ಮೈಸೂರು: ಚಳಿಗಾಲ ಆರಂಭವಾಗುತ್ತಿದ್ದಂತೆ ವಲಸೆ ಆರಂಭಿಸುವ ಯೂರೋಪ್ ಸೇರಿದಂತೆ ಪೂರ್ವ ಏಷಿಯಾ ರಾಷ್ಟ್ರಗಳ ವಿದೇಶಿ ಪಕ್ಷಿಗಳು ಹಳೇ ಮೈಸೂರು ಭಾಗಕ್ಕೆ ಲಗ್ಗೆ ಇಟ್ಟಿದ್ದು, ಪಕ್ಷಿ ಪ್ರೇಮಿಗಳು ಮತ್ತು ವೀಕ್ಷಕರನ್ನು ಆಕರ್ಷಿಸುತ್ತಿವೆ. ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಈಗಾಗಲೇ ಪೆಲಿಕಾನ್, ಪಟ್ಟೆ ತಲೆಯ ಹೆಬ್ಟಾತು, ಗಾರ್ಗಿನಿ, ವಿಸ್ಕಟರ್ನ್, ನಾರ್ದಿನ್ ಶೋಲರ್ ಸೇರಿದಂತೆ ವಲಸೆ ಬಂದಿದ್ದು, ಸ್ಥಳೀಯ ಕೆರೆಗಳಲ್ಲಿ ಸ್ವತ್ಛಂದವಾಗಿ ವಿಹರಿಸುತ್ತಿವೆ.
ಚಳಿಗಾಲ ಆರಂಭವಾದರೆ ಸಾಕು ಸಾವಿರಾರು ಕಿಲೋಮೀಟರ್ ದೂರದಿಂದ ವಿದೇಶಿ ಹಕ್ಕಿಗಳು ಮೈಸೂರಿನ ಹದಿನಾರು, ಕಳಲೆ, ಲಿಂಗಾಂಬುಧಿ ಕೆರೆಯತ್ತ ಆಗಮಿಸುತ್ತವೆ. ವಿದೇಶಿ ಪಕ್ಷಿಗಳ ಆಗಮನದಿಂದ ಮೈಸೂರು ಜಿಲ್ಲೆ ಪ್ರವಾಸಿಗರೂ ಸೇರಿದಂತೆ ಪಕ್ಷಿ ಪ್ರೇಮಿಗಳು, ವೀಕ್ಷಕರನ್ನು ಆಕರ್ಷಿಸುತ್ತಿದೆ. ಮೈಸೂರು ಜಿಲ್ಲೆಯ ಸುತ್ತಲಿನ ಪ್ರಮುಖ ಕೆರೆಗಳಿಗೆ ದೇಶ- ವಿದೇಶಿಗಳ ಹಕ್ಕಿಗಳು ಪ್ರತಿವರ್ಷ ಚಳಿಗಾಲದ ಸಮಯದಲ್ಲಿ ಲಗ್ಗೆ ಇಡುತ್ತವೆ.
ಇದನ್ನೂ ಓದಿ;- ಬಹಳ ಜನರಿಗೆ ಗೊತ್ತಿಲ್ಲ, ಕಲಾವಿದರ ಸಂಘಕ್ಕೆ ಮೂಲ ಪುರುಷ ಶಿವರಾಂ: ಅನಂತ್‍ನಾಗ್
ಮಂಗೊಲಿಯಾ, ಯೂರೋಪ್, ಆಸ್ಟ್ರೇಲಿಯಾ, ಜಪಾನ್ ಹೀಗೆ ಅನೇಕ ದೇಶದ ಪಕ್ಷಿಗಳು ಆ ಪ್ರದೇಶದಲ್ಲಿ ಹೆಚ್ಚು ಚಳಿ ಇರುವ ಹಿನ್ನೆಲೆ ಹಳೇ ಮೈಸೂರು ಭಾಗದತ್ತ ಆಗಮಿಸಿ ಮಾರ್ಚ್ ವರೆಗೆ ತಂಗಿ ಮತ್ತೆ ತಮ್ಮ ಮೂಲ ನೆಲೆಯತ್ತ ಸಾಗುವುದು ವಿಶೇಷ.
ಅಂದಚೆಂದದ ಹಕ್ಕಿಗಳು: ಮಂಗೋಲಿಯದ ಬಾರ್ ಹಡೆಡ್ ಗೂಸ್ (ಪಟ್ಟೆ ತಲೆಯ ಹೆಬ್ಟಾತು), ಯೂರೋಪ್‌ನ ಗಾರ್ಗಿನಿ (ಬಿಳಿ ಹುಬ್ಬಿನ ಬಾತು), ವಿಸ್ಕರ್ಡ್ ಟರ್ನ್ (ಮೀಸೆ ರಿವಾ), ನಾರ್ತಿನ್ ಶೋಲರ್ (ಚಲುಕ ಬಾತು), ಪಿಂಟೆಲ್ (ಸೂಜಿ ಬಾಲ ಬಾತು) ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ವಲಸೆ ಬರುತ್ತಿವೆ. ಈ ಬಾನಾಡಿಗಳ ಹಾರಾಟ, ಕೂಗಾಟ, ಅವುಗಳ ಅಂದ ಚೆಂದ ನೋಡುಗರನ್ನು ಮೂಕ ವಿಸ್ಮಿತರನ್ನಾಗಿಸಿದೆ.
3 ತಿಂಗಳ ವಾಸ: ನವೆಂಬರ್ ವೇಳೆಗೆ ಆಗಮಿಸುವ ಈ ಪಕ್ಷಿಗಳು ಸುಮಾರು ಮೂರು ತಿಂಗಳ ಕಾಲ ವಾಸವಿದ್ದು, ಆಹಾರಕ್ಕಾಗಿ ಕೆರೆಯ ಸುತ್ತಲಿನ ಗದ್ದೆಗಳನ್ನು ಆಶ್ರಯಿಸುತ್ತವೆ. ವಿಶೇಷವಾಗಿ ಈ ವಿದೇಶಿ ಪಕ್ಷಿಗಳು ರಾತ್ರಿಯಾಗುತ್ತಿದ್ದಂತೆ ಆಹಾರಕ್ಕಾಗಿ ಪಕ್ಕದ ಜಮೀನುಗಳಿಗೆ ರಾತ್ರಿಯಿಡಿ ತನ್ನ ಬೇಟೆ ಮುಗಿಸಿ ಮುಂಜಾನೆ ವೇಳೆಗೆ ಚಿಲಿ ಪಿಲಿಗುಟ್ಟುತ್ತಾ ಕೆರೆಗಳಿಗೆ ಮರಳುತ್ತವೆ. ರಂಗನತಿಟ್ಟಿಗೆ ಈಗಾಗಲೇ 400ಕ್ಕೂ ಹೆಚ್ಚು ಪೆಲಿಕಾನ್‌ಗಳು ಹಾಗೂ ಮದ್ದೂರಿನ ಕೊಕ್ಕರೆ ಬೆಳ್ಳೂರಿಗೆ 65 ಜೊತೆ(130) ಪಕ್ಷಿಗಳು ಧಾವಿಸಿವೆ.
ಇನ್ನೂ ಮೈಸೂರಿನ ಲಿಂಗಾಂಬುಧಿ ಹಾಗೂ ಕುಕ್ಕರಹಳ್ಳಿ ಕೆರೆಗಳಿಗೆ ಒಂದು, ಎರಡು ಪಕ್ಷಿಗಳು ಬಂದು ಹೋಗುತ್ತಿವೆ. ಈ ನಿಟ್ಟಿನಲ್ಲಿ ಗೂಡುಗಳು ಎಲ್ಲೇಲ್ಲಿವೆ? ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಒಟ್ಟಾರೆ ಚಳಿಗಾಲದಲ್ಲಿ 10 ರಿಂದ 12 ಸಾವಿರ ಪೆಲಿಕಾನ್ ಪಕ್ಷಿಗಳು ವಲಸೆ ಬರುವ ನಿರೀಕ್ಷೆಯಿದೆ.
ಕಳಲೆ ಕೆರೆಯಲ್ಲಿ ಬಾರ್ ಹೆಡೆಡ್ ಗೂಸ್ ಕಲರವ: ನಂಜನಗೂಡು ತಾಲೂಕಿನ ಕಳಲೆ ಕೆರೆಗೆ ದೂರದ ಮಂಗೋಲಿಯಾದಿಂದ 12 ಸಾವಿರ ಕಿ.ಮೀ. ದೂರ ಕ್ರಮಿಸಿ 20ಕ್ಕೂ ಹೆಚ್ಚು ಬಾರ್ ಹೆಡ್ಡೆಡ್ ಗೂಸ್ (ಪಟ್ಟೆ ತಲೆಯ ಹೆಬ್ಟಾತು) ಪಕ್ಷಿಗಳು ಆಗಮಿಸಿದ್ದು, ತನ್ನ ವಿಶಿಷ್ಟ ಚಿಲಿಪಿಲಿ ಸದ್ದಿನಿಂದ ನೋಡುಗರನ್ನು ಗಮನ ಸೆಳೆಯುತ್ತಿವೆ.
ಪ್ರತಿ ವರ್ಷ ನವೆಂಬರ್ ವೇಳೆಗೆ ಸಾವಿರಾರು ಸಂಖ್ಯೆಯಲ್ಲಿ ತಂಡೋಪಾದಿಯಲ್ಲಿ ಬರುತ್ತಿದ್ದ ಈ ಹಕ್ಕಿಗಳು ಡಿಸೆಂಬರ್‌ನಲ್ಲೂ ಬೆರಳೆಣಿಕೆಯಷ್ಟಿವೆ. ಜಿಲ್ಲೆಯಲ್ಲಿ ಇನ್ನೂ ಭತ್ತ ಕಟಾವು ಮಾಡದ ಹಿನ್ನೆಲೆ ಪಕ್ಷಿಗಳು ಹದಿನಾರು, ಕಳಲೆ ಕೆರೆಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ ಎಂದು ಪಕ್ಷಿ ತಜ್ಞರು ಹೇಳುತ್ತಾರೆ. ಸದ್ಯಕ್ಕೆ ಮೈಸೂರಿನ ರಾಮಕೃಷ್ಣ ನಗರದ ಸುತ್ತಲಿನಲ್ಲಿ ಈ ಪಕ್ಷಿಗಳು ಹಾರಾಟ ನಡೆಸುತ್ತಿರುವ ಬಗ್ಗೆ ವರದಿ ದಾಖಲಾಗಿದ್ದು, ಲಿಂಗಾಂಬುಧಿ ಕೆರೆಯಲ್ಲಿ ಆಶ್ರಯ ಪಡೆದಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನೂರಾರು ಪ್ರಭೇದದ ಸಹಸ್ರಾರು ಹಕ್ಕಿಗಳು
2015ರಲ್ಲಿ 253 ಪ್ರಭೇದದ 70,793 ಪಕ್ಷಿಗಳು 2016ರಲ್ಲಿ 179 ಪ್ರಭೇದದ 15,437 ಪಕ್ಷಿಗಳು, 2017ರಲ್ಲಿ 221 ಪ್ರಭೇದದ 54,057 ಪಕ್ಷಿಗಳು, 2018ರಲ್ಲಿ 187 ಪ್ರಭೇದದ 20,677 ಹಾಗೂ 2019ರಲ್ಲಿ 218ಪ್ರಭೇದದ 45,986 ಪಕ್ಷಿಗಳು ಕಾಣಿಸಿಕೊಂಡಿದ್ದವು. ಆದರೆ, 2020ರಲ್ಲಿ ವಿದೇಶಿ ಅತಿಥಿಗಳ ಆಗಮನ ಗಣನೀಯವಾಗಿ ಇಳಿಮುಖವಾಗಿದೆ. 2019ರಲ್ಲಿ 218 ಪ್ರಭೇದ ಪಕ್ಷಿಗಳು ಕಾಣಿಸಿಕೊಂಡಿದ್ದರೆ, 2020ರಲ್ಲಿ 200ಕ್ಕೂ ಕಡಿಮೆ ಪ್ರಭೇದಗಳಷ್ಟೇ ಪತ್ತೆಯಾಗಿದ್ದವು. ಈ ಬಾರಿ ಉತ್ತಮ ಮಳೆಯ ಪರಿಣಾಮ ಹೆಚ್ಚಿನ ಹಕ್ಕಿಗಳು ಆಗಮಿಸುವ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಪಕ್ಷಿ ತಜ್ಞರು.
ಪೆಲಿಕಾನ್ ಪಕ್ಷಿಗಳಿಗೆ ಜಿಯೋ ಟ್ಯಾಗ್!
ಮೈಸೂರು: ಸಮಶಿತೋಷ್ಣ ವಲಯದಲ್ಲಿ ಹೆಚ್ಚಾಗಿ ಕಂಡುಬರುವ ಪೆಲಿಕಾನ್ ಪಕ್ಷಿಗಳು ಇತ್ತೀಚಿನ ವರ್ಷಗಳಲ್ಲಿ ಮೃತಪಡುತ್ತಿದ್ದು, ಇವುಗಳ ಚಲನವಲನಗಳನ್ನು ಗಮನದಲ್ಲಿಡಲು ಶೀಘ್ರವೇ ಜಿಯೋ ಟ್ಯಾಗ್ ಅಳವಡಿಸಲು ಭಾರತೀಯ ವನ್ಯಜೀವಿ ಸಂಸ್ಥೆ ಮುಂದಾಗಿದೆ.
ಪ್ರತಿ ವರ್ಷವೂ ರಾಜ್ಯದ ವಿವಿಧ ಭಾಗಗಳಿಗೆ ವಲಸೆ ಬರುವ ಸ್ಪಾಟ್ ಬಿಲ್ಲೆಡ್ ಡಕ್ (ಪೆಲಿಕಾನ್) ಪಕ್ಷಿಗಳಲ್ಲಿ 8 ರಿಂದ 10 ಪಕ್ಷಿಗಳು ಮೃತಪಡುತ್ತಿದ್ದು, ಇದನ್ನು ತಡೆಯುವ ಸಲುವಾಗಿ ಜಿಯೋ ಟ್ಯಾಗ್ ಅಳವಡಿಸಲು ಭಾರತೀಯ ವನ್ಯಜೀವಿ ಸಂಸ್ಥೆ ಸಂಶೋಧನೆ ನಡೆಸಿದೆ.
ರಾಜ್ಯ ಸರ್ಕಾರದಿಂದ ಇದಕ್ಕೆ ಉತ್ತೇಜನ ದೊರೆತಿದ್ದು, ಡಿಸೆಂಬರ್ ಅಂತ್ಯದ ವೇಳೆ ಅಥವಾ ಜನವರಿ ಮೊದಲ ವಾರದಲ್ಲಿ ಪೆಲಿಕಾನ್ ಪಕ್ಷಿಗೆ ಜಿಯೋ ಟ್ಯಾಗ್ ಅಳವಡಿಸುವ ಕಾರ್ಯ ನಡೆಯಲಿದೆ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಸಿಎಫ್ ಕರಿಕಾಳನ್ ತಿಳಿಸಿದ್ದಾರೆ.
“ನಂಜನಗೂಡಿನ ಕಳಲೆ ಕೆರೆಯಲ್ಲಿ 20ಕ್ಕೂ ಹೆಚ್ಚು ಬಾರ್ ಹೆಡ್ಡೆಡ್ ಗೂಸ್ ಪಕ್ಷಿಗಳು ಕಾಣಿಸಿಕೊಂಡಿವೆ. ಈ ಭಾಗದಲ್ಲಿ ಇನ್ನೂ ಭತ್ತ ಕಟಾವು ಆಗದ ಹಿನ್ನೆಲೆ ಹಾಗೂ ವಾತಾವರಣ ಬದಲಾವಣೆಯಾಗಿ ರುವುದರಿಂದ ಹದಿನಾರು ಮತ್ತು ಕಳಲೆ ಕೆರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಈ ಪಕ್ಷಿಗಳು ಕಾಣಿಸಿಕೊಳ್ಳುತ್ತಿಲ್ಲ. 15 ದಿನಗಳ ಬಳಿಕ ಮತ್ತಷ್ಟು ಪ್ರಭೇದದ ಪಕ್ಷಿಗಳು ಆಗಮಿಸಲಿವೆ.”
– ರವೀಶ್, ಪಕ್ಷಿ ವೀಕ್ಷಕರು ಹದಿನಾರು ಗ್ರಾಮ.
“ಈ ಅಪರೂಪದ ಜೀವಕೋಟಿಗಳ ಬದುಕು ವಿಸ್ಮಯ. ಮಾನವನ ಉಗಮಕ್ಕಿಂತ ಹಿಂದಿನಿಂದಲೂ ಸಾವಿರಾರೂ ಕಿ.ಮೀ. ದೂರ ಕ್ರಮಿಸಿ ಹಾರುತ್ತಾ ಜನರ ಪಾಲಿಗೆ ಸಂಸ್ಕೃತಿಯ ಭಾಗವಾಗಿರುವ ಈ ಹಕ್ಕಿಗಳ ಬದುಕು ನಿಜಕ್ಕೂ ಕುತೂಹಲಕಾರಿ. ಇವುಗಳ ಬದುಕಿಗೆ ಪೂರಕವಾದ ಜೌಗು ಪ್ರದೇಶವನ್ನು ಧ್ವಂಸಗೊಳಿಸುತ್ತಿರುವುದು ಹಾಗೂ ನಿರಂತರ ಬೇಟೆ ಅವುಗಳ ಉಳಿವಿಗೆ ಮಾರಕವಾಗಿದೆ. ಮನುಷ್ಯ ಮನುಷ್ಯನಾಗುವವರೆಗೆ ಅವುಗಳ ಉಳಿವು ಡೋಲಾಯಮಾನವಾಗಿದೆ.”
– ಕೃಪಾಕರ ಸೇನಾನಿ, ವನ್ಯಜೀವಿ ತಜ್ಞರು.
– ಸತೀಶ್ ದೇಪುರ