Advertisement

ಮನೆಯಾಟ ಲೂಡೋಗೆ ಪಂದ್ಯಾಟದ ಸ್ವರೂಪ!

12:12 AM Jul 04, 2019 | Sriram |

ಮಹಾನಗರ: ಮನೆಯಲ್ಲಿ ನಾಲ್ಕೈದು ಮಂದಿ ಕುಳಿತು ಮನೋ ರಂಜನೆಗಾಗಿ ಆಡುವ ಲೂಡೋ ಆಟವೂ ಈಗ ಪಂದ್ಯದ ಸ್ವರೂಪ ಪಡೆದುಕೊಳ್ಳುತ್ತಿದೆ. ಮಂಗಳೂರಿನ ಪಾಥ್‌ ವೇ ಸಂಸ್ಥೆ ಲೂಡೋ ಪಂದ್ಯ ನಡೆಸಲು ಸಿದ್ಧತೆ ನಡೆಸುತ್ತಿದೆ.

Advertisement

ಲೂಡೋ ಬೋರ್ಡ್‌ನಲ್ಲಿ ಆಡು ವುದೆಂದರೆ ಮನೆಮಂದಿಗೆಲ್ಲ ಎಲ್ಲಿಲ್ಲದ ಖುಷಿ. ಮಕ್ಕಳಿಗಂತೂ ಲೂಡೋ ಆಟ ಫೇವರೆಟ್. ಆದರೆ, ಪ್ರಸ್ತುತ ನಗರೀಕರಣಕ್ಕೆ ಒಗ್ಗಿಕೊಂಡಂತೆ ಹಳೆಯ ಕಾಲದ ಆಟಗಳೆಲ್ಲ ಮರೆಗೆ ಸರಿದಿವೆ. ಅದರಂತೆ, ಮನೆಮಂದಿಯೆಲ್ಲ ಕುಳಿತು ಆಡುವ ಲೂಡೋ ಆಟವೂ ತೆರೆಗೆ ಸರಿಯುತ್ತಿದೆ. ಆದರೆ ಅದೇ ಲೂಡೋ ಆಟವನ್ನು ಮತ್ತೆ ಮುಖ್ಯವಾಹಿನಿಗೆ ತರಬೇಕು ಎಂಬ ನಿಟ್ಟಿನಲ್ಲಿ ಪಾಥ್‌ ವೇ ಸಂಸ್ಥೆಯು ಲೂಡೋ ಟೂರ್ನಮೆಂಟ್ಲ ನಗರದಲ್ಲಿ ಆಯೋಜಿಸುತ್ತಿದೆ.

ಪಾಥ್‌ ವೇ ಎಂಟರ್‌ಪ್ರೈಸಸ್‌ ವತಿಯಿಂದ ಲೆಟ್ಸ್‌ ಪಾರ್ಟಿ, ಜೆಸಿಐ, ಮೈ ರೋಡ್‌ ರನ್ನರ್‌ ಸಹಯೋಗದಲ್ಲಿ ರೋವರ್ ಅವರ ಸಹಕಾರದಲ್ಲಿ ಜು. 6 ಮತ್ತು 7ರಂದು ನಗರದ ಮಲ್ಲಿಕಟ್ಟೆ ಸುಮ ಸದನದಲ್ಲಿ ಲೂಡೋ ಟೂರ್ನಮೆಂಟ್ ಆಯೋಜಿಸಲಾಗಿದೆ. 6ರಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿರುವ ಪಂದ್ಯಾಟ 7ರಂದು ಸಮಾರೋಪಗೊಳ್ಳಲಿದೆ.

ಮುಕ್ತ ಸ್ಪರ್ಧೆ
ಪಂದ್ಯದಲ್ಲಿ ಲೂಡೋ ಆಡಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಬೋರ್ಡ್‌ನಲ್ಲಿ ನಾಲ್ಕು ಜನರಿಗೆ ಆಡಲು ಅವಕಾಶವಿದೆ. ಸ್ಪರ್ಧಿಗಳ ಸಂಖ್ಯೆಗನುಗುಣವಾಗಿ 15ಕ್ಕೂ ಹೆಚ್ಚು ಲೂಡೋ ಬೋರ್ಡ್‌ಗಳಲ್ಲಿ ಪಂದ್ಯಾಟ ನಡೆಯಲಿದೆ. ಎಲ್ಲ ಬೋರ್ಡ್‌ನ ವಿಜೇತರಿಗೆ ವಿವಿಧ ಹಂತಗಳಲ್ಲಿ ಸ್ಪರ್ಧೆಗಳಿದ್ದು, ಕೊನೆಯ ಹಂತದ ಪ್ರಥಮ, ದ್ವಿತೀಯ, ತೃತೀಯ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ.

ಬಹುಮಾನವು ನಗದು ಮತ್ತು ಟ್ರೋಫಿಯನ್ನು ಒಳಗೊಂಡಿದೆ ಎಂದು ಪಂದ್ಯಾಟ ಆಯೋಜಕ, ಪಾಥ್‌ ವೇ ಎಂಟರ್‌ಪ್ರೈಸಸ್‌ನ ಮಾಲಕ ದೀಪಕ್‌ ಗಂಗೂಲಿ ತಿಳಿಸಿದ್ದಾರೆ.

Advertisement

ಜಿಲ್ಲೆಯಲ್ಲೇ ಮೊದಲು!
ವಿಶೇಷವೆಂದರೆ, ಮನೆಯಲ್ಲಿ ಆಡುವ ಲೂಡೋ ಆಟವು ಸಾರ್ವಜನಿಕ ಪಂದ್ಯಾಟವಾಗಿ ಆಯೋಜನೆಗೊಳ್ಳುತ್ತಿರುವುದು ದ.ಕ. ಜಿಲ್ಲೆಯಲ್ಲೇ ಇದು ಮೊದಲು. ಅಲ್ಲದೆ, ಇತರೆಡೆಗಳಲ್ಲಿಯೂ ಈ ರೀತಿ ಪಂದ್ಯಾಟ ನಡೆದಿರುವ ಸಾಧ್ಯತೆ ಇಲ್ಲ ಎನ್ನುತ್ತಾರೆ ದೀಪಕ್‌ ಗಂಗೂಲಿ. ಸಾಂಪ್ರದಾಯಿಕ ಶೈಲಿಯ, ಹಳೆಯ ಕಾಲದ ಆಟಗಳಿಗೆ ಆಧುನಿಕ ಕ್ರೀಡಾ ಪಂದ್ಯಾಟಗಳ ಟಚ್ ನೀಡಿ ಆ ಆಟಗಳು ಜನಮನ್ನಣೆ ಪಡೆಯುವಂತೆ ಮಾಡುವಲ್ಲಿ ಪಾಥ್‌ ವೇ ಸಂಸ್ಥೆಯು ಸದಾ ಮುಂದಿದೆ. ಈ ಹಿಂದೆ ಮುಕ್ತ ಲಗೋರಿ ಪಂದ್ಯಾಟ, ಮಹಿಳೆಯರಿಗಾಗಿ ಮುಕ್ತ ಕ್ರಿಕೆಟ್ ಪಂದ್ಯಾಟ ಆಯೋಜಿಸಿ ಸಂಸ್ಥೆ ಗಮನ ಸೆಳೆದಿತ್ತು. ಅಲ್ಲದೆ, ವಿವಾಹಿತ ಮಹಿಳೆಯರಿಗಾಗಿ ಮಿಸೆಸ್‌ ಇಂಡಿಯಾ ಸ್ಪರ್ಧೆಯನ್ನೂ ಇದೇ ಸಂಸ್ಥೆ ಆಯೋಜಿಸಿದೆ.

ಮನೋ ರಂಜನೆಗಾಗಿ
ಲೂಡೋ ಮನೋರಂಜನೆಯ ಆಟ. ಇದನ್ನು ಮುಖ್ಯವಾಹಿನಿಗೆ ತರುವುದರೊಂದಿಗೆ ಒತ್ತಡದ ಜೀವನದ ನಡುವೆ ಜನ ಒಂದಷ್ಟು ಮನೋರಂಜನೆಯನ್ನು ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ಲೂಡೋ ಪಂದ್ಯಾಟ ಆಯೋಜಿಸಲಾಗಿದೆ. ಇದೇ ಮಾದರಿಯಲ್ಲಿ ಈ ಹಿಂದೆ ಲಗೋರಿ ಪಂದ್ಯ ಹಮ್ಮಿಕೊಂಡಾಗಲೂ ಜನತೆ ಉತ್ತಮ ಸ್ಪಂದನೆ ನೀಡಿದ್ದರು. – ದೀಪಕ್‌ ಗಂಗೂಲಿ, ಮಾಲಕರು, ಪಾಥ್‌ ವೇ ಸಂಸ್ಥೆ

-ಧನ್ಯಾ ಬಾಳೆಕಜೆ
Advertisement

Udayavani is now on Telegram. Click here to join our channel and stay updated with the latest news.

Next