ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿ ಹಿನ್ನೀರಿನ ಅರಣ್ಯ ಪ್ರದೇಶದಲ್ಲಿ ಒಂದೇ ಸಮಯದಲ್ಲಿ ಬರೋಬ್ಬರಿ 13 ಹುಲಿಗಳು ದರ್ಶನ ಭಾಗ್ಯ ನೀಡಿವೆ.
ಕಾಡುಗಳಲ್ಲಿ ಸ್ವತ್ಛಂದವಾಗಿ ವಿಹರಿಸುವ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುವ ಮಹದಾಸೆಯಿಂದ ಅರಣ್ಯಗಳಿಗೆ ಭೇಟಿ ನೀಡುವ ಪ್ರವಾಸಿಗರು, ಅದರಲ್ಲೂ ವನ್ಯಜೀವಿ ಪ್ರಿಯರಿಗೆ ಬಹಳಷ್ಟು ಸಂದರ್ಭಗಳಲ್ಲಿ ಆನೆ, ಜಿಂಕೆಗಳ ಹಿಂಡು, ಕಾಡೆಮ್ಮೆಗಳನ್ನು ಬಿಟ್ಟು ಬೇರೆ ಪ್ರಾಣಿಗಳು ಅದರಲ್ಲೂ ಕಾಡಿನ ರಾಜ ಹುಲಿಯ ದರ್ಶನ ವಾಗುವುದು ಅಪರೂಪ.
ಆದರೆ, ಭಾನುವಾರ ಸಂಜೆ ನಾಗರಹೊಳೆಯ ದಮ್ಮನಕಟ್ಟೆಯಿಂದ ಸಫಾರಿ ಹೊರಟವರಿಗೆ ಬರೋಬ್ಬರಿ 13 ಹುಲಿಗಳ ದರ್ಶನ ಭಾಗ್ಯ ದೊರೆತಿದೆ. ದಮ್ಮನಕಟ್ಟೆಯ ಟೈಗರ್ ಟ್ಯಾಂಕ್, ಭೋಗೇಶ್ವರ ವಲಯದಲ್ಲಿ ಅಂದಾಜು 2-3 ವರ್ಷ ಪ್ರಾಯದ ಹುಲಿ ಮರಿಗಳು ದರ್ಶನ ನೀಡಿವೆ.
ಟೈಗರ್ ಟ್ಯಾಂಕ್‌ನಲ್ಲಿ ನೀರು ಕುಡಿಯಲು ಬಂದ ಆನೆಯೊಂದು ನೀರಿನಲ್ಲಿ ಮಲಗಿದ್ದ ಹುಲಿಯನ್ನು ನೋಡಿ ವಾಪಸ್ಸಾದರೆ, ನೀರಿನಿಂದ ಎದ್ದ ಹುಲಿ, ಆನೆಯನ್ನೇ ಹಿಂಬಾಲಿಸಿಕೊಂಡು ಹೋಗುವ ಮೂಲಕ ಸಫಾರಿಗೆ ತೆರಳಿದ್ದ ವನ್ಯಜೀವಿ ಪ್ರಿಯರ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.
ಸೋಮವಾರ ಸಂಜೆ ವೇಳೆಗೆ ಈ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ. ಕಳೆದ ಕೆಲ ದಿನಗಳಿಂದ ಆಗಾಗ್ಗೆ ಮಳೆ ಸುರಿದಿರುವುದರಿಂದ ಅರಣ್ಯದ ಕೋರ್ ವಲಯದ ಕೆರೆ-ಕಟ್ಟೆಗಳು ತುಂಬಿವೆ.
ಹೀಗಾಗಿ ಮುಂದಿನ ದಿನಗಳಲ್ಲಿ ದಾಹ ತಣಿಸಿಕೊಳ್ಳಲು ಹುಲಿಯಂತಹ ಸೂಕ್ಷ್ಮ ಜೀವಿ ಕೋರ್ ವಲಯ ಬಿಟ್ಟು ಬರುವುದು ತೀರಾ ಅಪರೂಪ, ಆದ್ದರಿಂದ ಮುಂದಿನ ದಿನಗಳಲ್ಲಿ ಸಫಾರಿಗೆ ತೆರಳುವವರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹುಲಿಗಳ ದರ್ಶನ ಸಿಗುವುದು ಕಷ್ಟ ಎಂದು ವನ್ಯಜೀವಿ ಪ್ರಿಯರು ಹೇಳುತ್ತಾರೆ.