Advertisement

ಸಂಕ್ರಾಂತಿಗೆ ಪ್ರವಾಸಿ ತಾಣಗಳು ಫುಲ್‌ ರಶ್‌

10:22 AM Jan 16, 2019 | |

ಬೆಳಗಾವಿ: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಗಾಗಿ ನಗರ ಸೇರಿದಂತೆ ಜಿಲ್ಲಾದ್ಯಂತ ಜನರು ಸಂಭ್ರಮಿಸಿದರು. ವಿವಿಧ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಬುತ್ತಿ ಕಟ್ಟಿಕೊಂಡು ಹೋಗಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮ-ಸಡಗರದಿಂದ ಆಚರಿಸಿದರು.

Advertisement

ಗಡಿ ಭಾಗ ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ವಿವಿಧ ಪ್ರವಾಸಿ ತಾಣಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ಉದ್ಯಾನವನಗಳು ಜನರಿಂದ ತುಂಬಿ ತುಳಕುತ್ತಿದ್ದವು. ಎಲ್ಲೆಡೆಯೂ ಸಂಕ್ರಾಂತಿ ಸಂಭ್ರಮವೇ ಕಂಡು ಬಂತು. ಬೆಳಗ್ಗೆಯೇ ಜನರು ಬಗೆ ಬಗೆಯ ಅಡುಗೆ ತಯಾರಿಸಿ ಬುತ್ತಿ ಕಟ್ಟಿಕೊಂಡು ಊರಾಚೆಯ ವಿವಿಧ ಸ್ಥಳಗಳಿಗೆ ಹೋಗಿ ದೇವರ ದರ್ಶನ ಪಡೆದು, ನದಿ ದಂಡೆ ಮೇಲೆ ಪೂಜೆ ಸಲ್ಲಿಸಿದರು.

ನದಿ ದಡಗಳ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿದ್ದ ಜನರು ನದಿಯಲ್ಲಿಯ ಐದು ಕಲ್ಲುಗಳನ್ನು ತೆಗೆದುಕೊಂಡು ಅದಕ್ಕೆ ಪೂಜೆ ಸಲ್ಲಿಸಿ, ನೈವೇದ್ಯ ತೋರಿಸಿ, ನದಿಗೆ ನೈವೇದ್ಯ ತೋರಿಸಿದರು. ನಂತರ ಕುಟುಂಬ ಸಮೇತರಾಗಿ ಗಿಡ-ಮರಗಳ ಕೆಳಗೆ, ಹೊಲ-ಗದ್ದೆಗಳಲ್ಲಿ ಊಟ ಸವಿದರು. ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಬದನೆಕಾಯಿ, ಗಜ್ಜರಿ ಪಲ್ಯ, ಅಗಸೆ ಹಿಂಡಿ, ಶೇಂಗಾ ಚಟ್ನಿ, ಹಸಿ ಕಡಲೆ, ಅವರೆ, ಮೊಸರು, ಮಜ್ಜಿಗೆ ಸೇರಿದಂತೆ ವಿವಿಧ ಬಗೆಯ ಭಕ್ಷ್ಯ ಭೋಜನ ಸವಿದರು.

ನದಿ ಹಳ್ಳಗಳಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾದರು. ಸಂಕ್ರಾಂತಿಗೆ ಬೆಳಗಾವಿ ಜಿಲ್ಲೆಯಲ್ಲಿ ಇರುವ ಎಲ್ಲ ಜಲಧಾರೆಗಳು, ನದಿಗಳು, ಜಲಾಶಯಗಳ ಸುತ್ತಲೂ ಜನವೋ ಜನ. ಖಾನಾಪುರ ಮಲಪ್ರಭಾ ನದಿ ದಡದಲ್ಲಿರುವ ಅಸೋಗಾ, ಮಲಪ್ರಭಾ ತೀರ್ಥ ಕ್ಷೇತ್ರದ ಹಬ್ಟಾನಟ್ಟಿ, ಶ್ರೀ ಸೊಗಲ ಸೋಮೇಶ್ವರ, ನವಿಲು ತೀರ್ಥ, ತಾಲೂಕಿನ ಕರಡಿಗುದ್ದಿಯ ಜಂಬು ತೀರ್ಥ, ಸಿದ್ದನಕೊಳ್ಳ, ಎಂ.ಕೆ. ಹುಬ್ಬಳ್ಳಿಯ ಶ್ರೀ ಗಂಗಾಂಬಿಕಾ ದೇವಸ್ಥಾನ, ಉತ್ತರ ಕನ್ನಡ ಜಿಲ್ಲೆಯ ಉಳವಿ ಚನ್ನಬಸವೇಶ್ವರ, ಗೋಕಾಕ ಫಾಲ್ಸ್‌, ಗೊಡಚಿನಮಲ್ಕಿ, ಕಣಕುಂಬಿ, ಜಾಂಬೋಟಿ, ರಂಗಧೋಳಿ, ಹಿಡಕಲ್‌ ಡ್ಯಾಂ ಜಲಾಶಯ, ತಿಗಡಿ ಹರಿನಾಲಾ ಡ್ಯಾಮ್‌, ಭೂತರಾಮನಹಟ್ಟಿಯ ಮುಕ್ತಿ ಮಠದ ರಾಣಿ ಕಿತ್ತೂರು ಚನ್ನಮ್ಮ ಪ್ರಾಣಿ ಸಂಗ್ರಹಾಲಯ, ಬಡೇಕೊಳ್ಳಮಠ, ಬೆಳಗಾವಿ ನಗರದ ಮಿಲಿಟರಿ ಮಹಾದೇವ ದೇವಸ್ಥಾನ, ನಗರದ ವಿವಿಧ ಉದ್ಯಾನ‌ಗಳು ಮಂಗಳವಾರ ಜನರಿಂದ ತುಂಬಿ ತುಳಕುತ್ತಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next