ್ಯಾಂಕ್ ನೆರವು ನೀಡುತ್ತದೆ ಎಂದರು.