Advertisement

1700 ಅಡಿ ಎತ್ತರ,1876 ಮೆಟ್ಟಿಲು: ಇದು ಚಾರಣಿಗರಿಗೆ ಹೇಳಿಮಾಡಿಸಿದ ಜಮಾಲಾಬಾದ್ ಕೋಟೆ ಕಣ್ರೀ..

04:27 PM Aug 26, 2022 | ಸುಧೀರ್ |

ಜಮಾಲಾಬಾದ್, ನರಸಿಂಹಗಡ, ಗಡಾಯಿಕಲ್ಲು ಹೀಗೆ ಹಲವು ಹೆಸರುಗಳಿಂದ ಕರೆಯಲ್ಪಡುವ ಅಕರ್ಷಕ ಕೋಟೆ ಇದು… ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಿಂದ ಸುಮಾರು 6 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಈ ಕೋಟೆಯು  ಬೃಹದಾಕಾರದ ಏಕಶಿಲಾ ಕಲ್ಲಿನಿಂದ ನಿರ್ಮಾಣಗೊಂಡಿದೆ. ಅಂದಹಾಗೆ ಈ ಕೋಟೆ ಚಾರಣಿಗರಿಗೆ ಹೇಳಿ ಮಾಡಿಸಿದಂತಿದೆ.

Advertisement

ಬೆಳ್ತಂಗಡಿಯಿಂದ ಕಿಲ್ಲೂರು ರಸ್ತೆಯಲ್ಲಿ ಎಂಟು ಕಿ.ಮೀ ಸಾಗಿದರೆ ಮಂಜೊಟ್ಟಿ ಎಂಬ ಊರು ಸಿಗುತ್ತದೆ, ಅಲ್ಲಿಂದ ಒಂದು ಕಿ.ಮೀ ದೂರದಲ್ಲೇ ಇರುವುದು ಈ ಗಡಾಯಿ ಬೆಟ್ಟ. ಇದು ಕುದುರೆಮುಖ ಪರ್ವತ ಶ್ರೇಣಿಯ ಒಂದು ಭಾಗವೂ ಹೌದು. ಪ್ರಾದೇಶಿಕವಾಗಿ ಇಲ್ಲಿನ ಜನರು ಈ ಕೋಟೆಯನ್ನು ‘ಗಡಾಯಿಕಲ್ಲು’, ‘ಜಮಲಾಬಾದ್‌’, ‘ಜಮಲಾಗದ್ದ’ ಮತ್ತು ‘ನರಸಿಂಹಗಢ’ ಅಂತೆಲ್ಲಾ ಕರೆಯುತ್ತಾರೆ. ಈ ಬೆಟ್ಟದ ಮೇಲ್ಭಾಗದಲ್ಲಿ ಸುಸಜ್ಜಿತವಾದ ಕೋಟೆ ಇದೆ.

ಕ್ರಿ.ಶ 1794ರಲ್ಲಿ ತನ್ನ ತಾಯಿ ಜಮಲಾಬಿಯ ನೆನಪಿಗಾಗಿ ಟಿಪ್ಪು ಸುಲ್ತಾನ್‌ ಈ ಕೋಟೆಯನ್ನು ಕಟ್ಟಿಸಿದನಂತೆ. ಫ್ರೆಂಚ್‌ ಇಂಜಿನಿಯರ್‌ಗಳು ಕೋಟೆ ನಿರ್ಮಿಸಿರುವುದರಿಂದ ಇಲ್ಲಿ ಮುಸ್ಲಿಂ ಹಾಗೂ ಫ್ರೆಂಚ್‌ ಮಾದರಿಯ ವಾಸ್ತು ಶಿಲ್ಪಗಳ ಕುರುಹುಗಳು ನೋಡಲು ಸಿಗುತ್ತವೆ.

ಚಾರಣಕ್ಕೆ ಬರುವವರು ಮುಂಜಾನೆ ಬೇಗ ಈ ಪ್ರದೇಶಕ್ಕೆ ಬಂದು ಚಾರಣ ಆರಂಭಿಸಿದರೆ ಸೂರ್ಯನ ತಾಪ ನೆತ್ತಿಗೇರುವ ಮುನ್ನ ಕೋಟೆಯನ್ನು ಹತ್ತಬಹುದು ಇಲ್ಲದಿದ್ದಲ್ಲಿ ಪ್ರಯಾಸಪಡಬೇಕಾಗುತ್ತದೆ. ಇಡೀ ಬಂಡೆಯನ್ನೇ ಕೆತ್ತಿ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ ಚಾರಣ ಮಾಡುವವರು ಹೆಚ್ಚಿನ ಜಾಗ್ರತೆ ವಹಿಸುವುದು ಉತ್ತಮ, ಮಧ್ಯ ಮಧ್ಯದಲ್ಲಿ ವಿಶ್ರಾಂತಿಗೆ ವ್ಯವಸ್ಥೆಯೂ ಇದೆ.

ಇನ್ನೊಂದು ವಿಶೇಷತೆ ಏನೆಂದರೆ ಈ ಬೆಟ್ಟದ ಮೇಲೆ ಕಲ್ಲಿನಿಂದಲೇ ನಿರ್ಮಿಸಿರುವ ಕೆರೆಯೊಂದಿದೆ ಈ ಕೆರೆಯಲ್ಲಿ ವರ್ಷವಿಡೀ ನೀರಿರುವುದು ಇಲ್ಲಿನ ಒಂದು ವಿಶೇಷ. ಸುಡು ಬೇಸಿಗೆಯಲ್ಲೂ ಈ ಕೆರೆಯು ಬತ್ತುವುದೇ ಇಲ್ಲ. ಈ ಬೆಟ್ಟದ ಮೇಲೆಯೇ ಫಿರಂಗಿ ಮನೆ ಇದೆ ಇಲ್ಲಿಯೇ ಟಿಪ್ಪುಸುಲ್ತಾನ್‌ನ ಸೈನಿಕರು, ಫಿರಂಗಿಗಳಿಗೆ ಅವಶ್ಯವಿರುವ ಮದ್ದು ಗುಂಡುಗಳನ್ನು ಸಂಗ್ರಹಿಸಿಡುತ್ತಿದ್ದರೆಂದು ಹೇಳಲಾಗುತ್ತದೆ. ಟಿಪ್ಪು ಸುಲ್ತಾನ್ ಈ ಕೋಟೆಯನ್ನು ಕುದುರೆಯ ಮೂಲಕ ಹತ್ತುತ್ತಿದ್ದನಂತೆ. ಈ ಬಂಡೆಯನ್ನು ತನ್ನ ವಿಶ್ರಾಂತಿಧಾಮವನ್ನಾಗಿಸಿಕೊಂಡಿದ್ದ ಎನ್ನಲಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ಫಿರಂಗಿಗಳನ್ನು ಕಾಣಬಹುದು.

Advertisement

ಕೋಟೆಯ ಮೇಲೆ ನಿಂತು ನೋಡಿದರೆ ಬೆಳ್ತಂಗಡಿ ಸುತ್ತಮುತ್ತಲಿನ ಪ್ರದೇಶಗಳ ವಿಹಂಗಮ ನೋಟ ಕಾಣುತ್ತದೆ. ಇಲ್ಲಿಗೆ ಚಾರಣಕ್ಕೆ ಬರುವವರು ಬೇಸಿಗೆ ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ, ಮಳೆಗಾಲದಲ್ಲಿ ಇಲ್ಲಿನ ಮೆಟ್ಟಿಲುಗಳು ಜಾರುವುದರಿಂದ ಅಪಾಯ ಹೆಚ್ಚು ಹಾಗಾಗಿ ಚಾರಣಕ್ಕೆ ಬೇಸಿಗೆ ಸಮಯವನ್ನೇ ಆರಿಸಿಕೊಳ್ಳಿ.

ಗಡಾಯಿಕಲ್ಲು, ಚಾರಣ ಪ್ರಿಯರ ಸ್ವರ್ಗ. ಇಲ್ಲಿಗೆ ಹೋಗಬೇಕಾದರೆ ಅರಣ್ಯ ಇಲಾಖೆ ಅನುಮತಿಯನ್ನು ಪಡೆಯಬೇಕು ಅಲ್ಲದೆ ಪ್ರವೇಶ ಶುಲ್ಕವೂ ಇದೆ, ಬೆಳಗ್ಗೆ 6ರಿಂದ ಸಂಜೆ 6ರ ತನಕ ಚಾರಣಕ್ಕೆ  ಅವಕಾಶವಿದೆ. ಸಂಜೆ ವೇಳೆ ಚಾರಣಕ್ಕೆ ಅವಕಾಶವಿಲ್ಲ, ಯಾವುದೇ ಕಾರಣಕ್ಕೂ ಇಲ್ಲಿ ರಾತ್ರಿ ಹೊತ್ತು ತಂಗಲು ಅನುಮತಿಯಿಲ್ಲ..

*ಸುಧೀರ್ 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next